ಭೂಮಿ ಕಂಪಿಸಿದ ಅನುಭವ: ಮನೆಯಿಂದ ಹೊರ ಬಂದು ಕುಳಿತ ಮನಗೂಳಿ ಜನತೆ

0

Gummata Nagari : Bijapur News

ಬಿಜಾಪುರ : ಮನಗೂಳಿಯಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವದಿಂದಾಗಿ ಜನರು ಗಾಬರಿಗೊಂಡ ಮನೆಯಿಂದ ಹೊರಬಂದು ರಾತ್ರೀ ಇಡೀ ಹೊರಗಡೆ ಕಾಲ ಕಳೆದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಮನಗೂಳಿ ಪಟ್ಟಣದಲ್ಲಿ ನಾಲ್ಕೈದು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿರುವ ಬಗ್ಗೆ ಅನೇಕ ಜನರು ಅನುಭವ ಹಂಚಿಕೊಂಡಿದ್ದಾರೆ. ಇಡೀ ಪಟ್ಟಣಕ್ಕೆ ಪಟ್ಟಣವೇ ಎಚ್ಚರಗೊಂಡು ಮನೆಗಳಿಂದ ಹೊರಗೆ ಬಂದು ಜಮಾಯಿಸಿದ್ದಾರೆ. ಭೂಕಂಪನ ಅನುಭವ ಉಂಟಾದ ಹಲವಾರು ಗಂಟೆಗಳ ನಂತರವೂ ಅನೇಕರು ಮನೆಯೊಳಗೆ ಹೋಗಲು ಹೆದರಿ ಹೊರಗಡೆಯೇ ಕಾಲ ಕಳೆದರು.

ಮನೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಕುಳಿತು ಮಾತನಾಡುತ್ತಿದ್ದೆವು, ತಕ್ಷಣವೇ ಕುರ್ಚಿ, ಮುಂಭಾಗದ ಸಣ್ಣಪುಟ್ಟ ವಸ್ತುಗಳು ತನ್ನಿಂದ ತಾನೇ ಅಲುಗಾಡುವುದು ಕಾಣಿಸಿತು, ತಕ್ಷಣವೇ ಎಲ್ಲರಿಗೂ ಎಚ್ಚರಿಸಿ ಹೊರಗೆ ಓಡಿ ಬಂದೆವು. ಹೊರಗಡೆ ನೋಡಿದಾಗ ಅನೇಕರು ಜಮಾಯಿಸಿದ್ದರು, ಇದನ್ನು ನೋಡಿದಾಗ ಭೂಕಂಪವಾಗಿರುವುದು ಖಾತ್ರಿಯಾಯಿತು ಎಂದು ಮನಗೂಳಿ ಪಟ್ಟಣದ ಗುರುರಾಜ ಮಿಂಚನಾಳ ವಿವರಿಸಿದರು.

`ಮನೆಯಲ್ಲಿ ಸೋಪಾದಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದೆ, ರಾತ್ರಿ 11.30 ರ ಸುಮಾರಿಗೆ ಏಕಾಏಕಿಯಾಗಿ ಭೂಮಿ ಕಂಪಿಸಿದ ಅನುಭವವಾಯಿತು, ಧಡಕ್ಕನೇ ಹೊರಗೆ ಓಡಿ ಬರುವಷ್ಟರಲ್ಲಿಯೇ ನೆರೆ-ಹೊರೆಯವರು ಹೊರಗಡೆ ಬಂದು ಸೇರಿದ್ದರು, ಭೂಮಿ ಕಂಪಿಸಿದ್ದು ನೋಡಿದರೆ ಒಂದು ರೀತಿ ಭಯ ಉಂಟಾಗಿದ್ದಂತೂ ಸತ್ಯ ಎಂದು ಪಟ್ಟಣದ ಇನ್ನೋರ್ವ ನಿವಾಸಿ ಶಿವಾನಂದ ಕಬ್ಬಿನ ಅನುಭವ ಹಂಚಿಕೊಂಡರು.

ಭಯ ಪಡುವ ಅಗತ್ಯವಿಲ್ಲ: ಬಿಜಾಪುರ ಜಿಲ್ಲೆಯ ಮನಗೂಳಿಯಲ್ಲಿ ಭುಕಂಪನವಾಗಿಲ್ಲ. ಜಿಲ್ಲೆಯ ಆಲಮಟ್ಟಿಯಲ್ಲಿ ಸಿಸ್ಮಿಕ್ ಸೆಂಟರ್‌ನಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ಅಂಶಗಳು ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.