ಅತಿವೃಷ್ಠಿ ಘೋಷಿತ ತಾಲೂಕುಗಳಲ್ಲಿ ತಿಕೋಟಾ ತಾಲೂಕು ಸೇರಿಸಿ

ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ರಿಂದ ಮುಖ್ಯಮಂತ್ರಿಗೆ ಮನವಿ

0

Gummata Nagari : Bijapur News

ಬಿಜಾಪುರ : ಅತಿವೃಷ್ಠಿ ಘೋಷಿತ ತಾಲೂಕುಗಳಲ್ಲಿ ತಿಕೋಟಾ ತಾಲೂಕಾ ಕೈಬಿಟ್ಟಿದ್ದು, ಈ ಕೂಡಲೇ ತಿಕೋಟಾನ್ನು ಸಹ ಅತಿವೃಷ್ಠಿ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್‌ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ತಿಕೋಟಾ ತಾಲ್ಲೂಕಿನಲ್ಲಿ 364ಮಿ.ಮಿ ವಾಡಿಕೆ ಮಳೆ ಆಗಬೇಕಾಗಿದ್ದು, ಆದರೆ ದಿ.21ವರೆಗೆ 639ಮಿ.ಮೀ ಮಳೆಯಾಗಿರುತ್ತದೆ. ವಾಡಿಕೆ ಮಳೆಗಿಂತ ಅತೀ ಹೆಚ್ಚು ಮಳೆ ಬಿದ್ದ ಕಾರಣ ಸುಮಾರು 465 ಮನೆಗಳು ಬಿದ್ದಿದ್ದು, 11,745ಹೆಕ್ಟೇರ್ ಕೃಷಿ ಬೆಳೆ, 8114ಹೆಕ್ಟೇರ್ ತೋಟಗಾರಿಕೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿ ರೈತರು ಹಾಗೂ ಸಾರ್ವಜನಿಕರು ತುಂಬಾ ನಷ್ಠ ಅನುಭವಿಸಿರುತ್ತಾರೆ. ಆದ್ದರಿಂದ ತಿಕೋಟಾ ತಾಲ್ಲೂಕನ್ನು ಸಹ ಅತಿವೃಷ್ಠಿ/ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಿಸಿ SDRF/NDR ಈ ಮಾರ್ಗಸೂಚಿ ಪ್ರಕಾರ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು, ಹಾನಿಯ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡಲು ವಿನಂತಿಸುತ್ತೇನೆ ಎಂದಿದ್ದಾರೆ.

ಬಿಜಾಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರ್ಯವ್ಯಾಪ್ತಿಯಲ್ಲಿ ಬರುವ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನಲ್ಲಿ ಸಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯಲ್ಲಿ ಬಿದ್ದಂತಹ ಬಿರುಗಾಳಿ ಸಹಿತ ಮಹಾ-ಮಳೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಡೋಣಿ ನದಿ ಹಾಗೂ ಹಳ್ಳಗಳು ತುಂಬಿ ಹರಿದ ನೀರಿನಿಂದ ಮಹಾರಾಷ್ಟ್ರದ ಗಡಿ ತಾಲ್ಲೂಕಾದ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ ಹಾಗೂ ಇನ್ನಿತರ ಕೃಷಿ ಬೆಳೆಗಳು ಮತ್ತು ಅಪಾರ ಪ್ರಮಾಣದಲ್ಲಿ ಮನೆ ಹಾನಿ, ವಿದ್ಯುತ್ ಕಂಬಗಳು ನೆಲಕಚ್ಚಿ ಟಿ.ಸಿಗಳು ಹಾಳಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುತ್ತದೆ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದು, ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.