ಬೀದಿ ದನಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಕ್ರಮ

ಬಿಡಾಡಿ ದನಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

0

Gummata Nagari : Bijapur News

ಬಿಜಾಪುರ : ರಸ್ತೆ ಅವಘಡ ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬೀದಿ ದನಗಳನ್ನು ಸಂಬಂಧಪಟ್ಟ ಮಾಲೀಕರು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಜೊತೆಗೆ ಇಂತಹ ದನಗಳನ್ನು ಗೋಶಾಲೆಗೆ ರವಾನಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಪ್ರಾಣಿದಯಾ ಸಂಘ ಸಭೆ, ರಾಷ್ಟ್ರೀಯ ಕೃತಕ ಗರ್ಭದಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಕಾರ್ಯಕ್ರಮ ಹಾಗೂ ಜಾನುವಾರುಗಳ ಕಾಲು, ಬಾಯಿ ಬೇನೆ ಲಸಿಕಾ ಕಾರ್ಯಕ್ರಮಗಳ ಕುರಿತು ಸಭೆ ನಡೆಸಿದ ಅವರು ನಗರದಲ್ಲಿ ವಿವಿಧ ರಸ್ತೆಗಳಲ್ಲಿ ಬಿಡಾಡಿ ದನಗಳ ಓಡಾಟದಿಂದ ಸಾರ್ವಜನಿಕರಿಗೆ ಅನಾನುಕೂಲವಾಗುವ ಜೊತೆಗೆ ರಸ್ತೆ ಅವಘಡಕ್ಕೂ ಕಾರಣವಾಗುತ್ತದೆ. ಕಾರಣ ಬಿಡಾಡಿ ದನ ಕರುಗಳ ಮಾಲೀಕರಿಗೆ ಅಂತಿಮ ಗಡವು ಹಾಗೂ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಅದರಂತೆ ರಸ್ತೆಗಳಲ್ಲಿ ಅಲೆದಾಡುವಂತಹ ಬಿಡಾಡಿ ದನಗಳನ್ನು ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಗೋಶಾಲೆಗಳಿಗೆ ರವಾನಿಸಲಾಗುತ್ತದೆ ಎಂಬ ಬಗ್ಗೆ ದನಕರು ಮಾಲೀಕರಿಗೆ ತಿಳಿಹೇಳಬೇಕು. ಈ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಪ್ರಾಣಿದಯಾ ಸಂಘದ ಸದಸ್ಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸಲು ಬೀದಿ ದನಕರುಗಳನ್ನು ತಮ್ಮ ಹದ್ದುಬಸ್ತನಲ್ಲಿ ಇಡುವಂತೆ ಮಾಲೀಕರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಸೂಚನೆ ನೀಡಿದರು.

ಪ್ರಾರಂಭಿಕ ಹಂತದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಂತರ ವಿವಿಧ ತಾಲೂಕಾ ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿನ 3 ಗೋಶಾಲೆಗಳಿಗೆ ಸರ್ಕಾರದ ಸಹಾಯಧನ ಸೌಲಭ್ಯ ದೊರಕಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು, ಜಿಲ್ಲೆಯಾದ್ಯಂತ ಆ್ಯಂಟಿ ರ‍್ಯಾಬೀಸ್ ವ್ಯಾಕ್ಸಿನೇಶನ್ (ಲಸಿಕಾ ಕಾರ್ಯಕ್ರಮ), ಪ್ರಾಣಿ ಕಲ್ಯಾಣ ಕುರಿತು ಕಾರ್ಯಾಗಾರ, ದನಕರುಗಳ ಮಾಲೀಕರು, ಗೋಶಾಲೆಗಳ ಮಾಲೀಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ರಾಷ್ಟ್ರೀಯ ಕೃತಕ ಗರ್ಭದಾರಣೆ ಕಾರ್ಯಕ್ರಮ ಯಶಸ್ವಿಗೆ ಸೂಚನೆ:

ಈ ಕಾರ್ಯಕ್ರಮವು ದಿ. 1.8.2020 ರಿಂದ ಪ್ರಾರಂಭವಾಗಿದ್ದು, ಮೇ 2021 ರವರೆಗೆ ನಡೆಯಲಿರುವ ಜಾನುವಾರುಗಳ ರಾಷ್ಟ್ರೀಯ ಕೃತಕ ಗರ್ಭದಾರಣೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿದರು.

