ದಾರಿ ಸಮಸ್ಯೆ ಪರಿಹರಿಸಲು ಒತ್ತಾಯ

0

Gummata Nagari    :     Vijayapura News

ಬಿಜಾಪುರ : ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಎದುರಾಗಿದ್ದು ಕೂಡಲೇ ಈ ಸಮಸ್ಯೆ ಪರಿಹರಿಸಿ ರೈತರಿಗೆ ನ್ಯಾಯ ಒದಗಿಸುವುದು ಹಾಗೂ ಎಲ್ಲೆಡೆ ರೈತರು ಎದುರಿಸುತ್ತಿರುವ ದಾರಿಯ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಮೀನುಗಳಿಗೆ ಹೋಗಲು ಸೂಕ್ತ ದಾರಿ ಇಲ್ಲದೇ ರೈತರು ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೂ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರ ದಾರಿಮಾಡಿ ಕೊಡುವ ಅಧಿಕಾರ ಕೊಡುತ್ತಿಲ್ಲ. ಶೀಘ್ರದಲ್ಲಿ ದಾರಿ ಸಮಸ್ಯೆ ಬಗೆ ಹರಿಸಬೇಕು. ಇಲ್ಲದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದು ಕೇವಲ ಒಂದು ಹಳ್ಳಿಯ ಸಮಸ್ಯೆಯಲ್ಲ ರಾಜ್ಯಾದ್ಯಂತ ರೈತರಿಗೆ ದಾರಿ ಸಮಸ್ಯೆ ಕಾಡುತ್ತಿದೆ. ದಿನ ನಿತ್ಯ ದಾರಿ ಸಮಸ್ಯೆ ಇರುವ ರೈತರು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸುತ್ತಾರೆ. ದಾರಿ ಸಮಸ್ಯೆ ಜಿಲ್ಲಾಡಳಿತಕ್ಕೂ ಕೂಡ ತಲೆ ನೋವಾಗಿದೆ. ಈ ವಿಷಯವಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಈ ಸಮಸ್ಯೆ ಸರ್ಕಾರ ಬಗೆ ಹರಿಸಲು ಮೀನಾಮೇಷಮಾಡುತ್ತಿದೆ. ರೈತರಿಗೆ ವಿರೋಧಿಯಾದ ಕಾನೂನು ತಿದ್ದುಪಡೆ ಮಾಡಲು ಸರ್ಕಾರಕ್ಕೆ ಸಮಸ್ಯೆ ಇಲ್ಲ. ಆದರೆ ಗಂಭೀರವಾಗಿ ಎದುರಿಸುತ್ತಿರುವ ದಾರಿ ಸಮಸ್ಯೆ ಬಗೆ ಹರಿಸಲು ಕಾನೂನು ತಿದ್ದುಪಡೆ ಮಾಡಲು ಏಕೆ ಹಿಂದೆಟು ಹಾಕುತ್ತಿದೆ ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದರು.

ಜಿಲ್ಲೆಯ ಎಲ್ಲ ಶಾಸಕರಿಗೂ ಈ ವಿಷಯ ಮನವರಿಕೆ ಇದ್ದರೂ ಅವರು ಕೂಡ ಚಕಾರ ಎತ್ತುತ್ತಿಲ್ಲ. ಒಟ್ಟಾರೆ ದಾರಿ ಸಮಸ್ಯೆ ಬಗೆ ಹರಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದಂತಿಲ್ಲ. ರೈತರು ದಿನ ನಿತ್ಯ ಬಡಿದಾಡಿಕೊಂಡು ಇದ್ದರೆ ಇವರಿಗೆ ಚೆನ್ನಾಗಿ ಕಾಣುತ್ತಿದೆಯೇ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ರೈತರು ಬೇಕು ಇಂತಹ ಸಂದರ್ಭದಲ್ಲಿ ರೈತರು ಕಣ್ಣಿಗೆ ಕಾಣುತ್ತಿಲ್ಲ. ಇದೇ ರೀತಿ ಸರ್ಕಾರ ದಾರಿ ಸಮಸ್ಯೆ ಬಗೆ ಹರಿಸಲು ಮೊಂಡುತನ ಬಿಡಬೇಕು, ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ಎಲ್ಲ ಶಾಸಕ ಮನೆ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ,

ದಾರಿ ಇಲ್ಲದೆ ತೊಂದರೆ ಪಡುತ್ತಿರುವ ಹೂವಿನ ಹಿಪ್ಪರಗಿ ಗ್ರಾಮದ ರೈತರಾದ ಕಲ್ಲಪ್ಪ ಶಿವಯೋಗಿ, ಸಿದ್ಧಾರೂಡ ಶಿವಯೋಗಿ ತಮ್ಮ ಅಳಲು ತೋಡಿಕೊಂಡರು.

ವಿವಿಧ ಸಂಘಟನೆ ಪ್ರಮುಖರಾದ ಶೇಷರಾವ ಮಾನೆ, ಕೃಷ್ಣಾಜಿ ಕುಲಕರ್ಣಿ, ಸಿದ್ದಲಿಂಗ ಹಿರೇಮಠ, ಈರಪ್ಪ ಕಣಬೂರ, ಎಂ.ಎಂ.ಕಲಾಲ, ಶಿವಪ್ಪ ಮಂಗೊಂಡ, ಕೃಷ್ಣಪ್ಪ ಬಮರಡ್ಡಿ, ಭೀಮು ಲಮಾಣಿ, ತಾವರು ನಾಯಕ, ಬಾಬು ಲಮಾಣಿ, ವಸಂತ ಕುಲಕರ್ಣಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.