ರೈತರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ನೂತನ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಆರೋಪ

0

Gummata Nagari : Bijapur News

ಬಿಜಾಪುರ : ಪ್ರತಿಪಕ್ಷವಾಗಿರುವ ಕಾಂಗ್ರೆಸ್ ತನ್ನ ಜವಾಬ್ದಾರಿ ಮರೆತು ಮುಗ್ಧ ರೈತರನ್ನು ಎಪಿಎಂಸಿ, ಭೂ-ಸುಧಾರಣಾ ಕಾಯ್ದೆಗಳ ಬಗ್ಗೆ ಮಿಥ್ಯ ಸೃಷ್ಟಿಸಿ ರೈತರನ್ನು ಎತ್ತಿಕಟ್ಟುತಿದೆ, ಸತ್ಯವನ್ನು ಮರೆಮಾಚಿ ರೈತರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೆಸ್ಸಿಗರ ಈ ನಾಟಕ ನಡೆಯುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಬಿಜಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ನೂತನ ತಿದ್ದುಪಡಿ ಕಾಯ್ದೆ ಜಾರಿಯಿಂದ ಎಪಿಎಂಸಿ ಬಂದ್ ಆಗುವ ಪ್ರಮೇಯವೇ ಬರುವುದಿಲ್ಲ, ವಿನಾಕಾರಣ ಕಾಯ್ದೆ ಜಾರಿಯಿಂದ ಎಪಿಎಂಸಿ ಬಂದ್ ಆಗುತ್ತವೆ ಎಂಬ ಸುಳ್ಳನ್ನು ರೈತರಿಗೆ ಹೇಳುವ ಮೂಲಕ ರೈತರ ದಿಕ್ಕು ತಪ್ಪಿಸಲಾಗುತ್ತಿದೆ, ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಬೇಕು, ಎಲ್ಲಿ ಬೇಕಾದರೂ ಆತ ಬೆಳೆ ಮಾರಾಟ ಮಾಡುವ ಉದ್ದೇಶದಿಂದ ಈ ಕಾನೂನು ಜಾರಿಗೊಳಿಸಲಾಗಿದೆ, ಎಪಿಎಂಸಿ ಮುಚ್ಚುವುದೇ ಇಲ್ಲ ಎಂದು ಕೃಷಿ ಸಚಿವರು ಸಹ ಸ್ಪಷ್ಟಪಡಿಸಿದ್ದಾರೆ ಎಂದು ಕಡಾಡಿ ತಿಳಿಸಿದರು.

ತಿದ್ದುಪಡಿ ಕಾಯ್ದೆ ಜಾರಿಯಿಂದ ಕನಿಷ್ಠ ಬೆಂಬಲ ಬೆಲೆ ಸಹ ದೊರಕುವುದಿಲ್ಲ ಎಂಬ ಇನ್ನೊಂದು ಸುಳ್ಳನ್ನು ಪ್ರತಿಪಕ್ಷದವರು ಹರಡಿದ್ದಾರೆ, ದೇಶದ 22 ಆಹಾರ ಧಾನ್ಯಗಳಿಗೆ ಈಗಾಗಲೇ ಪ್ರಧಾನಿ ಮೋದಿ ಅವರು ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ, ಹೀಗಿರುವಾಗ ಬೆಂಬಲ ಬೆಲೆ ನೀಡಲು ನಿಲ್ಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು

ಭೂ-ಸುಧಾರಣಾ ಕಾಯ್ದೆ ಜಾರಿಗೆ ತಂದು ಬಂಡವಾಳಶಾಹಿಗಳಿಗೆ ಮಣೆ ಹಾಕಿದೆ ಎಂಬ ಸುಳ್ಳನ್ನು ಕಾಂಗ್ರೆಸ್ಸಿಗರು ಹರಡುತ್ತಿದ್ದಾರೆ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ರೈತರಿಗೆ ಈ ಎಲ್ಲ ಕಾಯ್ದೆಗಳ ಮಹತ್ವ ಹಾಗೂ ಅದರಲ್ಲಿರುವ ಅಂಶಗಳ ಬಗ್ಗೆ ತಿಳಿಹೇಳಲು ರೈತ ಮೋರ್ಚಾ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ರೈತ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ, ಕೇಂದ್ರ ಸರ್ಕಾರ ರೈತರ ಉತ್ಪನ್ನ ಹಾಗೂ ವಾಣಿಜ್ಯ ಮಸೂದೆ, ರೈತರ ಬೆಲೆ ಭರವಸೆ ಹಾಗೂ ಸೇವಾ ಒಪ್ಪಂದ ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಅದೇ ತೆರನಾಗಿ ರಾಜ್ಯ ಸರ್ಕಾರ ಭೂ-ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದೆ, ಈ ಎಲ್ಲ ಮಸೂದೆ ಹಾಗೂ ಕಾನೂನುಗಳು ಜನರ ಹಾಗೂ ರೈತರ ಹಿತರಕ್ಷಣೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ ಎಂದರು.

ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಹಾಗೂ ಬಿಲ್ ವಿತರಣೆಯಲ್ಲಿ ಆಗಿರುವ ವ್ಯತ್ಯಯದ ಕುರಿತು ಈಗಾಗಲೇ ಸಕ್ಕರೆ ಸಚಿವರೊಡನೆ ಮಾತನಾಡಿದ್ದೇನೆ, ಸಮಸ್ಯೆ ಬಗೆಹರಿಯಲಿದೆ ಎಂದು ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.

ಭೂ-ಸುಧಾರಣಾ ಕಾಯ್ದೆಯಲ್ಲಿ ಕೆಲವೊಂದು ಲೋಪ ಹಾಗೂ ಜಮೀನು ಖರೀದಿಗಾಗಿ ಇರುವ ವರಮಾನದ ನಿರ್ಬಂಧನೆಯಿಂದಾಗಿ ಅನೇಕರು ಪಕ್ಕದ ರಾಜ್ಯಕ್ಕೆ ಹೋಗಿ ಕೃಷಿ ಭೂಮಿ ಖರೀದಿ ಮಾಡುತ್ತಿದ್ದರು, ಈ ಎಲ್ಲ ನಿರ್ಬಂಧನೆಗಳನ್ನು ತೊಡೆದು ಹಾಕಿ ಹಾಗೂ ವಿವಿಧ ಲೋಪಗಳನ್ನು ಸರಿಪಡಿಸಲು ತಿದ್ದುಪಡಿ ತರಲು ಅನಿವಾರ್ಯವಾಗಿತ್ತು ಎಂದು ಕಡಾಡಿ ವಿಶ್ಲೇಷಿಸಿದರು.

ಕಾಂಗ್ರೆಸ್ಸಿಗರಿಗೆ ಈ ಕಾಯ್ದೆ ಬಗ್ಗೆ ಮಾತನಾಡುವ ಹಕ್ಕಿಲ್ಲ, ಅವರೇ ಈ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಈಗ ಅವರು ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ, ಈಗ ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ರವಿಕಾಂತ ಬಗಲಿ, ಶಿವರುದ್ರ ಬಾಗಲಕೋಟ, ಮಲ್ಲಮ್ಮ ಜೋಗೂರ, ಕಾಸುಗೌಡ ಬಿರಾದಾರ, ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಆರ್.ಟಿ. ಪಾಟೀಲ, ಲೋಕೇಶಗೌಡ, ಜಿ.ಪಂ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.