ಸರಕಾರ ನಿಗದಿಪಡಿಸಿದ ದರವನ್ನೇ ಪಡೆಯಲಾಗುತ್ತಿದೆ

ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆಂದು ಆರೋಪ ಮಾಡುವುದು ನೋವಿನ ಸಂಗತಿ: ಡಾ. ಅಗರವಾಲ್

0

Gummata Nagari : Bijapur News

ಬಿಜಾಪುರ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದ ದರವನ್ನೇ ತೆಗೆದುಕೊಳ್ಳಲಾಗುತ್ತಿದೆ, ಆದರೂ ಕೋವಿಡ್ ಸಂಕಷ್ಟದಲ್ಲಿ ಖಾಸಗಿ ಆಸ್ಪತ್ರೆಗಳು ಪ್ರಾಮಾಣಿಕ ಸೇವೆ ಮಾಡುತ್ತಿದ್ದರು ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆಂದು ಕೆಲ ವ್ಯಕ್ತಿಗಳು ಆರೋಪ ಮಾಡುವುದು ನೋವಿನ ಸಂಗತಿ ಎಂದು ಕೆಪಿಎಂಪಿಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನೀತಿನ್ ಅಗರವಾಲ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೋವಿಡ್ ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿದ್ದಾರೆ. ಆದರೂ ಕೆಲ ವ್ಯಕ್ತಿಗಳು ಹಣ ಮಾಡುವುದಕ್ಕಾಗಿ ಆಸ್ಪತ್ರೆಗಳ ವಿರುದ್ಧ ಆರೋಪ ಮಾಡಲು ಮುಂದಾಗಿದ್ದಾರೆ. ನಾವೂ ಕೋವಿಡ್ ಸಂಕಷ್ಟದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದರು ಸುಳ್ಳು ಆರೋಪ ಮಾಡುವುದು ನೋವಿನ ಸಂಗತಿ ಎಂದರು.

ಜಿಲ್ಲಾಡಳಿತವು ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ 19 ಸಾಂಕ್ರಾಮಿಕ ರೋಗ ನಿರ್ವಹಣೆ ಜವಾಬ್ದಾರಿಯನ್ನು ಜೂನ್ 25 ರಂದು ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಗಳ ಅನುಸಾರ ಚಿಕಿತ್ಸೆ ಕೊಡಲು ಖಾಸಗಿ ಆಸ್ಪತ್ರೆಗಳು ಕೋವಿಡ್ 19 ರೋಗಿಗಳ ನಿರ್ವಹಣೆಯ ಆದೇಶಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿದ ಮೊಟ್ಟ ಮೊದಲ ಜಿಲ್ಲೆಯಾಗಿದೆ. ಖಾಸಗಿ ಆಸ್ಪತ್ರೆಯ ಮೇಲ್ವಿಚಾರಣೆ ಮಾಡಲು ನೇಮಿಸಿದ ಸರ್ಕಾರದ ಅಧಿಕಾರಿಗಳು ಖಾಸಗಿ ವೈದ್ಯರ ಕೆಲಸಗಳನ್ನು ಪರಿಶೀಲಿಸಲು ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದಾರೆ. ಸ್ವ-ಇಚ್ಛೆಯಿಂದ ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್ 19 ರೋಗಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆಂದು ಬೆಂಗಳೂರು, ಕಲಬುರ್ಗಿ, ಬಾಗಲಕೋಟೆ, ಬೆಳಗಾವಿ, ಮಾತ್ರವಲ್ಲ ಮಹಾರಾಷ್ಡ್ರ ರಾಜ್ಯದ ರೋಗಿಗಳು ಜಿಲ್ಲೆ ಬರುತ್ತಿದ್ದಾರೆ. ಹಾಗಂತ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಿದ ದಾಖಲೆ ಇಲ್ಲ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳ ಈ ಧೈರ್ಯಶಾಲಿ ಪ್ರಯತ್ನದಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿ ಜಿಲ್ಲಾಡಳಿತದ ಹೊರೆಯನ್ನು ಮಹತ್ತರವಾಗಿ ಕಡಿಮೆ ಮಾಡಿದೆ. ಜಿಲ್ಲಾಡಳಿತವು ಖಾಸಗಿ ಆಸ್ಪತ್ರೆಗಳ ಈ ಪ್ರಯತ್ನಗಳನ್ನು ಗುರುತಿಸಿದೆ. ಜಿಲ್ಲೆಯಲ್ಲಿ 17 ಖಾಸಗಿ ಕೋವಿಡ್ ಆಸ್ಪತ್ರೆಗಳು ಸೇವೆ ನೀಡುತ್ತಿವೆ. ಶೇ.50 ರಷ್ಟು ರೋಗಿಗಳ ಈ ಆಸ್ಪತ್ರೆಗಳಲ್ಲಿ ಇದ್ದಾರೆ. ಕೋವಿಡ್ ರೋಗಿಗಳನ್ನು ಗುಣಮುಖ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಖಾಸಗಿ ಆಸ್ಪತ್ರೆಯಲ್ಲಿ ಹಣ ಲೂಟಿ ಮಾಡುತ್ತಿದ್ದಾರೆಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿಗಳ ಆಸ್ಪತ್ರೆಗೆ ಬರುತ್ತಿರಲ್ಲಿ ಆಗ ಅವರಿಗೆ ಸಿಬ್ಬಂದಿಗಳ ನಿರ್ವಹಣೆಗೆ ವೇತನ ಹೆಚ್ಚಳ, ಆಹಾರ ಮತ್ತು ವಸತಿಗೆ ಅವಕಾಶ ಕಲ್ಪಿಸಿ ಕೋವಿಡ್ ಚಿಕಿತ್ಸೆಗೆ ಮಾಡುವುದು ಸವಾಲಿನ ಕಾರ್ಯವಾಗಿದೆ. ಈ ಮಧ್ಯ ಆಮ್ಲಜನಕ ಪೂರೈಕೆಯನ್ನು ನಿರ್ವಹಿಸುವಲ್ಲಿ ಖಾಸಗಿ ಆಸ್ಪತ್ರೆಗಳು ಸಮಸ್ಯೆ ಎದುರಿಸುತ್ತಿವೆ ಸ್ಥಳೀಯ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆದಾರರು ಬೇಡಿಕೆ ಅನುಸಾರವಾಗಿ ಸಿಲಿಂಡರಗಳನ್ನು ಪೂರೈಸಲು ಅಸಾಧ್ಯವಾದಾಗ ಆಕ್ಸಿಜನ್ ಸಿಲಿಂಡರ್‌ಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಯಿತು. ಖಾಸಗಿ ಆಸ್ಪತ್ರೆಗಳ ಮಾಲೀಕರು ಬೇರೆ ಜಿಲ್ಲೆ, ರಾಜ್ಯಗಳಿಂದ ಆಕ್ಸಿಜನ್ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಯಿತು. ಇದು ಆಸ್ಪತ್ರೆಗಳ ದರ ಹೆಚ್ಚಾಗಿದೆ. ಆದರೂ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿದ ದರವನ್ನು ಮಾತ್ರ ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಯ ಡಾ.ಎಲ್.ಎಚ್.ಬಿದರಿ, ಡಾ.ರವೀಂದ್ರ ಮದರಕಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.