ಹೆವನ್ ಸಿಟಿ ಬಡಾವಣೆ ಪುರಸಭೆ ವ್ಯಾಪ್ತಿಗೆ ಸೇರಿಸಿ

ಬಡಾವಣೆ ನಿವಾಸಿಗಳಿಂದ ತಹಶೀಲ್ದಾರ್ ಎಸ್.ಜಿ.ಮಳಗಿಗೆ ಮನವಿ

0

Gummata Nagari : Bijapur News

ಮುದ್ದೇಬಿಹಾಳ : ತಾಲೂಕಿನ ಹಡಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನ.55ರಲ್ಲಿ ಬರುವ, ಸಧ್ಯಕ್ಕೆ ಹುಡ್ಕೋ ಬಡಾವಣೆಗೆ ಸಂಪೂರ್ಣವಾಗಿ ಹತ್ತಿಕೊಂಡಿರುವ ಹೆವೆನ್ ಸಿಟಿ ಬಡಾವಣೆಯನ್ನು ಮುದ್ದೇಬಿಹಾಳ ಪಟ್ಟಣದ ಪುರಸಭೆಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ, ಬಡಾವಣೆಯ ನಿವಾಸಿಗಳು ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳಿಗೆ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಬಡಾವಣೆಯಲ್ಲಿ 89 ಮನೆಗಳು ಈಗಾಗಲೇ ಪೂರ್ಣಗೊಂಡಿವೆ. ಸುಮಾರು 10 ವರ್ಷಗಳ ಹಿಂದೆಯೇ ಅಭಿವೃದ್ಧಿಗೊಳಿಸಿದ ಎನ್.ಎ. ಪ್ಲಾಟುಗಳ ಬಡಾವಣೆಯಾಗಿದ್ದು ಇಲ್ಲಿಯವರೆಗೆ ಗ್ರಾಮ ಪಂಚಾಯತಿಯಿಂದ ಒಂದು ಬೀದಿ ದೀಪವನ್ನೂ ಕಂಡಿಲ್ಲ. ಯಾವುದೇ ತರಹದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆದರೆ ಪ್ರತಿ ವರ್ಷವೂ ಕರ ವಸೂಲಿ ಹಾಗೂ ಹೊಸ ಪ್ಲಾಟು ಖರೀದಿ, ಕಟ್ಟಡ ಅನುಮತಿಗೆ ಡೆವಲಪ್ಮೆಂಟ್ ಚಾರ್ಜ್ ಎಂದು ಪುರಸಭೆಯವರು ವಿಧಿಸುವ ತೆರಿಗೆಗೆ ಸಮನಾದ ಹಣ ವಸೂಲಿ ಮಾಡುತ್ತಾರೆ.

ನಮ್ಮ ಬಡಾವಣೆಯನ್ನು ಗ್ರಾಮ ಪಂಚಾಯತಿಯವರು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಕುಡಿಯುವ ನೀರು, ರಸ್ತೆ ರಿಪೇರಿ, ಚರಂಡಿ ಅಥವಾ ಡ್ರೈನೇಜ್, ಬೀದಿ ದೀಪದ ವ್ಯವಸ್ಥೆ, ಕಸದ ವಿಲೇವಾರಿ ಹಾಗೂ ಮತ್ತಿತರ ಸಮಸ್ಯೆಗಳಿಗಾಗಿ ಹಲವಾರು ಸಲ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಪುರಸಭೆಯವರಿಗೆ ಕೇಳಿದರೆ “ನಿಮ್ಮ ಲೇ-ಔಟ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಬAಧಿಸಿದವರಿಗೆ ಕೇಳಿ” ಎನ್ನುತ್ತಾರೆ. ಹೀಗಾಗಿ ನಮಗೆ ಗ್ರಾಮ ಪಂಚಾಯಿತಿಯಿಂದ ತುಂಬಾ ಅನ್ಯಾಯವಾಗಿದೆ. ಸಧ್ಯಕ್ಕೆ ಬಡಾವಣೆಯ ಸದಸ್ಯರೆಲ್ಲರೂ ಕೂಡಿ ಸುಮಾರು ಮೂರು ಲಕ್ಷದವರೆಗೆ ಹಣವನ್ನು ನಮ್ಮಲ್ಲಿಯೇ ಸಂಗ್ರಹಿಸಿ ಕುಡಿಯುವ ನೀರಿಗಾಗಿ ಭಾಗಶಃ ಪೈಪ್ ಲೈನ್ ಮಾಡಿಸಿದ್ದೇವೆ.

