ಕರ್ನಾಟಕ-ಮಹಾ ಸಂಪರ್ಕ ಸ್ಥಗಿತ

ಭೀಮಾತೀರದ ಸೇತುವೆಗಳು ಮುಳುಗಡೆ

0

Gummata Nagari : Bijapur News

ಚಡಚಣ : ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಮಹಾರಾಷ್ಟ್ರ ಉಜನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಭೀಮಾನದಿಗೆ ನೀರು ಹರಿಬಿಡಲಾಗುತ್ತಿದ್ದು, ಭೀಮಾತೀರದ ಸೇತುವೆಗಳು ತುಂಬಿ ಸಂಪೂರ್ಣ ಮುಳುಗಡೆಯಾಗುವುದಲ್ಲದೆ ಭೀಮಾತೀರದ ಹೊಲಗಳಿಗೆ ನೀರು ಹೊಕ್ಕಿ ಮುಳಗಡೆಯಾಗುವ ಪ್ರವಾಹ ಪರಿಸ್ಥಿತಿಯಲ್ಲಿ ರೈತರಿದ್ದಾರೆ.

ಚಡಚಣ ತಾಲೂಕಿನ ಉಮರಜ, ಶಿರನಾಳ ಹಾಗೂ ಉಮರಾಣಿ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಗೊಂಡು ಮಹಾರಾಷ್ಟ್ರದ ಸಾದೇಪುರ ಹಾಗೂ ಭಂಡರಕವಟೆ ಸೇರಿದಂತೆ ಹಲವು ಗ್ರಾಮಗಳ ಜನರ ಸಂಪರ್ಕ ಕಡಿತಗೊಂಡಿದೆ.

ದಿನದಿಂದ ದಿನವೂ ಭೀಮಾನದಿಗೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಭೀಮಾತೀರದ ಜನರಲ್ಲಿ ಹಿಂದಿನ ವರ್ಷ ಸೃಷ್ಠಿಸಿದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಮನೆಮಾಡಿದೆ.

ಸದ್ಯ ಮಹಾರಷ್ಟ್ರದ ಉಜನಿ ಜಲಾಶಯದಿಂದ ಭೀಮೆಗೆ ಮತ್ತೆ 1ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕರ್ನಾಟಕ ಗಡಿಭಾಗದಲ್ಲಿರುವ ಚಡಚಣ ತಾಲೂಕಿನ ಸುಮಾರು 42 ಗ್ರಾಮಗಳಲ್ಲೂ ಸತತವಾಗಿ 24 ಗಂಟೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದಂತು ಸತ್ಯ.

ಅಧಿಕಾರಿಗಳ ಪರಿಶೀಲನೆ: ತಾಲೂಕಿನ ಭೀಮಾನದಿ ಪಾತ್ರದ ಗ್ರಾಮಗಳಿಗೆ ಇಚಿಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ ಹಾಗೂ ಚಡಚಣ ತಹಶೀಲದಾರ ಸುರೇಶ ಚವಲರ, ಉಪತಹಸೀಲ್ದಾರ್ ಆರ್.ಎಸ್.ಚೌಹಾಣ್, ಚಡಚಣ ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ ಹಾಗೂ ಗ್ರಾಮ ಲೆಕ್ಕಾಧಿಕಾರಿ ತಾಲೂಕಿನ ಭೀಮಾನದಿಯ ಪ್ರವಾಹದಿಂದ ಹಾನಿ ಸಂಭವಿಸುವ ಸಾಧ್ಯತೆವಿರುವ ಗ್ರಾಮಗಳಾದ ಹೊಳೆಸಂಖ, ಉಮರಾಣಿ ಹಾಗೂ ಟಾಕಳಿ ಗ್ರಾಮಗಳಿಗೆ ಭೇಟಿ ನೀಡಿ, ಪರಿಶಿಲನೆ ನಡೆಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಭೀಮಾನದಿ ತೀರದ ರೈತರಿಗೆ ತಮ್ಮ ತಮ್ಮ ಮೋಟಾರಗಳನ್ನು ತೆಗೆಯುವಂತೆ ಹಾಗೂ ನದಿತೀರಕ್ಕೆ ತೆರಳದಂತೆ ಜಾಗ್ರತೆವಹಿಸಬೇಕೆಂದು ತಿಳಿಸಿದರು.

ಇನ್ನೂ ಮೂರ್ನಾಲ್ಕು ದಿನಗಳ ಕಾಲ ಜಿಲ್ಲಾದ್ಯಂತ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಭೀಮಾನದಿಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ರೈತರಿಗೆತಿಳಿಸಿದರು.

ಧರೆಗುರಳಿದ ಗಿಡ-ಮರಗಳು: ಎರಡು ದಿನದಿಂದ ಎರಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಹೊಳೆಸಂಖ ಗ್ರಾಮದಲ್ಲಿ ಮನೆಗೋಡೆ ಕುಸಿದುಬಿದ್ದ ಘಟನೆ ನಡೆದಿದೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ತಾಲ್ಲೂಕಿನ ಹಲವೆಡೆ ಮರ-ಗಿಡಗಳು ಧರೆಗುರಳಿವೆ ಎಂದು ತಿಳಿದುಬಂದಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.