ಕುರಿ ಸಾವಿಗೆ ಪರಿಹಾರ ಯೋಜನೆ ಮುಂದುವರಿಸಿ

ಜಿಲ್ಲಾ ಕುರಿಗಾರರ ಸಂಘ, ಇನ್ನಿತರ ಪ್ರಗತಿಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಕುರಿಗಳು ಮೃತಪಟ್ಟರೆ ಕುರಿಗಾರರಿಗೆ ಅಗತ್ಯ ಪರಿಹಾರ ನೀಡುವ ಯೋಜನೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಬಿಜಾಪುರ ಜಿಲ್ಲಾ ಕುರಿಗಾರರ ಸಂಘ ಹಾಗೂ ಕರ್ನಾಟಕ ಕುರಿ ಸಾಕಾಣಿಕೆ ಮತ್ತು ಮೇಕೆ ಸಂಘಗಳ ಮಹಾಮಂಡಳ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕುರಿಗಾರರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಹಾ ಮಂಡಳದ ಅಧ್ಯಕ್ಷ ಪಂಡಿತರಾವ ಚಿದ್ರಿ ಮಾತನಾಡಿ, ಹಿಂದಿನ ಸರಕಾರದ ಅವಧಿಯಲ್ಲಿ ಅನುಗೃಹ ಯೋಜನೆ ಅಡಿಯಲ್ಲಿ ಕುರಿಗಾರರು ಸಾಕಿದ ಕುರಿಗಳು ಅಸುನೀಗಿದರೆ ಐದು ಸಾವಿರ ರೂ. ಪರಿಹಾರ ಧನ ನೀಡಲಾಗುತ್ತಿತ್ತು, ಇದರಿಂದಾಗಿ ಕುರಿಗಾರರಿಗೆ ಒಂದಿಷ್ಟು ಆಧಾರವಾಗುತ್ತಿತ್ತು, ಈಗ ಈ ಯೋಜನೆಯನ್ನು ಸರ್ಕಾರ ನಿಲ್ಲಿಸಿದೆ, ಇದರಿಂದಾಗಿ ಕುರಿಗಾರರಿಗೆ ಆರ್ಥಿಕ ತೊಂದರೆ ಉಂಟಾಗುತ್ತಿದೆ. ಈ ಯೋಜನೆಯನ್ನು ಮತ್ತೆ ಮುಂದುವರೆಸಿ ಅಸುನೀಗುವ ಕುರಿಗಳಿಗೆ ಕೂಡಲೇ ಪರಿಹಾರ ನೀಡುವ ಮೂಲಕ ಕುರಿಗಾರರ ಹಿತ ಕಾಪಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮಾತನಾಡಿ, ಕುರಿಗಾರರಿಗೆ ಸಂಪೂರ್ಣವಾಗ ಉಚಿತವಾಗಿ ಟೆಂಟ್ ಹಾಗೂ ಕುರಿಗಾರರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡಬೇಕು, ಅನೇಕ ರೀತಿಯಲ್ಲಿ ಕುರಿಗಾರರು ತೊಂದರೆ ಎದುರಿಸುತ್ತಿದ್ದು, ಈ ರೀತಿಯ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದರೆ ಕುರಿಗಾರರ ಬದುಕು ಹಸನಾಗಿಸಬೇಕು ಎಂದು ಒತ್ತಾಯಿಸಿದರು.

ರೈತ ಪ್ರಾಂತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ, ಜಿಲ್ಲೆಯಲ್ಲಿರುವ ಗೋಮಾಳ ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಸಂರಕ್ಷಣೆ ಮಾಡಿ ಕುರಿಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ಕನವೇ ಸಂಘಟನೆಗಳ ಅಧ್ಯಕ್ಷ ಶೇಷರಾವ ಮಾನೆ ಮಾತನಾಡಿದರು. ತಿಕೋಟಾ ತಾ.ಪಂ. ಅಧ್ಯಕ್ಷೆ ಪ್ರಭಾವತಿ ನಾಟೀಕಾರ ಮಾತನಾಡಿದರು.

ಜಿಲ್ಲಾ ಕುರಿಗಾರರ ಸಂಘದ ಅಧ್ಯಕ್ಷ ಭೀರಪ್ಪ ಜುಮನಾಳ ಮಾತನಾಡಿದರು. ಪರಮಾನಂದ ಶ್ರೀಗಳು, ದೇವಕಾಂತ ಬಿಜ್ಜರಗಿ, ಸತೀಶ ಅಡವಿ, ಮಲ್ಲು ಬಿದರಿ, ರಾಜು ಕಗ್ಗೋಡ, ಶೇಖರ ತೋಳಮಟ್ಟಿ, ಭಿಮಾಂಕರ ಸಾಹುಕಾರ, ರವಿ ಕಿತ್ತೂರ, ಶ್ರೀಕಾಂತ ಸಂಗೋಗಿ, ಸುರೇಶ ಡೊಂಬಳೆ, ಅಮೋಘಸಿದ್ದ ಸಗಾಯಿ, ಮಹಾಮಂಡಳದ ನಿರ್ದೇಶಕರಾದ ಸಂಗು ವಾಲಿಕಾರ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಯಶವಂತ ಕೋಳೂರ, ಸಂಜು ಪಾಂಡ್ರೆ, ರಾಜು ಕಗ್ಗೋಡ ಲಕ್ಷ್ಮಣ ಪೂಜಾರಿ, ಅಟಲ್ ಕಳ್ಳಿಮನಿ, ಧರ್ಮಣ್ಣ ತೊಂಡಾಪೂರ, ಯಲ್ಲಪ್ಪ ಯಂಭತ್ನಾಳ, ಲಕ್ಷ್ಮಣ ಕರಾತ, ಪಾಂಡು ಕರಾತ, ಸಿದ್ದು ಹುಡೇದ, ರಾಜು ಯಂಟಮಾನ, ಇಟ್ಟಂಗಿಹಾಳ ದೊಡ್ಡಿ, ಹಡಗಲಿ ದೊಡ್ಡಿ, ಖರಾಡ ದೊಡ್ಡಿ, ಪಾಂಡ್ರೇನ ದೊಡ್ಡನ, ಕರಿಬೀರಪ್ಪನ ದೊಡ್ಡಿ, ತೊರವಿ, ದರ್ಗಾ, ಮುಂತಾದ ಗ್ರಾಮದ ಕುರಿಗಾರರು ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.