ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ನಿಗದಿಗೆ ಆಗ್ರಹ

0

Gummata Nagari : Bijapur News

ಬಿಜಾಪುರ : ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಕಳೆದ ಜುಲೈ ತಿಂಗಳ 20 ದಿನಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಿ ಹೊರಾಟ ಮಾಡಿದರೂ ಸಹ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಲ್ಲ, ಮುಖ್ಯಮಂತ್ರಿಗಳು ವೇತನ ನೀಡುವ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟದಿಂದ ಹಿಂದೆ ಸರಿದಿದ್ದರು, ಆದರೆ ಇಂದಿಗೂ ಅವರ ಬೇಡಿಕೆ ಈಡೇರಿಲ್ಲ ಎಂದರು. ಆಶಾ ಕಾರ್ಯಕರ್ತೆಯರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ಕಾಯಾ ವಾಚಾ ಮನಸಾ ಜಾರಿಗೊಳಿಸುತ್ತ ಬಂದಿದ್ದಾರೆ. ಸದ್ಯದ ಕೋವಿಡ್ ಹೆಮ್ಮಾರಿಯ ಪಿಡುಗಿನ ಕಾಲದಲ್ಲಂತೂ ಅವರ ಅವಿರತ ಶ್ರಮದ ಸೇವೆ ಅತ್ಯಂತ ಶ್ಲಾಘನೀಯ ಎಂದರು.

ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯಚಟುವಟಿಕೆಗಳನ್ನು ಆನಲೈನ್ ಪೋರ್ಟ್ಲ್ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018 ಮತ್ತು 2019 ನಡುವೆ 15 ತಿಂಗಳುಗಳಲ್ಲಿ ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ ಸಾವಿರಾರು ರೂ. ಹಣ ಅವರ ಕೈ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತೆಯರ ದುಡಿತ ದಿನೇ ದಿನೇ ಹೆಚ್ಚಿತೇ ಹೊರತು ದುಡಿದ ಹಣ ಮಾತ್ರ ಕೈಗೆ ಬರಲಿಲ್ಲ. ಇದರಿಂದ ಮುಂದುವರಿದ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಭಾರತಿ ದೇವಕತೆ ಮಾತನಾಡಿ ನಾವು ನಮ್ಮ ಬೇಡಿಕೆಗಳಿಗಾಗಿ ರಾಜ್ಯ ಸರ್ಕಾರವು ಬೇಡಿಕೆಗಳ ಬಗ್ಗೆ ಸೂಕ್ತಕ್ರಮ ಕೈಗೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡಲು ಮನವಿ ಮಾಡಿಕೊಳ್ಳುತ್ತೇವೆ ಎಂದು ವಿನಂತಿಸಿದರು.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ವೇತನ ನಿಗದಿಗೊಳಿಸುವುದು, ನಿಯಮಿತವಾಗಿ ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು, ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಜರ್ ಮೊದಲಾದ ಪರಿಕರಗಳನ್ನು ಒದಗಿಸುವುದು, ಬಾಕಿ ಇರುವ ಪ್ರೋತ್ಸಾಹಧನ ಆಶಾಗೆ ಒದಗಿಸಲು ಸೂಕ್ತಕ್ರಮ ಕೈಗೊಳ್ಳಬೇಕು, ಕೋವಿಡ್ ಪ್ರೋತ್ಸಾಹನ ಧನ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಕೈ ಸೇರುವಂತೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಅಂಬಿಕಾ ಒಳಸಂಗ, ಮಲ್ಲಮ್ಮ ಹಡಪದ ಮೊದಲಾದವರು ಪಾಲ್ಗೊಂಡಿದ್ದರು

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.