ಮುಂದುವರಿದ ಮುಸಲಧಾರೆ!
ಬಿಜಾಪುರ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿ, ಜನಜೀವನ ಅಸ್ತವ್ಯಸ್ತ, ಸೇತುವೆಗಳು ಜಲಾವೃತ, ನೀರಿನಲ್ಲಿ ಬೆಳೆಗಳು
20.06 ಮೀ.ಮೀ. ಮಳೆ
ಬಿಜಾಪುರ ತಾಲೂಕಿನಲ್ಲಿ 19.17 ಮೀ.ಮೀ., ಬಬಲೇಶ್ವರ ತಾಲೂಕಿನಲ್ಲಿ 19.2 ಮೀ.ಮೀ., ತಿಕೋಟಾ ತಾಲೂಕಿನಲ್ಲಿ 20.25 ಮೀ.ಮೀ., ಬಸವನ ಬಾಗೇವಾಡಿಯಲ್ಲಿ 7.26ಮೀ.ಮೀ., ನಿಡಗುಂದಿ ತಾಲೂಕಿನಲ್ಲಿ 8.3 ಮೀ.ಮೀ., ಕೊಲ್ಹಾರ ತಾಲೂಕಿನಲ್ಲಿ 7.0 ಮೀ.ಮೀ., ಮುದ್ದೇಬಿಹಾಳದಲ್ಲಿ 5.2 ಮೀ.ಮೀ., ತಾಳಿಕೋಟೆ ತಾಲೂಕಿನಲ್ಲಿ 4.45 ಮೀ.ಮೀ., ಇಂಡಿ ತಾಲೂಕಿನಲ್ಲಿ 33.18 ಮೀ.ಮೀ., ಚಡಚಣ ತಾಲೂಕಿನಲ್ಲಿ 29.05 ಮೀ.ಮೀ., ಸಿಂದಗಿ 45.02 ಮೀ.ಮೀ., ದೇವರಹಿಪ್ಪರಗಿ ತಾಲೂಕಿನಲ್ಲಿ 42.73 ಮೀ.ಮೀ., ಮಳೆ ಸುರಿದಿದೆ. ಬುಧವಾರ ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಅತೀ ಹೆಚ್ಚು ಅಂದರೆ 100 ಮೀ.ಮೀ., ಹಾಗೂ ಕೊಂಡಗೂಳಿಯಲ್ಲಿ 88.20 ಮೀ.ಮೀ., ಮಳೆ ಸುರಿದಿದೆ. ಬುಧವಾರ ಸುರಿದ ಮಳೆಯಿಂದಾಗಿ 187 ಮನೆಗಳು ಭಾಗಶ: ಹಾನಿಯಾಗಿದ್ದು, ಕೊಲ್ಹಾರ ತಾಲೂಕಿನಲ್ಲಿ ಒಂದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ.
ಬಿಜಾಪುರ : ಜಿಲ್ಲೆಯಲ್ಲಿ ಮೂರು ದಿನಗಳಿಂದ ಮಳೆ ರೌದ್ರಾವತಾರ ತಾಳಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಅನ್ನದಾತ ಕಷ್ಟಪಟ್ಟು ಬೆಳೆಸಿದ ಲಕ್ಷಾಂತರ ರೂ. ಬೆಳೆ ಕೊಚ್ಚಿ ಹೋಗಿದೆ. ಜಿಲ್ಲೆಯ ನೂರಾರು ಮನೆಗಳು ಹಾನಿಗೀಡಾಗಿದ್ದು, ಮನೆ ಕಳೆದುಕೊಂಡವರ ನೋವು ಮುಗಿಲು ಮುಟ್ಟಿದೆ.
ಗ್ರಾಮಗಳು ಜಲಾವೃತ
ಜಲಾಶಯಗಳಿಂದಲೂ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಅನೇಕ ಸೇತುವೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಅನೇಕ ಗ್ರಾಮಗಳ ಜನರಿಗೆ ಸಂಪರ್ಕ ಕಡಿತಗೊಂಡಿದೆ. ಡೋಣಿ ನದಿ ಪ್ರವಾಹದಿಂದಾಗಿ ಸಾರವಾಡ, ಧನ್ಯಾಳ ಮೊದಲಾದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇನ್ನೂ ದೂರವಾಗಿಲ್ಲ.
ಪ್ರವಾಹದ ನೀರಿನಿಂದಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆಯಲಾಗಿದ್ದ ಸೂರ್ಯಕಾಂತಿ, ತೊಗರಿ, ಶೇಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳ ಮೊದಲಾದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ.
