ಪೌರ ಕಾರ್ಮಿಕರ ಪ್ರತಿಭಟನೆ

ವೇತನ ಪಾವತಿಗೆ ವಿಳಂಬ ನೀತಿಗೆ ಖಂಡನೆ

0

ಕೊರೊನಾ ವಾರಿಯರ್ಸ್ ಎಂದು ಪೌರಕಾರ್ಮಿಕರನ್ನು ಎಲ್ಲರೂ ಗೌರವಿಸಿದ್ದಾರೆ, ಅವರ ಸೇವೆಗೆ ಬೆಲೆ ಕಟ್ಟಲು ಯಾರಿಗೂ ಸಾಧ್ಯವಿಲ್ಲ, ಆದರೆ ಅವರಿಗೆ ವೇತನವೂ ನೀಡದೇ ಇರುವುದು ಎಷ್ಟು ಸರಿ? ಕೂಡಲೇ ಮಹಾನಗರ ಪಾಲಿಕೆ ಪೌರಕಾರ್ಮಿಕರ ವೇತನ ಪಾವತಿ ಮಾಡುವ ಮೂಲಕ ಅವರು ಶ್ರಮಕ್ಕೆ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ವೇತನ ಪಾವತಿಗೆ ಇನ್ನೂ ವಿಳಂಬ ನೀತಿ ಅನುಸರಿಸಿದರೆ ಎಲ್ಲ ಹೊರಗುತ್ತಿಗೆ ಪೌರಕಾರ್ಮಿಕರು ಮುಷ್ಕರಕ್ಕೆ ಅಣಿಯಾಗಬೇಕಾಗುತ್ತದೆ.
-ಲಕ್ಷ್ಮಣ ಹಂದ್ರಾಳ

Gummata Nagari : Bijapur News

ಬಿಜಾಪುರ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಆರು ತಿಂಗಳು ವೇತನ ಪಾವತಿಯಾಗಿಲ್ಲ, ವೇತನ ಪಾವತಿಗೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮುನ್ಸಿಫಲ್ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪೌರಕಾರ್ಮಿಕರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ಧುರೀಣ ಲಕ್ಷ್ಮಣ ಹಂದ್ರಾಳ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಕಳೆದ ಆರು ತಿಂಗಳುಗಳಿಂದ ವೇತನ ಪಾವತಿಯಾಗದೇ ಅವರ ಜೀವನ ದುಸ್ತರವಾಗಿದೆ. ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿಯೂ ಈ ಪೌರಕಾರ್ಮಿಕರು ತಮ್ಮ ಜೀವನ ಒತ್ತೆ ಇಟ್ಟು ಸ್ವಚ್ಛತಾ ಕಾರ್ಯ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಅನೇಕ ರೀತಿಯ ಪೂರಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೊರೊನಾ ವಾರಿಯರ್ಸ್ ಆಗಿ ಸಮರ್ಥವಾದ ಕಾರ್ಯನಿರ್ವಹಣೆ ಮಾಡಿದ್ದಾರೆ, ಈ ಕಾರ್ಮಿಕರಿಗೆ ಗೌರವ ಸಲ್ಲಿಸಬೇಕಾದ ಸರ್ಕಾರ ಅವರಿಗೆ ಆರು ತಿಂಗಳುಗಳವರೆಗೆ ವೇತನ ನೀಡದೇ ಸತಾಯಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಎಲ್ಲ ಪೌರಕಾರ್ಮಿಕರು ಅತ್ಯಂತ ಕಡುಬಡತನ ಕುಟುಂಬದಿಂದ ಬಂದವರು, ಬರುವ ಕಡಿಮೆ ಗೌರವ ಧನವನ್ನೇ ನಂಬಿ ಅನೇಕರು ಕಷ್ಟದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ, ಈಗ ನ್ಯಾಯಯುತವಾಗಿ ಬೆವರು ಹರಿಸಿ ದುಡಿದರೂ ಅವರಿಗೆ ವೇತನವೂ ದೊರಕದೇ ಹೋದರೆ ಈ ಎಲ್ಲ ಪೌರಕಾರ್ಮಿಕರ ಗತಿಯೇನು? ಅವರ ಕುಟುಂಬ ಸದಸ್ಯರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಬೇಕೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಇನ್ನೊಂದೆಡೆ ಈ ಎಲ್ಲ ಪೌರಕಾರ್ಮಿಕರಿಗೆ ಅನೇಕ ರೀತಿಯ ಸೌಲಭ್ಯಗಳಿಂದಲೂ ವಂಚಿತರನ್ನಾಗಿಸಲಾಗಿದೆ. ಕಳೆದ ಆರು ತಿಂಗಳುಗಳಿಂದ ಈ ನೌಕರರು ವೇತನವಿಲ್ಲದೇ ಆರ್ಥಿಕವಾಗಿ ಹೊರೆ ಅನುಭವಿಸುವಂತಾಗಿದೆ ಎಂದು ಹಂದ್ರಾಳ ಪೌರಕಾರ್ಮಿಕ ಸಮಸ್ಯೆಯನ್ನು ವಿವರಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರಿ ಮಾತನಾಡಿ, ಕೋವಿಡ್ ಮಹಾಮಾರಿಯಂತಹ ಸ್ಥಿತಿಯಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ನಗರದ ಸ್ವಚ್ಛತೆಯನ್ನು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದ ಪೌರಕಾರ್ಮಿಕರಿಗೆ ಶೀಘ್ರವಾಗಿ ವೇತನ ಪಾವತಿ ಮಾಡಬೇಕು. ಅವರಿಗೂ ಕುಟುಂಬ, ಮನೆ ಮಕ್ಕಳಿವೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸುರೇಖಾ ರಜಪೂತ ಮಾತನಾಡಿದರು. ವಿಜಯಕುಮಾರ ಬೆಳ್ಳವಂಡಿಗಿ, ರಫೀಕ ಲಕ್ಷರಿ, ದಯಾನಂದ ಅಲಿಯಾಬಾದ, ಗುರಪ್ಪ ದಲಾಲ, ಪೀರಪ್ಪ ಚಲವಾದಿ, ಸದಾಶಿವ ಚಂಚಲಕರ, ರವಿ ಲೋಣಾರೆ, ಸುಶೀಲಾ ಕಂಬಳಿ, ಸೌಮ್ಯ ಮದಭಾವಿ, ಮನೋಜ ಭೋವಿ, ಮನೋಹರ ಚವ್ಹಾಣ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.