ಪ್ರತಿಯೊಬ್ಬರಿಗೆ ಶಿಕ್ಷಣ ಅತ್ಯಗತ್ಯ

0

Gummata Nagari : Bijapur News

ಮುದ್ದೇಬಿಹಾಳ : ಇದ್ದವರು ಇಲ್ಲದವರಿಗೆ ನೆರವು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಿಗೆ ಶಿಕ್ಷಣ ಅತ್ಯಗತ್ಯವಾಗಿದೆ. ಬಡತನ ಇದೆ ಎಂದು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳ್ಳದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಾಲಕರದ್ದಾಗಿದೆ ಎಂದು ಬಿಜಾಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಹೇಳಿದ್ದಾರೆ.

ಇಲ್ಲಿನ ತಂಗಡಗಿ ರಸ್ತೆಪಕ್ಕದಲ್ಲಿರುವ ಎಸ್ ಎಸ್ ಪಿಯು ಕಾಲೇಜಿನಲ್ಲಿ ನಮ್ಮೂರ ಗೆಳೆಯರ ಬಳಗವು ಆಯೋಜಿಸಿದ್ದ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮೂರ ಗೆಳೆಯರ ಬಳಗವು ಸಮಾಜಕ್ಕೆ ಮಾದರಿಯಾದ ಕೆಲಸ ಮಾಡುತ್ತಿದೆ. ಇದು ನಿರಂತರ ಮುಂದುವರೆಯಬೇಕು. ಬಳಗದ ಕಾರ್ಯಕ್ಕೆ ನಾನೂ ಕೈಜೋಡಿಸುತ್ತೇನೆ ಎಂದರು.

ಎಸ್‌ಎಸ್‌ವಿವಿ ಸಂಘದ ಅಧ್ಯಕ್ಷ ರವಿ ನಾಯಕ ಮಾತನಾಡಿ ಸ್ಥಳೀಯ ಕೆಬಿಎಂಪಿ ಶಾಲೆಯಲ್ಲಿ ಓದಿರುವ 1985ನೇ ಸಾಲಿನ ಬ್ಯಾಚ್‌ನ ಗೆಳೆಯರು ಸಂಘ ಕಟ್ಟಿಕೊಂಡು ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದಾಗಿದೆ. ಹಿಂದುಳಿದ ವರ್ಗದವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ದಿ| ವೀರಭದ್ರಪ್ಪ ಸಿದ್ದಾಪುರ ಸೇರಿದಂತೆ ಹಲವರು ಪ್ರೇರಕರಾಗಿದ್ದು ಸದಾ ಸ್ಮರಣೀಯ ಎಂದು, ಕೆಬಿಎಂಪಿ ಶಾಲೆಯ ಮುಖ್ಯಾಧ್ಯಾಪಕ ಟಿ.ಎನ್.ರೂಢಗಿ ಮಾತನಾಡಿ ಶಿಕ್ಷಣದಲ್ಲಿ ಬಡತನ, ಸಿರಿತನ ಎನ್ನುವುದು ಇರೋದಿಲ್ಲ. ಕಲಿಯಬೇಕು ಎನ್ನುವ ಮನೋಭಾವ ಮುಖ್ಯವಾಗಿರುತ್ತದೆ. ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಭಾರೀ ವ್ಯತ್ಯಾಸ ಇದೆ. ಸಮಾನ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದರು.

ಡಾ| ಸಂಜಯ್ ಪಾಟೀಲ, ಉಮೇಶ ವರದಪ್ಪನವರ್ ಸನ್ಮಾನಿತರ ಪರವಾಗಿ ಮಾತನಾಡಿದರು. ಕೊರೊನಾ ವಾರಿಯರ್‌ಗಳಾದ ಹಟ್ಟಿಯ ಡಾ| ಪ್ರಶಾಂತ ನಾವದಗಿ, ಮುದ್ದೇಬಿಹಾಳದ ಡಾ| ಎ.ಎ.ಮೋಮಿನ್, ಜಮಖಂಡಿಯ ಪಿಎಸೈ ಚನ್ನಪ್ಪ ಚಲವಾದಿ, ಗುಳೇದಗುಡ್ಡದ ಉಮೇಶ ವರದಪ್ಪನವರ್, ಬಿದರಕುಂದಿಯ ಎಂ.ಆರ್.ಗುರಿಕಾರ, ಹುನಗುಂದದ ಲ್ಯಾಬ್ ಟೆಕ್ನೀಶಿಯನ್ ಶಾಂತಯ್ಯ ಶಿವಯೋಗಿಮಠ, ಧನ್ನೂರಿನ ಫಾರ್ಮಾಸಿಸ್ಟ್ ಸಂಗಮೇಶ ಹುನಗುಂದ, ಬಾಗಲಕೋಟೆಯ ಜಗದೀಶ ಸೋಮನಕಟ್ಟಿ, ಚಿತ್ತರಗಿಯ ರವೀಂದ್ರ ಪೂಜಾರಿ, ಮಮದಾಪೂರದ ಇಕ್ಬಾಲ್ ಮುದ್ದೇಬಿಹಾಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬಳಗದ ಪ್ರಮುಖರಾದ ಅಶೋಕ ಚಟ್ಟೇರ, ಬಸವರಾಜ ಸಿದ್ದಾಪುರ, ಲೇಶಪ್ಪ ಪ್ಯಾಟಿಗೌಡರ, ಸಲೀಮ ರುದ್ರವಾಡಿ, ಚಂದ್ರಶೇಖರ ಅಂಬಿಗೇರ, ಅಸ್ಪಾಕ್ ಮೋಮಿನ್, ಭೀಮಣ್ಣ ದಾಸರ, ರಾಜು ಹುನಗುಂದ, ಸೈಫು ನದಾಫ, ಶಶಿ ಪಾಟೀಲ, ಬಸವರಾಜ ಚಿನಿವಾರ, ಮಹಾಂತೇಶ ಸಂಗಮ, ಗಣಿ ನಾಯ್ಕೋಡಿ ಮತ್ತಿರರು ಉಪಸ್ಥಿತರಿದ್ದರು.

ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಗಲಿದ ಮಿತ್ರರು ಹಾಗೂ ಪರಿವಾರದವರಾದ ಮಹಾಗುಂಡಪ್ಪ ರಾಂಪೂರ, ವೀರಭದ್ರಪ್ಪ ಸಿದ್ದಾಪುರ, ದಿಲೀಪ ದೇಶಪಾಂಡೆ, ಮಹ್ಮದ ಇಟಗಿ ಇವರನ್ನು ಸ್ಮರಿಸಲಾಯಿತು. ಶರಣು ದೇಗಿನಾಳ ಸ್ವಾಗತಿಸಿದರು. ದಿಗಂಬರ ದೇಶಪಾಂಡೆ ನಿರೂಪಿಸಿದರು. ಮಹಾಬಲೇಶ ಉಪನಾಳ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.