ಕಳಪೆ ಕಾಮಗಾರಿಗೆ ಯಾವಾಗಲೂ ವಿರೋಧ

ತಾಳಿಕೋಟೆ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಘೋಷಣೆ

0

Gummata Nagari : Bijapur News

ತಾಳಿಕೋಟೆ : ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ನಾವು ಶಾಸಕರ ಬೆಂಬಲಿಗರು ಇಲ್ಲಿ ಪಕ್ಷ, ಜಾತಿ, ಧರ್ಮ ಬೆರೆಸುವುದಿಲ್ಲ. ಆದರೆ ಕಳಪೆ ಕಾಮಗಾರಿಯಾದರೆ ಅದನ್ನು ವಿರೋಧಿಸುತ್ತೇವೆ ಎಂದು ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ಸದಸ್ಯರ ಜೊತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳಪೆ ಕಾಮಗಾರಿ ವಿರೋಧಿಸಿದರೆ ಶಾಸಕರ ವಿರೋಧಿಗಳು ಎನ್ನುವ ಪಟ್ಟ ಕಟ್ಟಿ ತಮ್ಮ ಬೇಳೆ ಬೇಯಿಸುವ ಕಾರ್ಯ ಬೇಡ.

ಕಳಪೆ ಕಾಮಗಾರಿಗೆ ಯಾವಾಗಲೂ ನಮ್ಮ ವಿರೋಧ ಇದ್ದೇ ಇರುತ್ತದೆ. ಶಾಸಕರು ಪಟ್ಟಣದ ಅಭಿವೃದ್ಧಿಗೆ ಹತ್ತುಹಲವು ಯೋಜನೆ ಹೊತ್ತು ತರುತ್ತಿದ್ದಾರೆ ಅದರಿಂದ ಪಟ್ಟಣದ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ದಿಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು. ಇಲ್ಲಿ ರಾಜಕೀಯ ಬೇಡ. ಅವರ ಪಕ್ಷದವರಲ್ಲ, ಬೆಂಬಲಿಗರಲ್ಲ ಎಂದು ಪಟ್ಟಣಕ್ಕೆ ಆಗುವ ಕಾಮಗಾರಿಗಳನ್ನು ಬೇಡ ಎಂದರೆ ನಾವು ಜನವಿರೋಧಿಗಳಾಗುತ್ತೇವೆ.

ಇಲ್ಲಿ ಪುರಸಭೆ ಸದಸ್ಯರೆಲ್ಲ ಒಂದೇ, ವಾರ್ಡ ಯಾವುದೇ ಇರಲಿ ಅಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು ಪಟ್ಟಣದ ಒಬ್ಬ ನಾಗರಿಕರಾಗಿ ಗುಣಮಟ್ಟವಿಲ್ಲವಾದರೆ ಅದಕ್ಕೆ ವಿರೋಧಿಸುತ್ತೇವೆ. ಗುಣಮಟ್ಟ ಗುರುತಿಸಲು ನಾವು ತಂತ್ರಜ್ಞರಲ್ಲವಾದರೂ ಕಳಪೆ ಎಂಬುದಕ್ಕೆ. ಅದು ನಿಜವೋ ಸುಳ್ಳೋ ಎಂದು ನಾವು ಸಂಬಂಧಿಸಿದ ಅಧಿಕಾರಿಗಳನ್ನು ಕೇಳುತ್ತೇವೆ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ದರಾಗಿರುತ್ತೇವೆ.

ಆದರೆ ಅವರು ಪ್ರಮಾಣಿಕರಿಸದೇ ಬಿಲ್ಲು ಮಾಡಲು ಬಿಡುವುದಿಲ್ಲ. ನಾವು ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಬೆಂಬಲಿಗರು ಸ್ವ ಹಿತಾಸಕ್ತಿ ಇಟ್ಟುಕೊಂಡು ಕೆಲಸ ಮಾಡುವುದಿಲ್ಲ. ಅದನ್ನು ಜನ ತೀರ್ಮಾನಿಸಿದ್ದರಿಂದಲೆ ಮೂರನೆ ಬಾರಿ ಆಯ್ಕೆಯಾಗಿದ್ದೇನೆ ಎಂದರು.