ಈ ಯೋಜನೆಯಡಿ ಉತ್ಕೃಷ್ಟ ತಳಿಯ ದೇಸಿ ಹಾಗೂ ವಿದೇಶಿ ತಳಿಯ ರಾಸುಗಳ ಕೃತಕ ಗರ್ಭದಾರಣೆ ಪ್ರಮಾಣವನ್ನು ಮತ್ತು ಉತ್ತಮ ತಳಿ ಗುಣಗಳ ಕರುಗಳ ಜನನದೊಂದಿಗೆ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಜಿಲ್ಲೆಯಲ್ಲಿ ಒಟ್ಟು 500 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ತಾಲೂಕಿಗೆ 100 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆಧಾರ ಸಂಖ್ಯೆ ಮಾದರಿಯಲ್ಲಿ ಪ್ರತಿ ಆಯ್ದ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಿ ಇನಾಫ್ ತಂತ್ರಾಂಶದಲ್ಲಿ ದಾಖಲಿಸಿ ರೈತರ ಮನೆ ಬಾಗಿಲಿಗೆ ಕೃತಕ ಗರ್ಭದಾರಣೆ ಸೌಲಭ್ಯ ಕಲ್ಪಿಸುವಂತೆ ಅವರು ಸೂಚಿಸಿದರು.

ಅದರಂತೆ ಈ ಕಾರ್ಯಕ್ರಮ ಕುರಿತು ಜಿಲ್ಲಾ ಕೇಂದ್ರಗಳಲ್ಲಿ ನೊಡಲ್ ಅಧಿಕಾರಿಗಳಿಗೆ ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳಿಗೆ ಮಾರ್ಗದರ್ಶನದ ಮೂಲಕ ತರಬೇತಿ ನೀಡಬೇಕು. ಗ್ರಾಮಗಳಲ್ಲಿ ಪ್ರಚಾರ ಕಾರ್ಯಕೈಗೊಳ್ಳಲು ಗೋಡೆಬರಹ, ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳ ಮೂಲಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದರು.

ಜಾನುವಾರುಗಳಿಗೆ ಕಾಲು, ಬಾಯಿ ಬೇನೆ ಲಸಿಕಾ ಕಾರ್ಯಕ್ರಮ:

ಈ ಕಾರ್ಯಕ್ರಮವು ಅಕ್ಟೋಬರ್ 02 ರಿಂದ ನವೆಂಬರ್ 15 ರವರೆಗೆ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಜಿಲ್ಲೆಯ ಒಟ್ಟು 3.70 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದ್ದು, ಯಾವುದೇ ಜಾನುವಾರು ಈ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಹಾಗೀರದಾರ ಅವರು ಈ ಕಾರ್ಯಕ್ರಮ ಯಶಸ್ವಿಯಾಗಲು ಜಿಲ್ಲೆಯಲ್ಲಿ ಒಟ್ಟು 49 ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ವಿಲಿಯ್ಸಂ, ಆರೋಗ್ಯ ಇಲಾಖೆಯ ಅಧಿಕಾರಿ ಮಹೇಂದ್ರ ಕಾಪ್ಸೆ, ಕೆಎಮ್‌ಎಫ್ ಎಂಡಿ ಸಂಜೀವ ದಿಕ್ಷೀತ್, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಅಶೋಕ ಅಲ್ಲಾಪೂರ, ಪ್ರಾಣಿ ದಯಾ ಸಂಘದ ಸದಸ್ಯರಾದ ದೀಪಕ್ ತಾಳಿಕೋಟಿ, ಸಿದ್ದು ನ್ಯಾಮಗೊಂಡ, ರಶ್ಮಿ ಪಾಟೀಲ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.