ಬಿಜಾಪುರ ಜಿಲ್ಲೆ ನೀರಾವರಿ ಯೋಜನೆಗೆ ಕೊಟ್ಯಾಂತರ ಖರ್ಚು

ಶಾಸಕ ಎ.ಎಸ್.ಪಾಟೀಲ ನಡಹಳ್ಳಿಗೆ ಮಾಜಿ ಜನಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ್ ತಿರುಗೇಟು

0

ಸತತ ಬರ ಪೀಡಿತ ಬಿಜಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ನನ್ನ ಅವಧಿಯಲ್ಲಿ ಕೈಗೊಂಡ ಕಾರ್ಯಗಳು ರಾಜ್ಯ ನೀರಾವರಿ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಇದನ್ನು ಅಂದಿನ ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿಯವರೆ ಪ್ರಶಂಸಿಸಿದ್ದಾರೆ. ನಾನು ನೀರಾವರಿ ವಿಷಯ ಬಗ್ಗೆ ಮಾತನಾಡಿದಾಗಲೆಲ್ಲ, ಬುದ್ಧಿಗೇಡಿಯೊಂದು ಸತತವಾಗಿ ಮೈ ಪರಚಿಕೊಳ್ಳುತ್ತದೆ. ಅದು ಒಂದು ರೀತಿಯ ವಾಸಿಯಾಗದ ಕಾಯಿಲೆಯಾಗಿದೆ. ಇಂತಹ ಕಾಯಿಲೆಗೆ ಔಷಧಿ ಇಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Gummata Nagari : Bijapur News

