ಹದಗೆಟ್ಟ ಬಿಜಾಪುರದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ

ಬಿಜಾಪುರ ವಿಕಾಸ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

0

Gummata Nagari : Bijapur News

ಬಿಜಾಪುರ : ಬಿಜಾಪುರ ನಗರದ ಅವ್ಯವಸ್ಥೆ ಖಂಡಿಸಿ ಹಾಗೂ ಬಿಜಾಪುರ ನಗರದ ರಸ್ತೆಗಳನ್ನು ಕೂಡಲೇ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ಬಿಜಾಪುರ ವಿಕಾಸ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ವೇದಿಕೆ ಪದಾಧಿಕಾರಿಗಳು `ಹದಗೆಟ್ಟ ರಸ್ತೆ – ತೊಂದರೆ ಅನುಭವಿಸುತ್ತಿರುವ ಜನತೆ’, `ಬಿಜಾಪುರದ ರಸ್ತೆಗಳನ್ನು ಹುಡುಕಿಕೊಡಿ’, `ರಸ್ತೆ ದುರಸ್ತಿಗೊಳಿಸಿ’ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಮೊಳಗಿಸುವ ಮೂಲಕ ರಸ್ತೆಗಳ ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಬಿಜಾಪುರ ವಿಕಾಸ ವೇದಿಕೆ ಅಧ್ಯಕ್ಷ ನೀಲಕಂಠ ಕಂದಗಲ್ ಮಾತನಾಡಿ, ಬಿಜಾಪುರ ನಗರ ಇಂದಿಗೂ ಅಭಿವೃದ್ಧಿಯಿಂದ ವಂಚಿತವಾಗಿಯೇ ಇದಎ, ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ, ಜನಪ್ರತಿನಿಧಿಗಳು ಬದಲಾದರೂ ಬಿಜಾಪುರದ ಹಣೆಬರಹ ಬದಲಾಗಿಲ್ಲ. ವಿಮಾನ ನಿಲ್ದಾಣ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೀಗೆ ಅನೇಕ ಕನಸು ಕಟ್ಟಿಕೊಂಡಿರುವ ಬಿಜಾಪುರ ಜನತೆ ಈಗಲೂ ರಸ್ತೆ ಅವ್ಯವಸ್ಥೆ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಮಾತ್ರ ದೂರವಾಗಿಲ್ಲ ಎಂದರು.

ವಿಜಯಪುರ ನಗರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ, ನಗರದಲ್ಲಿ ಒಂದು ಸುತ್ತು ಹಾಕಿದರೆ ನರಕದ ಪ್ರತ್ಯಕ್ಷ ದರ್ಶನದ ಅನುಭವವಾಗುತ್ತದೆ, ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಎದೆ ಝಲ್ಲೆನ್ನುತ್ತದೆ, ಜನರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಓಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಅನೇಕ ವೃದ್ಧರು ರಸ್ತೆ ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನೂ ಅನೇಕರ ವಾಹನ ಅಪಘಾತಗೊಂಡಿವೆ. ಕೆಲ ರಸ್ತೆಗಳಲ್ಲಿ ನೀರು ನಿಂತು ಹಳ್ಳ ದಂತಾಗಿವೆ. ಹಲವಾರು ದಿನದಿಂದ ನೀರು ನಿಂತಿರುವುದರಿAದ ಆ ಪ್ರದೇಶಗಳಲ್ಲಿ ಸೊಳ್ಳೆ ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯಗಳು ಹೆಚ್ಚಾಗಿವೆ ಎಂದು ಕಂದಗಲ್ ಸಮಸ್ಯೆಯನ್ನು ವಿವರಿಸಿದರು.

ರಸ್ತೆಗಳ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಈ ವಿಷಯದಲ್ಲಿ ಮಹಾನಗರ ಪಾಲಿಕೆ ದಿವ್ಯ ಮೌನ ಹಾಗೂ ದಿವ್ಯ ನಿರ್ಲಕ್ಷö್ಯ ಮಾಡುತ್ತಿದೆ, ಮಳೆಗಾಲ ಮುಗಿಯಲಿ ಎಂಬ ಸುಂದರವಾದ ಸುಳ್ಳು ಮಾತ್ರ ಮೊಳಗುತ್ತಿದೆ ಹೊರತು ಅಭಿವೃದ್ಧಿಯ ಮಾತು ಎಲ್ಲಿಯೂ ಬರುತ್ತಿಲ್ಲ ಎಂದು ಕಂದಗಲ್ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರದಲ್ಲಿ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳೇ ಇಲ್ಲದಂತಾಗಿದೆ ಇದರಿಂದಾಗಿ ಬೇರೆ ಬೇರೆ ಊರುಗಳಿಂದ ಆಗಮಿಸುವ ಪ್ರವಾಸಿಗರು ಕೂಡ ಹಿಡಿಶಾಪ ಹಾಕುವಂತಾಗಿದೆ ಎಂದರು.

ಪುನೀತ್ ಸಜ್ಜನ, ರವಿ ಗಾಯಕವಾಡ್ ಸಂಭಾಜಿ ಪಾಟೀಲ್, ರಾಹುಲ್ ಪವಾರ್, ಅರುಣ್ ಪಾರ್ವತಿ, ಶಶಾಂಕ್ ಅಳ್ಳಿಮೊರೆ, ತೀರ್ಥಪ್ಪ ಪೂಜಾರಿ ,ಶ್ರೀಕುಮಾರ್ ಜಾಧವ್,ಗಂಗಾಧರ ಗೂಗದಡ್ಡಿ,ವಿಜಯಕುಮಾರ್ ಜಾಧವ್, ರವಿ ರಾಥೋಡ್, ಮುತ್ತಣ್ಣ ಭೋವಿ, ಸಿದ್ದು ಗೋಡೆಕರ್, ಈರಣ್ಣ ಪಾಟೀಲ್, ಶಶಿಧರ ಸಜ್ಜನ, ಕಾಶಿನಾಥ್ ಪವಾರ, ರವಿ ಸಜ್ಜನ ,ಪ್ರಶಾಂತ್ ಖ್ಯಾಡಿ ,ಸುನೀಲ್ ಜಾಧವ್, ಪ್ರಶಾಂತ ಚವ್ಹಾಣ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.