ತಾಳಿಕೋಟೆ ಸಮೀಪದ ತಾರಾಪೂರ ಸೇತುವೆ ಜಲಾವೃತವಾಗಿದ್ದು, ತಾರಾಪೂರ ಗ್ರಾಮ ಸಂಪೂರ್ಣ ನಡುಗಡ್ಡೆಯಾಗಿದೆ. ಇಂಡಿ ತಾಲೂಕಿನ ರೂಡಗಿ, ಲಾಳಸಂಗಿ ಗ್ರಾಮಗಳು ಜಲಾವೃತವಾಗಿದ್ದು, ಅದೇ ತೆರನಾಗಿ ಡೋಣೂರ ಗ್ರಾಮದಿಂದ ಹೂವಿನಹಿಪ್ಪರಗಿ, ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ಡೋಣೂರ ಸೇತುವೆ ಸಹ ಜಲಾವೃತವಾಗಿದ್ದು, ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿದೆ.
ಆಲಮೇಲದ ದೇವಾಲಯಗಳು ಜಲಾವೃತ
ಆಲಮೇಲದಲ್ಲಿ ಭಾರೀ ಪ್ರಮಾಣದಲ್ಲಿ 44.7 ಮೀ.ಮೀ. ಮಳೆ ಸುರಿದಿದ್ದು, ಪಟ್ಟಣದಲ್ಲಿರುವ ಅನೇಕ ದೇವಾಲಯಗಳು ಜಲಾವೃತವಾಗಿವೆ.
ಶ್ರೀ ವಿಶ್ವೇಶ್ವರ ದೇವಾಲಯ ಹಾಗೂ ಸಮೀಪದಲ್ಲಿಯೇ ಇರುವ ಅರ್ಚಕರ ಮನೆಗಳು ಜಲಾವೃತವಾಗಿವೆ. ಅದೇ ತೆರನಾಗಿ ಪಟ್ಟಣದಲ್ಲಿರುವ ಅರ್ಜುಣಗಿ ಹೊಸಮಠ, ದಕ್ಷಿಣಾಮುಖಿ ಶ್ರೀ ಆಂಜನೇಯ ದೇವಾಲಯ ಸಹ ಜಲಾವೃತವಾಗಿದೆ.
ತಾಳಿಕೋಟೆ ಭಾಗದಲ್ಲಿ ಡೋಣಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಾತಿಹಾಳ, ಹಡಿಗನಾಳ ಸೇತುವೆ ಜಲಾವೃತವಾದ ಪರಿಣಾಮವಾಗಿ ಸಹಜವಾಗಿಯೇ ಕಲ್ಲದೇವನಹಳ್ಳಿ, ಶಿವಪೂರ, ಹರನಾಳ, ಮೂಕಿಹಾಳ ಮೊದಲಾದ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ, ತಾಳಿಕೋಟೆಯ ಹೊರಭಾಗದಲ್ಲಿ ಹನುಮ ಮಂದಿರ ಸಹ ಜಲಾವೃತವಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಬಲೇಶ್ವರ, ತಿಕೊಟಾ ತಾಲೂಕಿನಲ್ಲಿ ಡೋಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ಮುಂದುವರೆದಿದೆ. ದಾಶ್ಯಾಳ, ತೊನಶ್ಯಾಳ, ಕೋಟ್ಯಾಳ, ಸಾರವಾಡ ಭಾಗದಲ್ಲಿ ಡೋಣಿ ಬುಧವಾರವೂ ಸಹ ಅಪಯದ ಮಟ್ಟ ಮೀರಿ ಹರಿಯುತ್ತಿದೆ.
ಅದೇ ತೆರನಾಗಿ ಕಳ್ಳಕವಟಗಿ ಬಳಿ ನಿರ್ಮಿಸಲಾಗಿರುವ ಚೆಕ್ಡ್ಯಾಂ ತುಂಬಿ ಹರಿಯುತ್ತಿದೆ, ಸಮೀಪದಲ್ಲಿರುವ ಶ್ರೀ ಸಂಗಮನಾಥ ದೇವಾಲಯ ಈ ಬಾರಿಯೂ ಜಲಾವೃತವಾಗಿದೆ.
ಭೀಮಾ ನದಿಗೆ ನಿರ್ಮಿಸಲಾಗಿರುವ ಸೊನ್ನ ಬ್ಯಾರೇಜ್ಗೆ 1 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹರಿದು ಬಿಡಲಾಗುತ್ತಿದೆ, ಹೀಗಾಗಿ ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ, ಆಲಮಟ್ಟಿಯ ಶಾಸ್ತ್ರಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಸ್ಗಿಂತಲೂ ಅಧಿಕ ನೀರನ್ನು ಬಸವ ಸಾಗರ ಜಲಾಶಯಕ್ಕೆ ಹರಿಬಿಡಲಾಗುತ್ತಿತ್ತು, ಹೀಗಾಗಿ ಒಳ ಹರಿವು ಹೆಚ್ಚಾಗಿದೆ.
