ಆರ್ಥಿಕ ವ್ಯವಸ್ಥೆಯ ಪುನಃಶ್ಚೇತನಕ್ಕೆ ಪರ್ಯಾಯ ನೀತಿ ರೂಪಿಸಿ
ಬಿಜಾಪುರದಲ್ಲಿ ಸಿಐಟಿಯು ಜಿಲ್ಲಾ ಘಟಕದಿಂದ ಪ್ರತಿಭಟನೆ
ಬಿಜಾಪುರ : ಲಾಕಡೌನ್ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳನ್ನು ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ನೇತೃತ್ವ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಿಗೇರ ಮಾತನಾಡಿ, ಕೋವಿಡ್ ಲಾಕಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ, ಕೋವಿಡ್-19 ಸಾಂಕ್ರಾಮಿಕದ ಆತಂಕ ಇರುವಾಗಲೇ ಇನ್ನೊಂದೆಡೆ ಅನ್ಲಾಕ್ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಳ್ಳದ ಕಾರಣ ಆರ್ಥಿಕ ಸಂಕಷ್ಟವನ್ನು ಜನತೆ ಎದುರಿಸುವಂತಾಗಿದೆ ಎಂದರು.
ಶೇ.80 ರಷ್ಟು ಸಂಘಟಿತ ಕಾರ್ಮಿಕರಿಗೆ ಲಾಕಡೌನ್ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ನೀಡಿರುವ ವೇತನವನ್ನು ಮುಂಗಡವಾಗಿ ನೀಡಿ ಅದಕ್ಕಾಗಿ ಪರ್ಯಾಯ ದಿನದ ಕೆಲಸಕ್ಕೆ ಮಾಲೀಕರು ಒತ್ತಾಯಿಸುತ್ತಿದ್ದಾರೆ. ವೇತನ ಒಪ್ಪಂದದಿಂದ ಲಭಿಸಬೇಕಾದ ವೇತನ ಹೆಚ್ಚಳವನ್ನು ನೀಡದಿರುವ, ಮುಂದೂಡುವ ಪ್ರಯತ್ನಗಳನ್ನು ನಡೆಸಿದ್ದಾರೆ. ಗುತ್ತಿಗೆ ಕಾರ್ಮಿಕರು, ಟ್ರೇನಿಗಳು ಮುಂತಾದ ಉದ್ಯೋಗ ಭದ್ರತೆಯಿಲ್ಲದ 70 ಶೇಕಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಖಾಯಂ ಕಾರ್ಮಿಕರನ್ನು ವಿ.ಆರ್.ಎಸ್ ಕೊಟ್ಟು, ರಿಟ್ರೆಂಚ್ ಮಾಡಿ, ಕಾರ್ಖಾನೆ ಮುಚ್ಚಿ, ಮನೆಗೆ ಕಳುಹಿಸುವ ಪ್ರಕರಣಗಳು ಹೆಚ್ಚಿವೆ. ಅವರ ಬದಲಿಗೆ ನಿಶ್ಚಿತ ಕಾಲಾವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಈಳಿಗೇರ ಗಂಭೀರವಾಗಿ ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಲಾಕಡೌನ್ ಕಾಲಾವಧಿಯ ಪೂರ್ಣ ವೇತನವನ್ನು ಖಾತರಿಪಡಿಸಲು ಕಳೆದ ಎಪ್ರಿಲ್ 15 ರಂದು ರಾಜ್ಯ ಸರ್ಕಾರವು ಹಿಂಪಡೆದಿರುವ ಎ.13 ಹೊರಡಿಸಿದ್ದ ಆದೇಶವನ್ನು ಪುನರ್ ಹೊರಡಿಸಬೇಕಿದೆ. ಕಳೆದ ಜೂನ್ 12 ರಂದು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದಂತೆ ಲಾಕ್ಡೌನ್ ಕಾಲಾವಧಿಯ ಪೂರ್ಣವೇತನವನ್ನು ಕಾರ್ಮಿಕರಿಗೆ ಲಭಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿದರು. ಸುರೇಖಾ ರಜಪೂತ, ಸುನಂದಾ ನಾಯಕ, ಸರಸ್ವತಿ ಮಠ, ಅಶ್ವಿನಿ ತಳವಾರ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಸುರೇಖಾ ವಾಘಮೋರೆ, ಸುವರ್ಣಾ ರಾಠೋಡ, ಜಯಶ್ರಿ ಪಾರ್ತನಳ್ಳಿ ಜಯಶ್ರೀ ಪೂಜಾರಿ, ಹುಲಗೆಪ್ಪ ಚಲವಾದಿ, ಮಲಿಕಸಾಬ ಠಕ್ಕಳಕಿ, ಪ್ರತಿಭಾ ಕುರಡೆ, ಯಮುನಾ ಸರಾಫ, ಕಸ್ತೂರಬಾಯಿ ಕೇಸರಿ, ದಾನಮ್ಮ ಗುಗ್ಗರೆ, ಸೋಬಾ ಕಬಾಡೆ, ಸುವಾರ್ಣ ಹಲಗಣಿ, ಸರೋಜಿನಿ ಪಾಟೀಲ, ಭೀಮಬಾಯಿ ಶುಲ್ಪಿ, ಸಿದ್ರಾಮ ಬಂಗಾರಿ, ಗಂಗವ್ವಾ ಗೊಲ್ಲರ, ಶಾಂತಾಬಾಯಿ ಹರನಾಳ ಉಪಸ್ಥಿತರಿದ್ದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..