ಹೆಸ್ಕಾಂಗೆ ಹಣ ನೀಡಿ ಟ್ರಾನ್ಸಫಾರ್ಮರ್ ಹಾಕಿಸಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಮಳೆಗಾಲದಲ್ಲಿ ನಡೆದಾಡಲೂ ಆಗದಂತಹ ರಸ್ತೆಗಳಿಗೆ ಗರಸು ಹಾಕಿಸಿ ತಾತ್ಕಾಲಿಕ ರಿಪೇರಿ ಮಾಡಿಸಿದ್ದೇವೆ. ಮುಳ್ಳು ಕಂಟಿಗಳನ್ನು ತೆಗೆಸಿದ್ದೇವೆ. ಕೆಲವರು ಸ್ವತಃ ಬೀದಿ ದೀಪ ಅಳವಡಿಸಿಕೊಂಡಿದ್ದಾರೆ. ಬಡಾವಣೆಯ ಮಾಲೀಕರು ಐದು ಎಕರೆ ಪ್ರದೇಶದಲ್ಲಿ ಉದ್ಯಾನವನಕ್ಕೆ ಸ್ಥಳ ಬಿಡದೇ ಸಂಪೂರ್ಣ ನಿವೇಶನಗಳನ್ನು ಮಾಡಿ, ಮಾರಿಕೊಂಡಿದ್ದು, ಸಧ್ಯಕ್ಕೆ ಖಾಲಿ ಇರುವ ಸ್ಥಳದಲ್ಲಿ ಉದ್ಯಾನವನದ ಅಭಿವೃದ್ಧಿ ಮಾಡಬೇಕು.

ಪುರಸಭೆ ನಮಗೆ ಕೇವಲ ಒಂದು ಕಿ,ಮೀ.ಅಂತರದಲ್ಲಿದ್ದರೆ, ಹಡಲಗೇರಿ ಗ್ರಾಮ ಪಂಚಾಯಿತಿ 8 ಕಿ.ಮೀ. ಇದೆ. ಹೀಗಾಗಿ ನಮಗೆ ಯಾವುದೇ ರೀತಿಯಲ್ಲಿ ಸೌಲಭ್ಯ ಕಲ್ಪಿಸದ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ತೆಗೆದುಪುರಸಭೆಗೆ ಸೇರಿಸಿಕೊಳ್ಳಬೇಕು. ಸಿ.ಸಿ. ರಸ್ತೆ, ಎಲ್.ಇ.ಡಿ. ಬೀದಿ ದೀಪಗಳನ್ನು ಅಳವಡಿಸುವುದು, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಕಸದ ವಿಲೇವಾರಿ ಮಾಡಬೇಕು ಎಂದು ಹೆವೆನ್ ಸಿಟಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ ಹಾಲ್ಯಾಳ, ಕಾರ್ಯದರ್ಶಿ ರಾಚಯ್ಯ ಹಿರೇಮಠ, ಎಸ್.ಬಿ.ಸಜ್ಜನ, ಬೀರೇಶ ಬ್ಯಾಲಾಳ, ವೀರೇಶ ಢವಳೇಶ್ವರ, ಸಿದ್ದು ಕಂಠಿ, ಬಸು ಮುದ್ನೂರ, ಸಂಗಪ್ಪ ಜೈನಾಪೂರ, ಡಾ.ಸಂಗಮೇಶ ಹಾಲವಾರ, ಜಗದೀಶ ಸಜ್ಜನ, ಸಂತೋಷ ಜಿರಲಿ, ಎಂ.ಬಿ.ಹುಡೇದ ವಕೀಲರು, ಮಹಾಂತೇಶ ಕಪನೂರ ವಕೀಲರು, ಮೋಹನ ಹುಲ್ಲೂರ, ಸುರೇಶ ನಾಯಕ ಮತ್ತಿತರರು ಮನವಿ ಮಾಡಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.