ಮಳೆ ಮುನಿಸಿಗೆ ಜನರು ತತ್ತರ

ದೇವರಹಿಪ್ಪರಗಿ ತಾಲೂಕಿನಲ್ಲಿ ಮನೆಗಳು ನೆಲಸಮ, ಕೊಚ್ಚಿಕೊಂಡು ಹೋದ ರೈತ ಶವವಾಗಿ ಪತ್ತೆ, ನೆಲಕಚ್ಚಿದ ಬೆಳೆ, ಲಕ್ಷಾಂತರ ಹಾನಿ

0

Gummata Nagari : Bijapur News

ದೇವರಹಿಪ್ಪರಗಿ : ತಾಲೂಕಿನಾದ್ಯಂತ ಮಳೆರಾಯನ ರುದ್ರನರ್ತನ ಮುಂದುವರೆದಿದ್ದು, ಮಳೆ ನಿಂತರೂ ಮಳೆಯ ಕಾಟ ಮಾತ್ರ ನಿಂತಿಲ್ಲ. ಮಳೆಯಿಂದ ನೂರಾರು ಮನೆಗಳು ನೆಲಸಮಗೊಂಡು ರೈತನೋರ್ವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಶವವಾಗಿ ಸಿಕ್ಕ ಘಟನೆ ಸಂಭವಿಸಿದೆ. ಹಲವಾರು ಕುರಿಗಳು ಸಾವನ್ನಪ್ಪಿದ್ದು, ಮಳೆಯ ಅವಾಂತರಕ್ಕೆ ನೆಲಕಚ್ಚಿದ ಬೆಳೆಯಿಂದ ಲಕ್ಷಾಂತರ ರೂ.ನಷ್ಟವಾಗಿದೆ. ಆತಂಕದಲ್ಲಿರುವ ಅನ್ನದಾತ ಮುಸುಲಧಾರೆಯ ಮುನಿಸಿಗೆ ತತ್ತರಿಸಿ ಹೋಗಿದ್ದಾನೆ.

ಗುರುವಾರ ಮುಳಸಾವಳಗಿ ಗ್ರಾಮದ ನಿವಾಸಿ ಶಿವಪುತ್ರ ಹಣಮಂತ ನಾಟೀಕಾರ ಬೆಳಿಗ್ಗೆ ತಮ್ಮ ಜಮೀನಿಗೆ ಹೋಗುವಾಗ ರಭಸದಿಂದ ಹರಿಯುತ್ತಿರುವ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ ಬಿ ಎಸ್ ಕಡಕಬಾವಿ ಕೊಚ್ಚಿಹೋದ ವ್ಯಕ್ತಿಯನ್ನು ಹುಡುಕಲು ಅಗ್ನಿಶಾಮಕ ದಳದವರನ್ನು ಕರೆಯಿಸಿ ಸುಮಾರು 7 ಗಂಟೆಗಳ ಕಾಲ ಸತತ ನೀರಲ್ಲಿ ಹುಡುಕಾಡಿದಾಗ ನೀರಿನಲ್ಲಿ ಕೊಚ್ಚಿ ಹೋದ ಶಿವಪುತ್ರ ನಾಟೀಕಾರ ಸಾವನ್ನಪ್ಪಿದ್ದು, ಶವ ಹೊರತೆಗೆಯಲಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಇಂಡಿ ಎಸಿ ರಾಹುಲ್ ಸಿಂದೆ, ಪಿಎಸೈ ರವಿ ಯಡಣ್ಣವರ ಮತ್ತೀತರರು ಉಪಸ್ಥಿತರಿದ್ದು, ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

ಕ್ಷೇತ್ರದಾದ್ಯಂತ ಮಳೆಯ ಅವಾಂತರ ಅಧಿಕವಾಗಿದ್ದು, ದಿನದ 24 ಗಂಟೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರಾಶ್ರಿತರಿಗೆ ವಸತಿ ವ್ಯವಸ್ಥೆ, ಸಂತ್ರಸ್ತರಿಗೆ ನೆರವಾಗುವಂತೆ ತಿಳಿಸಲಾಗಿದೆ. ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರಬೇಕು.                                                    -ಸೋಮನಗೌಡ ಪಾಟೀಲ ಸಾಸನೂರ, ಶಾಸಕರು.

ಚಿಕ್ಕರೂಗಿಯಲ್ಲಿ ಮನೆಗಳಿಗೆ ನುಗ್ಗಿದ ನೀರು:

ತಾಲೂಕಿನ ಚಿಕ್ಕರೂಗಿ ಗ್ರಾಮದ ದಲಿತ ಕುಟುಂಬಗಳು ವಾಸಿಸುತ್ತಿದ್ದ ನಾಲ್ಕನೇ ವಾರ್ಡಿನಲ್ಲಿ ಏಕಾಏಕಿ ಹಳ್ಳದ ನೀರು ಊರೊಳಗೆ ಹೊಕ್ಕು ಹೈರಾಣಾಗಿಸಿದೆ. ಹತ್ತಾರು ಮನೆಗಳಿಗೆ ನುಗ್ಗಿದ ನೀರಿನಿಂದ ರಾತ್ರಿಯಿಡಿ ಪರದಾಡುವಂತಾಗಿತ್ತು. ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಘಟನಾ ಸ್ಥಳಕ್ಕೆ ಸಂಬAಧಿಸಿದ ಅಧಿಕಾರಿಗಳು ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ಸಹೋಧರ ಸುರೇಶಗೌಡ ಪಾಟೀಲ ಸಾಸನೂರ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಹಳ್ಳದ ಪಕ್ಕದಲ್ಲಿರುವ ಮನೆಗಳ ಸ್ಥಳಾಂತರಕ್ಕೆ ಸಂತ್ರಸ್ತ ಕುಟುಂಬಗಳು ಆಗ್ರಹಿಸಿವೆ.

ಅದರಂತೆ ಮಳೆಯ ಹೊಡೆತಕ್ಕೆ ತಾಲೂಕಿನ ವಿವಿಧ ಬಾಗದಲ್ಲಿ ಮನೆಗಳು ನೆಲಸಮವಾಗಿದ್ದು, ಜನಸಮಾನ್ಯರು ಕಂಗಾಲಾಗಿದ್ದಾರೆ. ಬೆಳೆಗಳೆಲ್ಲ ನೀರಲ್ಲಿ ನಿಂತು ಲಕ್ಷಾಂತರ ರೂ. ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮಮ್ಮಲ ಮರಗುವಂತಾಗಿದೆ.

ತಾಲೂಕಿನಾದ್ಯಂತ ಇಲ್ಲಿಯವರೆಗೆ ಮಳೆಯಿಂದ ಸುಮಾರು 290 ಮನೆಗಳು ಹಾನಿಯಾಗಿದ್ದು, ನಮ್ಮ ಸಿಬ್ಬಂಧಿಗಳಿಂದ ಸಮೀಕ್ಷೆ ಕಾರ್ಯ ಮಾಡಿಸಲಾಗುತ್ತಿದೆ. ಗುರುವಾರ ಚಿಕ್ಕರೂಗಿ, ಕಡ್ಲೇವಾಡ ಪಿಸಿ ಮುಳಸಾವಳಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗುವುದು.                                                                                                                                                                    -ಬಿ.ಎಸ್.ಕಡಕಬಾವಿ, ತಹಸೀಲ್ದಾರ, ದೇವರಹಿಪ್ಪರಗಿ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.