11 ಕಳ್ಳರ ಬಂಧನ: ಚಿನ್ನಾಭರಣ ಜಪ್ತಿ

ಬಿಜಾಪುರ ನಗರದ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು

0

Gummata Nagari : Vijayapura News

ಬಿಜಾಪುರ : ಬಿಜಾಪುರ ನಗರದಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದು, ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಜನ ಮನೆಗಳ್ಳರನ್ನು ಬಂಧಿಸಲಾಗಿದ್ದು, 703 ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಬಿಜಾಪುರ ನಗರ ವ್ಯಾಪ್ತಿಯ ಆದರ್ಶನಗರ, ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಓರ್ವ ಆರೋಪಿ ಬಂಧಿತನಾಗಿದ್ದಾನೆ.

ಬಂಧಿತ ಆರೋಪಿಯನ್ನು ಬಿಜಾಪುರದ ಪಾಣಿನಗರ ನಿವಾಸಿ, ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ರಾಜು ಶಿವಾನಂದ ಹೊಸಮನಿ (25) ಎಂದು ಗುರುತಿಸಲಾಗಿದೆ. ಆರೋಪಿಯಿಂದ 233 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ 12.38 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

ಆದರ್ಶ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ವರ್ಷ ಅಕ್ಟೋಬರ್ 5 ರಂದು ನಡೆದಿದ್ದ ಮನೆ ಕಳ್ಳತನ, 2019 ರ ಅಕ್ಟೊಬರ್ 09 ರಂದು ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ಕಳೆದ ವರ್ಷ ಮೇ.17 ರಂದು ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಹಾಗೂ ಅದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷದ ನವ್ಹೆಂಬರ್ 14 ರಂದು ನಡೆದ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಜಾಪುರ ಶಹರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಲು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪೊಲೀಸ್ ತನಿಖಾ ತಂಡದ ಸದಸ್ಯರು ಸೊಲ್ಲಾಪೂರ ನಾಕಾ ಬಳಿ ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಆರೋಪಿಯನ್ನು ತಡೆದು ವಿಚಾರಣೆ ನಡೆಸಿದಾಗ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.

ಅದೇ ತೆರನಾಗಿ ಕಳೆದ ಆ.23ರಂದು ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಸ್ವರೂಪ್ ರಮೇಶ ಚಲವಾದಿ, ಗೌಸ್‌ಪಾಕ್ ಉಸ್ಮಾನ್‌ಶೇಖ್ ನಿಸಾರಮಡ್ಡಿ, ಸತೀಶ ಧನರಾಜ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 190 ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ.

ಅದೇ ತೆರನಾಗಿ ಕಳೆದ ಆಗಸ್ಟ್ 20 ರಂದು ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ವಿರೇಶ ಶಿವಾನಂದ ಬಂಥನಾಳ, ಕಿರಣ ಶರ್ಮಾ ಎಂದು ಗುರುತಿಸಲಾಗಿದ್ದು, ಈ ಪ್ರಕರಣಲ್ಲಿ ಓರ್ವ ಬಾಲಾಪರಾಧಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳಿಂದ 190 ಗ್ರಾಂ ಬಂಗಾರ ಜಪ್ತು ಮಾಡಿಕೊಳ್ಳಲಾಗಿದೆ.

ಕಳೆದ ಆಗಸ್ಟ್ 26 ರಂದು ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ನಡೆದಿದ್ದ ಇನ್ನೊಂದು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಮನ್ ಖಾದರಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 90 ಗ್ರಾಂ ಚಿನ್ನಾಭರಣ ಜಪ್ತು ಮಾಡಿಕೊಳ್ಳಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.