ಪಂಚಮಸಾಲಿ ಸಮುದಾಯದವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡಿ

0

Gummata Nagari : Bijapur News

ಬಿಜಾಪುರ : ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದವರಿಗೆ ಮಂತ್ರಿಸ್ಥಾನ ನೀಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪಂಚಮಸಾಲಿ ಸಮಾಜ ಸ್ವಾಭಿಮಾನಿ ಸಮಾಜ, ಹೀಗಾಗಿ ಮಂತ್ರಿಸ್ಥಾನಕ್ಕಿಂತಲೂ ಪಂಚಮಸಾಲಿ ಸಮಾಜದ ಹಾಗೂ ಸಹೋದರ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಪ್ರವರ್ಗ 2ಎಗೆ ಸೇರ್ಪಡೆ ಮಾಡುವ ಹೋರಾಟವೇ ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.

ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಪಂಚಮಸಾಲಿ ಸಮಾಜದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ 13 ಜನ ಶಾಸಕರಿದ್ದಾರೆ, ಅವರಲ್ಲಿ ಯಾರಿಗಾದರೂ ಮೂವರಿಗೆ ಕನಿಷ್ಠ ಪಕ್ಷ ಇಬ್ಬರಿಗಾದರೂ ಸಚಿವ ಸ್ಥಾನ ನೀಡಿ ಎಂದು ಕೇಳಿಕೊಂಡಿದ್ದೇವು, ನಮಗೂ ಕೇಳಿ ಕೇಳಿ ಸಾಕಾಗಿದೆ, ಪಂಚಮಸಾಲಿ ಸಮಾಜದವರಿಗೆ ಸಚಿವ ಸ್ಥಾನ ನೀಡಲು ಅದೇಕೋ ಮುಖ್ಯಮಂತ್ರಿಗಳು ನಿಧಾನಗತಿ ಅನುಸರಿಸುತ್ತಿದ್ದಾರೆ, ಅನೇಕ ಬಾರಿ ಈ ಕುರಿತು ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ವಿನಂತಿಸಿದ್ದೇವೆ, ಈಗ ನಮ್ಮ ಹೋರಾಟ ಏನಿದ್ದರೂ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವುದಕ್ಕಾಗಿ, ಮಂತ್ರಿ ಸ್ಥಾನಕ್ಕಿಂತಲೂ ಮೀಸಲಾತಿ ಮುಖ್ಯ ಎನ್ನುವ ಧ್ಯೇಯವನ್ನಿಟ್ಟುಕೊಂಡು ಮತ್ತೊಂದು ಹಂತದ ಹೋರಾಟಕ್ಕೆ ಅಣಿಯಾಗಲಾಗುವುದು ಎಂದರು.

ಪಂಚಮಸಾಲಿ ಸಮಾಜವನ್ನು ಪ್ರವರ್ಗ 2 ಎನ್ನು ಸೇರ್ಪಡೆ ಮಾಡಬೇಕು ಎಂದು ಹಲವಾರು ದಿನಗಳಿಂದ ಹೋರಾಟ ನಡೆಯುತ್ತಲೇ ಇದೆ, ವೀರಪ್ಪ ಮೋಯ್ಲಿಯಾದಿಯಾಗಿ ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರೆಗೂ ಎಲ್ಲ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಬೇಡಿಕೆ ಈಡೇರಿಕೆಯಾಗಿಲ್ಲ, ಹೀಗಾಗಿ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವ ಕಾರ್ಯ ಕೈಗೊಳ್ಳಲಾಗುವುದು.

ಪಂಚಮಸಾಲಿ ಸಮಾಜ ಸಹನೆ, ತಾಳ್ಮೆಯಿಂದ ಹೋರಾಟ ನಡೆಸಿದರೂ ನಮ್ಮ ಬೇಡಿಕೆಗೆ ಮನ್ನಣೆ ದೊರಕಿಲ್ಲ, ಈ ಹಿನ್ನೆಲೆಯಲ್ಲಿ ಇದೇ ದಿ.28 ರಂದು ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ನಮ್ಮ ಹಕ್ಕೊತ್ತಾಯ ಮಂಡಿಸಲಾಗಿದೆ. ಮೀಸಲಾತಿ ಸಂವಿಧಾನ ಕರುಣಿಸಿರುವ ಹಕ್ಕು, ಈ ನ್ಯಾಯಯುತವಾದ ಹಕ್ಕನ್ನು ನಾವು ಕೇಳುತ್ತೇದ್ದೇವೆ ಎಂದರು. ಪಂಚಮಸಾಲಿ ಸಮಾಜ ಬಿಜಾಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ, ಈ ಆಂದೋನಲಕ್ಕೆ ಬಿಜಾಪುರ ಜಿಲ್ಲೆಯ ಸಮಸ್ತ ಪಂಚಮಸಾಲಿ ಬಾಂಧವರು ಕೈ ಜೋಡಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ದಿ.ವೀರಸಂಗಪ್ಪ ದೇಶಮುಖ, ದಿ.ಬಸಲಿಂಗಪ್ಪ ದೇಶಮುಖ ಅವರು ಪ್ರಾಣಾರ್ಪಣೆ ಮಾಡಿದ್ದಾರೆ, ಅವರ ನೆನಪಿನ ಧ್ಯೋತಕವಾಗಿ ಹುತಾತ್ಮ ವೃತ್ತ ನಿರ್ಮಾಣವಾಗಿದೆ, ಈ ಹುತಾತ್ಮ ವೃತ್ತವನ್ನು `ಹುತಾತ್ಮ ವೃತ್ತ’ ಎಂದೇ ಕರೆಯಬೇಕು, ಆ ಸ್ಥಳದಲ್ಲಿ ಹುತಾತ್ಮ ದಿನಾಚರಣೆ ಹಾಗೂ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ದಿ.ದೇಶಮುಖ ಕುಟುಂಬದ ಸ್ಮರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುವುದು ಎಂದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ದೇವರಹಿಪ್ಪರಗಿ, ಸೋಮಶೇಖರ ಹಳಿಯಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾ ಬಿರಾದಾರ, ಅರ್ಜುನಗೌಡ ದೇವಕ್ಕಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪಂಚಮಸಾಲಿ ನನ್ನ ಪ್ರಾಣ, ಲಿಂಗಾಯತ ನನ್ನ ಆತ್ಮ                                                                                                                             ಪಂಚಮಸಾಲಿ ಸಮಾಜವನ್ನು ಪ್ರವರ್ಗ 2-ಎ ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಹರಿಹರ ಪಂಚಮಸಾಲಿ ಪೀಠ ಸಹ ಒಮ್ಮತದ ನಿಲುವು ಹೊಂದಿದೆ, ಕೆಲವೊಂದು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಯಾವುದೇ ಭಿನ್ನ ನಿರ್ಣಯವಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಜೊತೆಗೆ ಪಂಚಮಸಾಲಿ ಸಮುದಾಯಕ್ಕೆ ಒಳ ಮೀಸಲಾತಿ ಕೇಳುವುದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ, ಪಂಚಮಸಾಲಿ ನನ್ನ ಪ್ರಾಣ – ಲಿಂಗಾಯತ ನನ್ನ ಆತ್ಮ ಎಂದು ಪಂಚಮಸಾಲಿ ಶ್ರೀಗಳು ಹೇಳಿದರು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮೂಲಕ ನ್ಯಾಯ ಪಡೆದುಕೊಳ್ಳಲಾಗುವುದು, ಈ ನಿಟ್ಟಿನಲ್ಲಿ ವಿಶ್ರಾಂತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ ನೇತೃತ್ವದ ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.