ನಗರದಲ್ಲಿ ಜನ ಸಂಚಾರ ವಿರಳ
ಬಿಜಾಪುರ ನಗರದಲ್ಲಿಯೂ ಮಳೆ ಆರ್ಭಟ ಜೋರಾಗಿದೆ. ಮಧ್ಯರಾತ್ರಿಯಿಂದಲೂ ಎಡಬಿಡದೇ ಮಳೆ ಸುರಿಯುತ್ತಿದ್ದು, ಸಂಜೆ ನಾಲ್ಕು ಗಂಟೆಯವರೆಗೂ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಪರಿಣಾಮವಾಗಿ ನಗರದ ತಗ್ಗು ಪ್ರದೇಶಗಳಾದ ಶಹಾಪೇಟಿ, ಬಾಗವಾನ ಕಾಲೊನಿ, ಕುಲಕರ್ಣಿ ಲೇಔಟ್, ನವಭಾಗ ಮೊದಲಾದ ಕಡೆಗಳಲ್ಲಿ ನೀರು ವ್ಯಾಪಕ ಪ್ರಮಾಣದಲ್ಲಿ ನಿಂತು ಸಂಚಾರಕ್ಕೆ ವ್ಯತ್ಯಯವಾಗಿದೆ.
ಜಿಲ್ಲೆಯಲ್ಲಿ 469 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ 469 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 6 ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಮೂರು ದಿನಗಳಿಂದ ಬಿಜಾಪುರ ಜಿಲ್ಲೆಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು ಮಣ್ಣಿನ ಮನೆಗಳೇ ಅಧಿಕವಾಗಿರುವ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾದ ಮನೆಗಳು ಜಖಂ ಆಗಿವೆ.
ಮನೆ ಹಾನಿಗೀಡಾಗಿರುವ ವಿಷಯದಲ್ಲಿ ಕೊಲ್ಹಾರ ತಾಲೂಕಿನಲ್ಲಿಯೇ ಅತೀ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೊಲ್ಹಾರ ತಾಲೂಕು ಒಂದರಲ್ಲೇ 6 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೆ, 79 ಮನೆಗಳು ಭಾಗಶಃ ಹಾನಿಗೀಡಾಗಿವೆ.
ಬಬಲೇಶ್ವರ ತಾಲೂಕಿನಲ್ಲಿ 15, ತಿಕೋಟಾ ತಾಲೂಕಿನಲ್ಲಿ 48, ಬಸವನ ಬಾಗೇವಾಡಿ 36, ನಿಡಗುಂದಿ ತಾಲೂಕಿನಲ್ಲಿ 56, ಮುದ್ದೇಬಿಹಾಳದಲ್ಲಿ 67, ತಾಳಿಕೋಟೆಯಲ್ಲಿ 39, ಇಂಡಿ ತಾಲೂಕಿನಲ್ಲಿ 36, ಚಡಚಣ ತಾಲೂಕಿನಲ್ಲಿ 07, ಸಿಂದಗಿ ತಾಲೂಕಿನಲ್ಲಿ 68 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 16 ಮನೆಗಳು ಸೇರಿದಂತೆ ಮೂರು ದಿನಗಳಲ್ಲಿ 469 ಮನೆಗಳಿಗೆ ಭಾಗಶ: ಹಾನಿಯಾಗಿದೆ.
ಒಡೆದ ಸಾರವಾಡ ಕೆರೆ ಒಡ್ಡು
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಸಪ್ಪನ ಕೆರೆಯ ಒಡ್ಡು ಒಡೆದಿದೆ. ಒಡೆದ ಕೆರೆಯಿಂದ ಅಕ್ಕ ಪಕ್ಕದ ಜಮೀನಿಗೆ ನುಗ್ಗಿದ ನೀರು ಮಳೆಯಿಂದ ನೆನೆದಿದ್ದ ಮಣ್ಣು ಸಮೇತ ಬೆಳೆಯನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಬಾಧಿತ ರೈತರು ಕಂಗಾಲಾಗಿದ್ದು, ಸರ್ಕಾರ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹೆಚ್ಚಿನ ಪ್ರದೇಶಗಳು ಪ್ರವಾಹದಿಂದ ತತ್ತರಿಸಿಹೋಗಿದೆ. ರೈತರು ಬೆಳೆದ ಬೆಳೆಗಳೆಲ್ಲಾ ಮಳೆಯ ನೀರಿನಿಂದ ನಾಶವಾಗಿದೆ.