ಬಿಜಾಪುರ : ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 5ವರ್ಷಗಳ ಅವಧಿಯಲ್ಲಿ ಬಿಜಾಪುರ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಒಟ್ಟು ರೂ.14,482 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿ, ರೂ. 9,809 ಕೋಟಿ ಹಣ ಖರ್ಚು ಮಾಡಲಾಗಿತ್ತು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದಿನ 2008-2013ರವರೆಗಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಬಿಜಾಪುರ ಜಿಲ್ಲೆಯ ನೀರಾವರಿ ಯೋಜನೆಗಳ ಅನುಮೋದಿತ ಮೊತ್ತ ರೂ.1,284ಕೋಟಿ ಆಗಿದ್ದು, ಅದರಲ್ಲಿ ರೂ.530ಕೋಟಿ ಮೊತ್ತವನ್ನು ಮಾತ್ರ ಖರ್ಚು ಮಾಡಲಾಗಿತ್ತು. 2013ರಿಂದ 2018ರ ಅವಧಿ ಬಿಜಾಪುರ ಜಿಲ್ಲೆಯ ನೀರಾವರಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿದ್ದು, ಅಂದು ಕೈಗೊಂಡ ಯೋಜನೆಗಳಿಂದಲೇ ಇಂದು ಜಿಲ್ಲೆಯ ಬಹುತೇಕ ಜನ ನೆಮ್ಮದಿಯಿಂದ ಇದ್ದಾರೆ. ನಂತರದ ಕುಮಾರಸ್ವಾಮಿಯವರ ನೇತೃತ್ವದ ಸಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ರೇವಣಸಿದ್ದೇಶ್ವರ ಯೋಜನೆಗೆ 2800ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಸದ್ಯದ ಬಿಜೆಪಿ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಆಡಳಿತ ಬಂದ ನಂತರ ಕಳೆದ ವಾರ ನಡೆದ ನೀರಾವರಿ ನಿಗಮಗಳ ಬೋರ್ಡ್ ಸಭೆಯಲ್ಲಿ ಬಿಜಾಪುರ ಜಿಲ್ಲೆಗೆ ಸಂಬಂಧಿಸಿದಂತೆ 16ಕೆರೆಗಳ ತುಂಬಿಸುವ ರೂ.140ಕೋಟಿ ಮೊತ್ತದ ಯೋಜನೆಗೆ ಹಾಗೂ ನನ್ನ ಅವಧಿಯಲ್ಲಿ ನಿರ್ಮಿಸಿರುವ ಕಾಲುವೆಗಳ ಮುಖಾಂತರ ಹಳ್ಳಗಳಿಗೆ ನೀರು ಹರಿಸುವ ರೂ.59ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಅದಕ್ಕಾಗಿ ನಾನು ಈಗಾಗಲೇ ಆಭಾರ ವ್ಯಕ್ತಪಡಿಸಿದ್ದೇನೆ. ಅಲ್ಲದೆ ಈ ಎರಡು ಯೋಜನೆಗಳು ಕೂಡ ನಾನು ರೂಪಿಸಿ, ಸತತ ಪರಿಶ್ರಮ ಪಟ್ಟು, ನಿರಂತರ ಫಾಲೋಅಫ್ ಮಾಡಿದ ಕಾರಣ ಅನುಮೋದನೆ ದೊರಕಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಮಹತ್ವಾಕಾಂಕ್ಷಿ ಮುಳವಾಡ ಏತನೀರಾವರಿ ಹಂತ-3 ರೂ.5,398.55ಕೋಟಿ, ಚಿಮ್ಮಲಗಿ ಏತನೀರಾವರಿ ಯೋಜನೆ ರೂ.2,148.02ಕೋಟಿ, ಇಂಡಿ ಏತನೀರಾವರಿ ಯೋಜನೆ ವಿಸ್ತರಣೆ ರೂ.367.56ಕೋಟಿ, ಬೂದಿಹಾಳ-ಪಿರಾಪೂರ ಏತನೀರಾವರಿ ಯೋಜನೆ-ಮುಖ್ಯಸ್ಥಾವರ ರೂ.840ಕೋಟಿ, ಚಡಚಣ ಏತನೀರಾವರಿ ಯೋಜನೆ-ಮುಖ್ಯಸ್ಥಾವರ ರೂ.413.20ಕೋಟಿ, ನಾಗರಬೆಟ್ಟ ಏತನೀರಾವರಿ ಯೋಜನೆ ರೂ.170.70ಕೋಟಿ, ಆಲಮಟ್ಟಿ ಎಡದಂಡೆ ಕಾಲುವೆ ಆಧುನೀಕರಣ ರೂ.112.46ಕೋಟಿ, ತುಬಚಿ-ಬಬಲೇಶ್ವರ ಯೋಜನೆ ರೂ.3,572ಕೋಟಿ, ಕೆರೆ ತುಂಬುವ ಒಟ್ಟು 6ಯೋಜನೆಗಳು ರೂ.442.71ಕೋಟಿ, ಆಲಮಟ್ಟಿ ಮತ್ತು ನಾರಾಯಣಪೂರ ಆಣೆಕಟ್ಟುಗಳ ಪುನಶ್ಚೇತನ ಕಾಮಗಾರಿಗೆ ರೂ.184.50ಕೋಟಿ, ರಸ್ತೆ, ಸೇತುವೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಿಗೆ ರೂ.120ಕೋಟಿ ಸೇರಿದಂತೆ ಬಿಜಾಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಒಟ್ಟು ಮೊತ್ತ ರೂ.14,482ಕೋಟಿ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಏಷ್ಯಾದಲ್ಲಿಯೇ ಪ್ರಥಮ ತಿಡಗುಂದಿ ಜಲಸೇತುವೆ ಮಾಡಿದ್ದು ಯಾರು? ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದು ಯಾರು? ಜಿಲ್ಲಾದ್ಯಂತ ಸಾವಿರಾರು ಕಿ.ಮೀ. ಕಾಲುವೆಗಳನ್ನು 5ವರ್ಷಗಳ ಅವಧಿಯಲ್ಲಿ ನಿರ್ಮಿಸಿದ್ದು ಯಾರು? ಎಂಬುದು ಜಿಲ್ಲೆಯ ಸಾಮಾನ್ಯ ರೈತನಿಗೂ ಗೊತ್ತಿರುವ ವಿಷಯವಾಗಿದೆ.

ಯುಕೆಪಿ ಯೋಜನೆಗೆ ಹಿಂದಿನ ಸರ್ಕಾರ 17,002ಕೋಟಿ ಅನುಮೋದನೆಯ ಅಂದಾಜು ವೆಚ್ಚಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ಪರಿಷ್ಕರಿಸಿ, ಸ-ವಿಸ್ತಾರ ಯೋಜನಾ ವರದಿಯೊಂದಿಗೆ ಮತ್ತು ನೂತನ ಭೂ-ಸುಧಾರಣಾ ಕಾಯ್ದೆಯ ಮಾನದಂಡಗಳ ಅನುಸರಿಸಿ, 52ಸಾವಿರ ಕೋಟಿಗೆ ಮಂಜೂರಾತಿ ನೀಡಿದ್ದು, ನೀರಾವರಿ ಯೋಜನೆಗಳ ಕುರಿತು ನಮ್ಮ ಬದ್ದತೆಗೆ ಸಾಕ್ಷಿ ಎಂದಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.