ರೈತ ಸಂಘ, ಹಸಿರು ಸೇನೆಯಿಂದ ವಿನೂತನ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. 400 ಕ್ಕೂ ಹೆಚ್ಚು ರೈತರು ಹಸಿರು ಶಾಲು ತೊಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಿಜಾಪುರ ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಎತ್ತಿನಬಂಡಿಗೆ ಪೂಜೆ ನೆರವೇರಿಸುವುದ ಮೂಲಕ ರೈತರ ಮೆರವಣಿಗೆ ಆರಂಭಗೊಂಡಿತು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಮತ್ತು ವಿದ್ಯುತ್ ಖಾಸಗೀಕರಣ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆಯನ್ನು ಆದಷ್ಟು ಬೇಗ ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರ ಸ್ವೀಕಾರ ಮಾಡುವಾಗ ರೈತರ ಹೆಸರು ಹೇಳಿ ಅಧಿಕಾರ ಸ್ವೀಕಾರ ಮಾಡಿದ್ದರು ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಉಂಡ ಮನೆಗೆ ಜಂತಿ ಎನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ರಾಹುಲ ಕುಬಕಡ್ಡಿ ಮಾತನಾಡಿ, ರೈತರನ್ನು ತುಳಿದು ಬದುಕುವ ಕೆಲಸ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ. ನಮ್ಮ ಜೀವ ಇರುವವರೆಗೂ ನಮ್ಮ ರಕ್ತವನ್ನಾದರೂ ಕೊಟ್ಟು ಉಪವಾಸ ಸತ್ಯಾಗ್ರಹವನ್ನು ಕೂಡ ಮಾಡಿ ಎಪಿಎಂಸಿ ಕಾಯ್ದೆ ಭೂ ಸುಧಾರಣೆ ಕಾಯ್ದೆಯನ್ನು ರದ್ದುಪಡಿಸುವ ತನಕ ನಾವು ರೈತರು ನಿಟ್ಟಿಸಿರು ಬಿಡುವುದಿಲ್ಲ ಎಂದು ಗುಡುಗಿದರು.

ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಆಳುವ ಸರ್ಕಾರಗಳು ಅನ್ನದಾತನ ಹಿತವನ್ನು ಕಡೆಗಣಿಸಿವೆ, ಜನಸಾಮಾನ್ಯರ ನೆಮ್ಮದಿಯನ್ನು ಕಸಿದುಕೊಂಡಿವೆ. ಎಲ್ಲ ವಲಯಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿ ಎಲ್ಲರ ಹಿತರಕ್ಷಣೆಯನ್ನು ಹಾಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರಗೌಡ ಪಾಟೀಲ (ಸಿಂದಗಿ) ಮಾತನಾಡಿದರು. ಬಾಳಾಸಾಹೇಬ ಮ. ಇಂಡಿ, ಜಿತೇಂದ್ರ ಕಾಂಬಳೆ, ಸಿದ್ದಣ್ಣ ಹಿಟ್ನಳ್ಳಿ, ಫಯಾಜ ಕಲಾದಗಿ, ಎಸ್.ಎಸ್. ಪಾಟೀಲ, ಚಂದ್ರಶೇಖರ ಕುಮಟಳ್ಳಿ, ಗಂಗಾಧರ ಪಾಟೀಲ, ಶಿವು ಕಂಬಾರ, ಲಕ್ಷ್ಮಣ ಹಿರೇಮಠ, ಶರಣು ಕೈರವ, ಮಹೇಶ ಆಲೂರ, ಅಂಬಣ್ಣ ನಾಟೀಕಾರ, ಸಾಹೇಬಗೌಡ ಬಿರಾದಾರ, ಡಾ.ಎಂ.ಆರ್.ಗುರಿಕಾರ, ಮಹಾದೇವಿ ತಳಕೇರಿ, ಆಶಾ ಬಾಗವಾನ, ರಮೇಶ ವಾಲೀಕಾರ, ಪ್ರೇಮಕುಮಾರ ಚಲವಾದಿ, ದಸ್ತಗೀರ ಮುಲ್ಲಾ, ಶರಣಪ್ಪ ಶೇಷಗಿರಿ, ಶರಣಯ್ಯ ಸಿ.ಹಿರೇಮಠ, ಪರಶುರಾಮ ಬಿಜಾಪುರ, ಯಮನಪ್ಪ ಬೂದಿಹಾಳ, ರವಿ ರಾಠೋಡ, ಶ್ರೀಶೈಲ ಕುಮಸಗಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.