ಖಾಸಗಿ ಶಾಲೆ ಶುಲ್ಕ ಸಂಪೂರ್ಣ ಮನ್ನಾ ಮಾಡಿಸಿ

ಬಹುಜನ ಸಮಾಜ ಪಕ್ಷದ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ

0

Gummata Nagari : Bijapur News

ಬಿಜಾಪುರ : ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ತೊರವಿ ಮಾತನಾಡಿ, ಕೇಂದ್ರ ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದ ದೇಶಾದ್ಯಂತ 16 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸಂಘಟಿತ ವಲಯದ 2 ಕೋಟಿಗೂ ಹೆಚ್ಚು ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸಮಿಕ್ಷೆಗಳು ಹೇಳಿವೆ. ಒಟ್ಟಾರೆಯಾಗಿ ಸುಮಾರು 18 ಕೋಟಿಗೂ ಹೆಚ್ಚು ಜನರು ದೇಶಾದ್ಯಂತ ಉದ್ಯೋಗ ಕಳೆದುಕೊಂಡು ಬಡತನ ಮತ್ತು ನಿರುದ್ಯೋಗಕ್ಕೆ ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಆನ್‌ಲೌನ್ ಪಾಠ ಬೋಧಿಸುತ್ತಿರುವುದರಿಂದ ಬಡವರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಲಾಗಿದೆ ನೋವು ಅನುಭವಿಸುತ್ತಿದ್ದಾರೆ ಎಂದರು.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಪೋಷಕರ ನೆರವಿಗೆ ನಿಲ್ಲುವುದು ಸಮಾಜಿಕ ಮತ್ತು ನೈತಿಕ ಹೊಣೆಯಾಗಿದೆ. ಆದ್ದರಿಂದ ಖಾಸಗಿ ಮತ್ತು ಸರ್ಕಾರಿ ಶಾಲಾ ಶುಲ್ಕವನ್ನು ಮನ್ನಾ ಮಾಡುವುದರ ಮುಖಾಂತರ ಜನರ ನೆರವಿಗೆ ನಿಲ್ಲಬೇಕಾಗಿದೆ ಎಂದರು. ಅದೇ ತೆರನಾಗಿ ಈಗಾಗಲೇ ಸಾಲ ಮಾಡಿ ಇಲ್ಲವೆ ತಮ್ಮ ಒಡವೆಗಳನ್ನು ಅಡವಿಟ್ಟು ಶಾಲಾ ಶುಲ್ಕಗಳನ್ನು ಬರಿಸಿರುವ ಪೋಷಕರಿಗೆ ವಾಪಸ್ಸು ಕೊಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಡಾ.ದಸ್ತಗೀರ ಮುಲ್ಲಾ, ಅಕ್ಬರ್ ಮುಲ್ಲಾ, ಯಶವಂತ ಪೂಜಾರಿ, ಶಬ್ಬೀರ ಮುಲ್ಲಾ, ಎಸ್.ಎಸ್.ಚೂರಿ, ಕಾಶಿನಾಥ ದೊಡ್ಡಮನಿ, ನಿತೀನ ತೊರವಿ, ಬಸವರಾಜ ಕಾಂಬಳೆ, ಸದಾಶಿವ ಕುಬಕಡ್ಡಿ, ಮಲ್ಲಿಕಾರ್ಜುನ ನಾಯ್ಕೋಡಿ, ಜಿ.ಬಿ. ಡವಳಗಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.