ಹಲವರ ಬಂಧನ, ಗಾಂಜಾ, ಮದ್ಯ ವಶ

ಬಿಜಾಪುರ ಜಿಲ್ಲೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ

0

Gummata Nagari

Vijayapura News

ಬಿಜಾಪುರ : ಜಿಲ್ಲೆಯಲ್ಲಿ ಗಾಂಜಾ, ಮಾವಾ ಹಾಗೂ ಅಕ್ರಮ ಸಾರಾಯಿಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಬಿಜಾಪುರ ಜಿಲ್ಲೆಯ ಪೊಲೀಸರು ನೂರಾರು ಸಂಖ್ಯೆಯ ಪ್ರಕರಣ ದಾಖಲಿಸಿ, ಹಲವರನ್ನು ದಸ್ತಗೀರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಅವರು ಬಿಜಾಪುರ ಜಿಲ್ಲೆಯಲ್ಲಿ ಗಾಂಜಾ, ಮಾವಾ, ಸಾರಾಯಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಖಡಕ್ ಕಾರ್ಯಕ್ರಮ ರೂಪಿಸಿದ್ದಾರೆ. 570ಕ್ಕೂ ಹೆಚ್ಚು ದಾಭಾ, ಅಂಗಡಿಗಳ ಮೇಲೆ ದಾಳಿ ನಡೆಸಿ 267.97 ಲೀ. ಅಕ್ರಮ ಮದ್ಯ, 138.38 ಕೆಜಿ ಗಾಂಜಾ ಮೊದಲಾದವುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

ಈ ಕುರಿತು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್, ಬಿಜಾಪುರ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ, ಗಾಂಜಾ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಕಾರ್ಯಾಚರಣೆ ಅತ್ಯಂತ ಚುರುಕಿನಿಂದ ನಡೆದಿದೆ ಎಂದರು.

ಅಕ್ರಮ ಮಧ್ಯವನ್ನು ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ 570 ಹೋಟೆಲ್, ದಾಭಾಗಳ ಮೇಲೆ ದಾಳಿ ನಡೆಸಲಾಗಿದ್ದು, 102 ಪ್ರಕರಣಗಳನ್ನು ದಾಖಲಿಸಿಕೊಂಡು 102 ಜನರನ್ನು ದಸ್ತಗೀರಿ ಮಾಡಲಾಗಿದೆ. ಬಂಧಿತ ಆರೋಪಿಗಳಿಂದ 267.97 ಲೀ. ಅಕ್ರಮ ಮದ್ಯವನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.

ಅದೇ ತೆರನಾಗಿ ಕಳೆದೊಂದು ವಾರದಲ್ಲಿ ಅನೇಕ ಕಡೆ ದಾಳಿ ನಡೆಸಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಲಾಗಿದೆ. ಒಂದೇ ವಾರದಲ್ಲಿ 138.92 ಕೆಜಿ ಗಾಂಜಾ ಜಪ್ತು ಮಾಡಿಕೊಳ್ಳಲಾಗಿದೆ. ಆ ಪೈಕಿ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 72 ಕೆಜಿ, ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ಕೆಜಿ ಗಾಂಜಾ, ಅಪರಾಧ ನಿಯಂತ್ರಣ ತಂಡದವರು ದಾಳಿ ನಡೆಸಿದ 50 ಕೆಜಿ ಗಾಂಜಾ, ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1.3 ಕೆಜಿ ಗಾಂಜಾ ಸೇರಿದಂತೆ ಒಟ್ಟು 138.92 ಕೆಜಿ ಗಾಂಜಾ ಜಪ್ತು ಮಾಡಿಕೊಳ್ಳಲಾಗಿದ್ದು, ಹೊಲದಲ್ಲಿ ಗಾಂಜಾ ಬೆಳೆದ ಆರೋಪದ ಮೇರೆಗೆ ಒಟ್ಟು 07 ಜನರನ್ನು ದಸ್ತಗೀರಿ ಮಾಡಲಾಗಿದೆ ಎಂದು ವಿವರಿಸಿದರು.

ಅಕ್ರಮ ಮಾವಾ ಜಪ್ತಿ

ಮಾವಾ ಬಿಜಾಪುರ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಹಾಗಿದ್ದರೂ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಮಾವಾ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದೊಂದು ವಾರದಲ್ಲಿ 59, 460 ರೂ. ಮೌಲ್ಯದ 765ಮಾವಾ ಪ್ಯಾಕೇಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಐವರು ಆರೋಪಿಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.

ಆ ಪೈಕಿ ದೇವಹಿಪ್ಪರಗಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 130 ಮಾವಾ ಪ್ಯಾಕೇಟ್, ಗಾಂಧೀಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಬಂದಿಸಿ ಅವರಿಂದಲೂ ಅಪಾರ ಪ್ರಮಾಣದ ಮಾವಾ ಜಪ್ತು ಮಾಡಿಕೊಳ್ಳಲಾಗಿದ್ದು, ಬಂಧಿತರ ಮೇಲೆ ಕೊಟ್ಪಾ ಕಾಯ್ದೆ – 2003 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಗರವಾಲ್ ಮಾಹಿತಿ ನೀಡಿದರು.

ಅಕ್ರಮ ಶ್ರೀಗಂಧ ಸಾಗಾಟ : ಮೂವರ ಬಂಧನ

ಅಕ್ರಮವಾಗಿ ಬೈಕ್ ಮೇಲೆ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಇಂಡಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿAದ 17 ಕೆಜಿ ಶ್ರೀಗಂಧ ಜಪ್ತು ಮಾಡಿಕೊಳ್ಳಲಾಗಿದ್ದು, ಬಂಧಿತರು ಅಹಿರಸಂಗ ಗ್ರಾಮದಲ್ಲಿ ಬೈಕ್ ಮೇಲೆ ಅಕ್ರಮವಾಗಿ ಶ್ರೀಗಂಧ ಸಾಗಾಟದ ವೇಳೆ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ ಎಂದು ಅಗರವಾಲ್ ಮಾಹಿತಿ ನೀಡಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.