ಮಳೆ ಅರ್ಭಟಕ್ಕೆ ನಲುಗಿದ ರೈತರು

0

Gummata Nagari : Bijapur News

ತಾಳಿಕೋಟೆ : ಜಿಲ್ಲೆಯಾಧ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಡೋಣಿ ನದಿ ಪ್ರವಾಹ ಅಪಾಯದ ಮಟ್ಟ ಮೀರಿ ಯದ್ವಾ ತದ್ವಾ ಹರಿಯುತ್ತಿದ್ದು ರೈತರ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಕಳೆದ ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಮಳೆ ಸುರಿಯುತ್ತಲೇ ಇದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯು ಅರ್ಭಟ ಇಂದೂ ಕೂಡಾ ಮುಂದುವರೆದಿದ್ದು ರೈತರ ಗೋಳು ಹೇಳತೀರದಾಗಿದೆ. ಮಳೆಯಿಂದಾಗಿ ಡೋಣಿ ನದಿ ತುಂಬಿ ಹೊಲಗಳಿಗೆ ನುಗಿ ಸಾವಿರಾರು ಹೇಕ್ಟರ್ ಜಮೀನುಗಳು ಜಲಾವೃತವಾಗಿದ್ದು ಅಪಾರ ಹಾನಿ ಸಂಭವಿಸಿದೆ. ಡೋಣಿ ನದಿ ನೀರಿನಿಂದಾಗಿ ಬೆಳೆ ಕೊಳೆತುಹೋಗುವ ಸ್ಥಿತಿ ತಲುಪಿದೆ. ಕೆಲವಡೆ ಜಮೀನಿನ ಫಲವತ್ತಾದ ಮಣ್ಣೆಲ್ಲ ಕೊಚ್ಚಿ ನದಿ ಪಾಲಾಗಿದೆ. ಸೋಗಲಿ ಹಳ್ಳಕ್ಕೆ ಪ್ರವಾಹ ಬಂದಿದೆ. ಪಟ್ಟಣದಿಂದ ಹಡಗಿನಾಳ ಹಾಗೂ ಹರನಾಳ ಗ್ರಾಮಗಳಿಗೆ ಹೋಗುವ ಮಾರ್ಗದಲ್ಲಿ ಡೋಣಿ ನದಿ ಪ್ರವಾಹದಿಂದ ನೆಲಮಟ್ಟದ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ಪ್ರವಾಹದ ನೀರು ಹರಿಯುತ್ತಿದೆ. ಸೇತುವೆ ಮೇಲೆ ಐದಾರು ಅಡಿಗೂ ಅಧಿಕ ನೀರು ಹರಿಯುತ್ತಿದೆ. ಪೊಲೀಸ್ ಇಲಾಖೆ ನದಿ ದಾಟದಂತೆ ಎಚ್ಚರಿಕೆ ಫಲಕದೊಂದಿಗೆ ಅಡ್ಡ ಬ್ಯಾರಿಕೇಡ ಹಾಕಿದೆ.

ತಾಲೂಕಿನ ಡೋಣಿ ನದಿ ದಡದ ತಾಳಿಕೋಟೆ, ಬೋಳವಾಡ, ಗುತ್ತಿಹಾಳ ಗ್ರಾಮಗಳಿಗೆ ತಹಶೀಲ್ದಾರ ಅನಿಲಕುಮಾರ ಢವಳಗಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಹೆಚ್ಚು ಬಂದಿದೆ. ಇದರಿಂದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ನಾಶವಾಗಿದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಜೊತೆ ಜಂಟಿಯಾಗಿ ಸಮೀಕ್ಷೆ ಮಾಡಲಿದ್ದೇವೆ ಎಂದ ಅವರು, ಈ ಹಿಂದೆ 302 ಮನೆಗಳು ಮಳೆಯಿಂದ ಕುಸಿದಿದ್ದವು. ಈಗ ಮತ್ತೆ ತಾಲೂಕಿನಾಧ್ಯಂತ 10 ಮನೆಗಳು ಕುಸಿದಿರುವ ಬಗ್ಗೆ ವರದಿ ಬಂದಿದೆ. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದರು.

ಮತ್ತೆ ದ್ವೀಪವಾದ ಹಡಗಿನಾಳ:

ಅತ್ತ ಸೋಗಲಿ ಹಳ್ಳ, ಇತ್ತ ಡೋಣಿ ನದಿಗಳ ಮಧ್ಯೆ ಸರಿಸುಮಾರು 2 ಕಿಮೀ ಅಂತರದಲ್ಲಿರುವ ಹಡಗಿನಾಳ ಗ್ರಾಮಕ್ಕೆ ಬಾಹ್ಯ ಸಂಪರ್ಕದ ಕೊಂಡಿ ತಪ್ಪಿದೆ. ಇದರಿಂದ ಗ್ರಾಮದಲ್ಲಿ ಆವಶ್ಯಕ ಸಾಮಗ್ರಿಗಳ ಖರೀದಿಗಾಗಲಿ, ತುರ್ತು ಆಸ್ಪತ್ರೆಗಾಗಲಿ ಹೋಗಲು ದಾರಿಯಿಲ್ಲವಾಗಿದ್ದು ಗ್ರಾಮಸ್ಥರು ಪರದಾಟ ನಡೆಸುವಂತಾಗಿದೆ. ಹಡಗಿನಾಳ ಸಂಪರ್ಕಕ್ಕೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ತುರ್ತು ಕಾಮಗಾರಿ ಮುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೆಲ್ಪಿಗಾಗಿ ಮುಗಿಬಿದ್ದ ಯುವಕರು:

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಬರದ ನಾಡು ಎಂದು ಬಿಂಬತವಾಗಿದ್ದ ಜಿಲ್ಲೆಯಲ್ಲಿ ಮಳೆನಾಡಿನ ರೀತಿಯಾಗಿದೆ. ಈಗಾಗಲೇ ಬೆಂಬಿಡದ ಮಳೆ ಹಾಗು ಮೋಡ ಕವಿದ ವಾತಾವರಣ ಇರುವದರಿಂದ ಸಂಪೂರ್ಣ ಮಲೆನಾಡಿನಂತಾಗಿದೆ. ಕಳೆದ ಹತ್ತುವ ವರ್ಷಗಳಲ್ಲಿ ಬಾರದ ರೀತಿಯಲ್ಲಿ ಈ ಬಾರಿ ಡೋಣಿ ನದಿ ಪ್ರವಾಹ ಹೆಚ್ಚಾಗಿ ಹೊರಸೋಸಿದ್ದರಿಂದ ಯುವಕರು ಹಾಗೂ ಸಾರ್ವಜನಿಕರು ಡೋಣಿ ನದಿ ದಡಕ್ಕೆ ಬಂದು ಸೆಲ್ಪಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಳೆಯನ್ನು ಲೆಕ್ಕಿಸದೇ ಯುವಕರು ಡೋಣಿ ನದಿ ದಂಡೆ ಹಾಗೂ ತಾಳಿಕೋಟೆ-ಬಿಜಾಪುರ ರಸ್ತೆಯಲ್ಲಿರುವ ಬ್ರೀಜ್ ಮೇಲೆ ಸೆಲ್ಪಿ ತೆಗದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.