ಸರಿತಪ್ಪು ತಿಳಿಯದಷ್ಟು ದಡ್ಡರಲ್ಲ ನಾವು. ಕಳಪೆ ಮಾಡಿ ಶಾಸಕರ ಹೆಸರಿಗೆ ಕೆಟ್ಟ ಹೆಸರು ತರುವುದು ಬೆಡ. ಸ್ವತ: ಶಾಸಕರೇ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನಿಡಿದ್ದಾರೆ. ಅದನ್ನು ಕೇಳುವುದು ಶಾಸಕರ ವಿರುದ್ಧವಲ್ಲ ಅದು ಅವರಿಗೆ ಬೆಂಬಲ ನೀಡಿದಂತೆ ಎಂದರು.

ಶಿವಾಜಿ ಸರ್ಕಲ್‌ದಿಂದ ಬಸ್ ನಿಲ್ದಾಣದವರೆಗೆ ದ್ವಿ ಚರಂಡಿ ನಿರ್ಮಾಣ ನಡೆದಿದೆ. ಅಲ್ಲಿ ಈ ಹಿಂದೆ ನಿರ್ಮಿಸಿದ್ದ ಗಟ್ಟಿಮುಟ್ಟಾದ ಕಲ್ಲಿನ ಚರಂಡಿ ಇತ್ತು. ಅದನ್ನು ಕಿತ್ತಿ ತೆಗೆಯಲೇ ಐದಾರು ದಿನ ಹಿಡಿದವು. ಹೀಗೆ ಗುಣಮಟ್ಟದಲ್ಲಿರುವುದನ್ನು ಹಾಳು ಮಾಡಿ ಮತ್ತೆ ನಿರ್ಮಾಣ ಮಾಡುವ ಬದಲು ಅದನ್ನು ಬೇರೆ ಕಡೆ ಮಾಡಬಹುದಿತ್ತು. ಯೋಜನೆ ಮಾಡುವಾಗ ಅಂತಹದ್ದರ ಕಡೆಗೆ ಪ್ರತಿ ಸದಸ್ಯರ ಗಮನ ಇರಬೇಕು. ಮುಂದೆ ನಡೆಯುವ ಕಾಮಗಾರಿಯಾದರೂ ಗುಣಮಟ್ಟದ್ದಿರಲಿ ಎಂದರು.

25 ವರ್ಷಗಳ ಹಿಂದೆ ಏನಾಗಿತ್ತು ಎಂಬುದು ನಮಗೆ ಬೇಡ. ಇರುವ ಐದು ವರ್ಷಗಳ ಅವಧಿಯಲ್ಲಿ ಆದರೂ ಗುಣಮಟ್ಟದ ಕೆಲಸ ಮಾಡುವುದಷ್ಟೇ ನಮ್ಮ ಗುರಿ ಎಂದು ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ ಹೇಳಿದರು.

ಸದಸ್ಯರಾದ ಅಣ್ಣಪ್ಪ ಜಗತಾಪ, ಪರಶುರಾಮ ತಂಗಡಗಿ, ಡಿ.ವಿ.ಪಾಟೀಲ, ಮುಸ್ತಫಾ ಚೌದ್ರಿ, ಕಾಶಿನಾಥ ಕುಂಬಾರ, ಮಂಜೂರ ಬೇಫಾರಿ ಖಾಜಾಹುಸೇನ ಬಸರಿ, ರಾಜು ಚಿತ್ತರಗಿ, ಹುಸೇನಸಾಬ ಜಮಾದಾರ, ಯಾಸೀನ ಮಮದಾಪುರ, ಬಸು ಹೊಟ್ಟಿ, ಅಲ್ಲಾಭಕ್ಷ ಮನಗೂಳಿ, ಪ್ರಭು ಬಿರಾದಾರ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.