ಬಿಜೆಪಿ ಸರ್ಕಾರದಿಂದ ಕೋವಿಡ್ ವಿಷಯದಲ್ಲಿಯೂ ಭ್ರಷ್ಟಾಚಾರ ನಾಚಿಕೆಗೇಡಿನ ಸಂಗತಿ

ಜೆಡಿಎಸ್ ಜಿಲ್ಲಾಧ್ಯಕ್ಷ ಯಂಡಿಗೇರಿ ವಾಗ್ದಾಳಿ

0

Gummata Nagari : Bijapur News

ಬಿಜಾಪುರ : ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜನ ಹಿತವನ್ನು ಮರೆತು ಕೋವಿಡ್ ವಿಷಯದಲ್ಲಿಯೂ ಭ್ರಷ್ಟಾಚಾರ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ವಾಗ್ದಾಳಿ ನಡೆಸಿದರು.

ವಿಜಯಪುರ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಜರುಗಿದ ಜೆಡಿಎಸ್ ಮುಖಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ಮಾರ್ಗದ ಮೂಲಕ ಸರ್ಕಾರ ರಚಿಸಿಕೊಂಡ ಬಿಜೆಪಿ ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಅಧಿಕಾರ ನಡೆಸಿದರೂ ಜನರಿಗೆ ಕಿಂಚಿತ್ತು ಸ್ಪಂದಿಸುತ್ತಿಲ್ಲ, ಕೋವಿಡ್ ಪರಿಸ್ಥಿತಿಯಿಂದಾಗಿ ರೈತರು, ಕೂಲಿಕಾರ್ಮಿಕರು, ಕಾರ್ಮಿಕರ ಜೀವನ ದುಸ್ತರವಾಗಿದೆ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಜನರ ನೆರವಿಗೆ ನಿಲ್ಲಬೇಕಾದ ಸರ್ಕಾರ ಮಾತ್ರ ಕೋವಿಡ್ ವಿಷಯದಲ್ಲಿಯೂ ಭ್ರಷ್ಟಾಚಾರದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ತಿಳಿಹೇಳಬೇಕು, ಜೆಡಿಎಸ್ ಬಗ್ಗೆ ಜನತೆ ಒಲವು ಹೊಂದಿದ್ದಾರೆ, ಜೆಡಿಎಸ್ ಕಾರ್ಯಕರ್ತರು ಒಮ್ಮನಸ್ಸಿನಿಂದ ಹಾಗೂ ಒಕ್ಕಟ್ಟಿನಿಂದ ಸಕಾರಾತ್ಮಕವಾಗಿ ಪಕ್ಷ ಕಟ್ಟಲು ಶ್ರಮಿಸಬೇಕು, ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಸಂಘಟನೆಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ, ಆದರೆ ರೈತರಿಗೆ ಸರಿಯಾದ ರೀತಿಯಲ್ಲಿ ಗೊಬ್ಬರ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಗೊಬ್ಬರ ಅಂಗಡಿಗಳು ದುಬಾರಿ ಬೆಲೆ ವಿಧಿಸುವ ಮೂಲಕ ರೈತರ ಶೋಷಣೆಗೆ ಕಾರಣವಾಗುತ್ತಿದ್ದಾರೆ, ಕಳೆದೊಂದು ತಿಂಗಳುಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳದ ಬೆಳೆ ಹಾಳಾಗುವ ಆತಂಕದಲ್ಲಿ ಜಿಲ್ಲೆಯಲ್ಲಿ ರೈತರಿದ್ದಾರೆ. ತಕ್ಷಣವೆ ಅವರ ಸಹಾಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಯಂಡಿಗೇರಿ ಒತ್ತಾಯಿಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಸಮರ್ಪಕವಾದ ಕಾರ್ಯ ನಡೆಯುತ್ತಿಲ್ಲ. ಖಾಸಗಿ ಆಸ್ಪತ್ರೆಯವರು ಕೋರೊನಾ ನೆಪದಲ್ಲಿ ಲಕ್ಷ ಲಕ್ಷ ರೂ.ಗಳ ಬಿಲ್ ಮಾಡಿ ಬಡ-ಮಧ್ಯಮ ವರ್ಗದ ರೋಗಿಗಳಿಗೆ ಶೋಷಣೆ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಮುಖಂಡರಾದ ರಾಜುಗೌಡ ಪಾಟೀಲ, ಮಂಗಳಾದೇವಿ ಬಿರದಾರ, ಅರವಿಂದ ಕಾಶಿನಕುಂಟೆ, ಪ್ರದೀಶ ದೇಶಪಾಂಡೆ ಮಾತನಾಡಿದರು. ಯುವ ಧುರೀಣೆ ಕು.ವಿಜಯಲಕ್ಷ್ಮೀ ಪಾಟೀಲ ಅವರೊಂದಿಗೆ 20 ಜನರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ, ಜಿಲ್ಲಾ ಕಾರ್ಯಾಧ್ಯಕ್ಷ ದಿಲಾವರ ಖಾಜಿ, ಸಿದ್ದು ಕಾಮತ, ಮಹಾದೇವಿ ಪಾಟೀಲ, ತಾಲೂಕಾ ಅಧ್ಯಕ್ಷರುಗಳಾದ ಪ್ರಭುಗೌಡ ಪಾಟೀಲ, ನಾನಗೌಡ ಅನಂತರೆಡ್ಡಿ, ಸಾಯಬಣ್ಣ ಬಾಗೇವಾಡಿ, ಬಸನಗೌಡ ಬಿರಾದಾರ, ಬಸನಗೌಡ ಇಸಾಂಪುರ, ನದೀಮ ಕಡು, ಎಸ್.ಎಸ್. ಪಾಟೀಲ, ಶರಣು ಧರಿ, ಪ್ರಹ್ಲಾದಸಿಂಗ್ ಹಜೇರಿ, ಸಂಗಣ್ಣ ಡಂಬಳ, ಭೀಮನಗೌಡ ಪಡಗಾನೂರ, ಕೃಷ್ಣಾ ರಾಠೋಡ, ಯಲಗೂರೇಶ ತೊಂಡಿಕಟ್ಟಿ, ಎಂ.ಬಿ. ಕೊಡಗಲಿ, ಸಿದ್ದು ಮೇಲಿನಮನಿ, ಗೌಸ ಮನಿಯಾರ, ಅನ್ನಪೂರ್ಣ ಬಡಿಗೇರ, ಶ್ರೀಶೈಲ ಬಿಕ್ಷವತಿಮಠ, ವಿಠ್ಠಲಸಿಂಗ್ ಹಜೇರಿ, ಎಸ್.ಎಸ್. ಪಾಟೀಲ ತಾಳಿಕೋಟ, ಸೈದಾಬಿ ಚಿತ್ತರಗಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.