ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಹಿಂಪಡೆಯಲು ಒತ್ತಾಯ

0

ಕಾರ್ಪೋರೇಟ್ ಕಂಪನಿಗಳ ಗುಲಾಮಗಿರಿಯಲ್ಲಿ ಕೇಂದ್ರ ಸರ್ಕಾರಕ್ಕಿಂತ ತಾನು ಮುಂದೆ ಎನ್ನುವ ರೀತಿಯಲ್ಲಿ ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆ ಬಂಡವಾಳಗಾರರು ಸುಲಭವಾಗಿ ಕೃಷಿ ಭೂಮಿಯನ್ನು ಪಡೆಯಲು `ಕರ್ನಾಟಕ ಭೂ ಸುಧಾರಣೆ ಕಾಯ್ದೆ”ಗೆ ತಿದ್ದುಪಡಿ ತಂದಿದೆ.
-ಭೀಮಶಿ ಕಲಾದಗಿ

Gummata Nagari : Bijapur News

ಬಿಜಾಪುರ : ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಅಧಿವೇಶನದಲ್ಲಿ ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ, ರೈತ ಕೃಷಿಕಾರ್ಮಿಕರ ಸಂಘಟನೆ, ಅಖಿಲ ಭಾರತ ಕಿಸಾನ್ ಸಭಾ, ಪ್ರಗತಿಪರ ಸಂಘಟನೆಗಳ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ,ದಲಿತ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕಾರ್ಪೋರೇಟ್ ಕಂಪನಿಗಳ ಪರವಾದಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ 2020 ಈ ರೀತಿಯ ಮೊದಲಾದ ಸುಗ್ರೀವಾಜ್ಞೆಗಳು ರೈತ, ಜನವಿರೋಧಿಯಾಗಿವೆ, ಆದರೆ ಈ ಎಲ್ಲ ಮಸೂದೆಗಳನ್ನು ಪ್ರಸ್ತುತ ಅಧಿವೇಶನದಲ್ಲಿ ಅಂಗೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ತೋರಿದೆ. ದುಡಿಯುವ ರೈತ ವರ್ಗಕ್ಕೆ ನ್ಯಾಯ ಒದಗಿಸಿದ ಕರ್ನಾಟಕ ಭೂಸುಧಾರಣಾ ಕಾಯ್ದೆ-1961ಕಾಯ್ದೆಗೂ ತಿದ್ದುಪಡಿ ತರುತ್ತಿರುವುದು ಖೇದಕರ ಸಂಗತಿ ಎಂದು ವಿಷಾದಿಸಿದರು.

ಕಾರ್ಮಿಕ ಹೋರಾಟಗಾರ ಭಿ. ಭಗವಾನರೆಡ್ಡಿ ಮಾತನಾಡಿ, ರೈತರು ಮಾತ್ರ ಕೃಷಿ ಭೂಮಿ ಖರೀದಿ ಮಾಡಬಹುದೆಂದು ರೈತರ ಪರವಾಗಿ ಇದ್ದ ಕಾನೂನ್ನು ರದ್ದುಗೊಳಿಸಿ ದುಡ್ಡು ಇರುವ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿ ಮಾಡಬಹುದೆಂದು ತಿದ್ದುಪಡಿ ತಂದಿದೆ, ಅದೇ ತೆರನಾಗಿ ಒಂದು ರೈತ ಕುಟುಂಬ ಗರಿಷ್ಠ 54 ಎಕರೆ ಮಾತ್ರ ಭೂಮಿಯನ್ನು ಹೊಂದಬಹುದು ಎಂಬುದನ್ನು ಬದಲಿಸಿ ಐದು ಜನರಿಗಿಂತ ಹೆಚ್ಚಿರುವ ಕುಟುಂಬಗಳು 216 ಎಕರೆ ಭೂಮಿಯನ್ನು ಹೊಂದಿರಬಹುದೆಂಬ ನಿಯಮ ರೂಪಿಸಲು ಹೊರಟಿರುವುದು ಅವೈಜ್ಞಾನಿಕ ಎಂದು ದೂರಿದರು.

ರೈತರ, ಕೃಷಿಕೂಲಿಕಾರರ ಒಡೆತನದಲ್ಲಿ ಇರುವ ಬಗರ್‌ಹುಕ್ಕುಂ ಸಾಗುವಳಿಯ ಭೂಮಿ ಸಕ್ರಮಗೊಳಿಸುವುದು, ಆರ್ಥಿಕವಾಗಿ ಹಿಂದುಳಿದ ಕಡುಬಡವರಿಗೆ ನಿವೇಶನ ಅಥವಾ ವಸತಿ ಕಲ್ಪಿಸುವುದು, ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಸೃಜನೆ ದಿನಗಳನ್ನು 200 ಕ್ಕೆ ಹೆಚ್ಚಿಸುವುದು, ನರೇಗಾ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸುವುದು, ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದರು.

ರೈತ ಮುಖಂಡರಾದ ಬಾಳು ಜೇವೂರ, ಅರವಿಂದ ಕುಲಕರ್ಣಿ, ಅಕ್ರಮ್ ಮಾಶ್ಯಾಳಕರ ಮಾತನಾಡಿದರು. ಪ್ರಕಾಶ ಹಿಟ್ನಳ್ಳಿ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರ,ಸುರೇಖಾ ರಜಪೂತ, ಫಾ.ಟಿಯೂಲ್ ಮಚಾದೂ, ಸದಾನಂದ ಮೋದಿ, ಸುನೀಲ ಸಿದ್ರಾಮಶೆಟ್ಟಿ, ಸದಾಶಿವ ಬರಟಗಿ, ಯಲಗೂರದಪ್ಪ ಚಲವಾದಿ, ಬೀಮಶಿ ಕಟ್ಯಾಳ, ಸುಭಾಸ ತಳಕೇರಿ, ಯಮನಪ್ಪ ಪೂಜಾರಿ, ಬಾಬೂ ಬೀರಕಬ್ಬಿ, ಸುಮಿತ್ರಾ ಘೊಣಸಗಿ, ಮಹಾದೇವ ಲಿಗಾಡೆ, ದುಂಡೇಶ ಬಿರಾದಾರ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.