ಸೈಕ್ಲಿಂಗ್ ವೆಲೊಡ್ರೋಮ್ ತುರ್ತಾಗಿ ಕೈಗೊಳ್ಳಲು ಡಿಸಿ ಸೂಚನೆ

0

Gummata Nagari : Bijapur News

ಬಿಜಾಪುರ : ನನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿಗಳನ್ನು ಪುನರ್ ಆರಂಭಿಸುವ ಕುರಿತು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಸಿಂಥೆಟಿಕ್ ಟ್ರ್ಯಾಕ್ ಪರಿಶೀಲನೆ ಮತ್ತು ವಿವಿಧ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿಗಳು ನನೆಗುದಿಗೆ ಬಿದ್ದಿರುವುದರಿಂದ ಈ ಕಾಮಗಾರಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಪರಿಶೀಲನವರೆಗೆ ಕಾಯದೆ ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಪತ್ರದ ಮೂಲಕ ಆಯುಕ್ತರಿಗೆ ಮನವರಿಕೆ ಮಾಡುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆ ಈಗಾಗಲೇ ನಗರದ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಂಥೆಟಿಕ್ ಟ್ರ್ಯಾಕ್‌ನ ಶೇ.100ರಷ್ಟು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು 5 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಅದರಂತೆ ಕೆ.ಬಿ.ಜೆ.ಎನ್.ಎಲ್ ಮೂಲಕ ಹೆಚ್ಚುವರಿಯಾಗಿ ಕ್ರೀಡಾ ಸಾಮುಗ್ರಿಗಳ ಖರೀದಿ ಮತ್ತು ಸ್ಪಿಂಕ್ಲರ್ ಅಳವಡಿಕೆಗೆ 1.31 ಕೋಟಿ ರೂ ಮಂಜೂರಾಗಿದ್ದು ಆದ್ಯತೆ ಮೇರೆಗೆ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾಂಗಣ ವ್ಯಾಪ್ತಿಯಲ್ಲಿ 2 ಸಿಂಥೆಟಿಕ್ ವ್ಹಾಲಿಬಾಲ್ ಅಂಕಣಗಳ ಶೇ 80 ರಷ್ಟು ಭೌತಿಕ ಕಾಮಗಾರಿಗಳು ಪೂರ್ಣಗೊಂಡಿದ್ದು 52 ಲಕ್ಷ ರೂ ಗಳಲ್ಲಿ ನಿರ್ಮಿಸಲಾದ ಈ ಅಂಕಣಗಳಿಗೆ ಹೆಚ್ಚುವರಿಯಾಗಿ ಅವಶ್ಯಕತೆ ಇರುವ 2 ಲಕ್ಷ ರೂ ಗಳನ್ನು ಕನಕದಾಸ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂಡೋರ ಸ್ಟೇಡಿಯಂ ಉಳಿತಾಯ ಹಣದಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ನಗರದ ಕನಕದಾಸ ಬಡಾವಣೆಯಲ್ಲಿ 220 ಲಕ್ಷ ರೂ ಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ವಿಮ್ಮಿಂಗ್ ಪೂಲ್ (ಈಜುಕೊಳ) ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ನವ್ಹೆಂಬರ್ ಅಂತ್ಯಕ್ಕೆ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಭವಿಷ್ಯದಲ್ಲಿ ಜಿಲ್ಲಾಡಳಿತ ಮೂಲಕವೆ ಇದರ ಸಮಗ್ರ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಆಧ್ಯತೆ ಮೇಲೆ ಮಹಿಳಾ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲು ಕ್ರೀಡಾಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾಂಗಣದ ನಿರ್ವಹಣೆಗೆ ಅನುಕೂಲವಾಗುವಂತೆ ಕ್ರೀಡಾಂಗಣ ವ್ಯಾಪ್ತಿಯ ಮಳಿಗೆಗಳ ಮಾಲಿಕರು ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣವನ್ನು ತಕ್ಷಣ ಪಾವತಿಯಾಗುವ ದೆಸೆಯಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿ.ವಾಯ್.ಎಸ್.ಪಿ, ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅಭಿಯಂತರರನ್ನು ಒಳಗೊಂಡ ಸಮೀತಿ ರಚಿಸಿ ಬಾಕಿ ಹಣ ವಸೂಲಾತಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಯುವಸಬಲಿಕರಣ ಮತ್ತು ಕ್ರೀಡಾಧಿಕಾರಿ ಎಸ್.ಜಿ ಲೋಣಿ, ಮಹಾನಗರಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಬಿ.ಹೆಚ್. ಕಿರೇಸೂರ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮುಜೂಮದಾರ, ಮಹಾನಗರಪಾಲಿಕೆ ಸಹಾಯಕ ಅಭಿಯಂತರರಾದ ಯು.ಎಸ್.ಗಾಣಿಗೇರ, ವಾಯ್.ಎಮ್.ಹಳ್ಳಿ, ಬೆಂಗಳೂರು ಕ್ರೀಡಾ ಇಲಾಖೆ ಸಹಾಯಕ ಅಭಿಯಂತರ ಎಸ್.ಹರೀಶ ಹಾಗೂ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.