ಮಹಿಳಾ ಶಿಕ್ಷಣ ನಿಧಿಯಿಂದ ಮಹಿಳೆಯರ ಶಿಕ್ಷಣಕ್ಕೆ ಹೊಸ ಆಯಾಮ

ಮಹಿಳಾ ವಿವಿಯಲ್ಲಿ 11ನೇ ಘಟಿಕೋತ್ಸವ ಸಮಾರಂಭದಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯ ಪ್ರೊ.ಎಂ,ಕೆ.ಶ್ರೀಧರ ಅಭಿಮತ

0

Gummata Nagari : Bijapur News

ಬಿಜಾಪುರ : ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸದಸ್ಯ ಪ್ರೊ.ಎಂ.ಕೆ. ಶ್ರೀಧರ ಹೇಳಿದರು.

ಬಿಜಾಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 11ನೆಯ ಘಟಿಕೋತ್ಸವದಲ್ಲಿ ಆನಲೈನ್ ಮೂಲಕ ಪ್ರಧಾನ ಭಾಷಣ ಮಂಡಿಸಿದ ಅವರು, ಮಹಿಳೆಯರನ್ನು ಸಬಲಗೊಳಿಸುವ ಪ್ರಯತ್ನದಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇದು ಮಹಿಳೆಯ ಸಮಾನತೆಯ ವಿಷಯವಲ್ಲ. ನಮ್ಮ ಬದುಕಿನಲ್ಲಿ ಮಹಿಳೆಯರಿಗೆ ಒಂದು ವಿಶೇಷ ಸ್ಥಾನವಿದೆ ಎಂದರು.

ಸಮಾಜದ ಎಲ್ಲಾ ವರ್ಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಶಿಕ್ಷಣದಿಂದ ಹೊರಗುಳಿಯುವುದನ್ನು ಹೆಚ್ಚಾಗಿ ಕಾಣುತ್ತೇವೆ. ಮನೆಯಲ್ಲಿ ಆರ್ಥಿಕ ತೊಂದರೆ, ಮನೆಯಲ್ಲಿರುವ ಹಿರಿಯರು ಅಥವಾ ಎಳೆಯ ಮಕ್ಕಳನ್ನು ನೋಡಿಕೊಳ್ಳುವುದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದು, ಹೀಗೆ ಹಲವಾರು ಕಾರಣಗಳಿಂದ ಶಿಕ್ಷಣವನ್ನು ಮುಂದುವರೆಸಲು ಅಸಾಧ್ಯ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಸಮಸ್ಯೆಗಳಿಂದ ಮುಕ್ತರಾಗಲು ಪದವಿ ಶಿಕ್ಷಣದ ಯಾವುದೇ ವರ್ಷದಲ್ಲಿ ಶಿಕ್ಷಣ ನಿಲ್ಲಿಸಿದರೂ, ಮತ್ತೆ ಪುನರಾರಂಭಿಸಬಹುದಾಗಿದೆ ಎಂದೂ ಅವರು ವಿವರಿಸಿದರು.

ಮಹಿಳಾ ಶಿಕ್ಷಣ ನಿಧಿ

ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಶಿಕ್ಷಣಾವಕಾಶಗಳನ್ನು ಹೆಚ್ಚಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ‘ಮಹಿಳಾ ಶಿಕ್ಷಣ ನಿಧಿಯ ಮೂಲಕ ಮಹಿಳೆಯರ ಶಿಕ್ಷಣವನ್ನು ಬೆಂಬಲಿಸುವ ಯೋಜನೆಯನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರು ಶಿಕ್ಷಣದ ಪರಿಧಿಯಲ್ಲಿ ಬರುವರೆಂಬ ಭರವಸೆ ನನಗಿದೆ. ಮಹಿಳಾ ಶಿಕ್ಷಣದಿಂದ ಮಾತ್ರ ನಮ್ಮಲ್ಲಿ ಆರೋಗ್ಯವಂತ ಕುಟುಂಬಗಳನ್ನು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಾಮರ್ಥ್ಯ ಮತ್ತು ಶಕ್ತಿಯನ್ನು ಮೀರಿ ಕೆಲಸ ಮಾಡುವುದನ್ನು ನಾವು ಬಹತೇಕ ಮಹಿಳೆಯರಲ್ಲಿ ಕಾಣುತ್ತೇವೆ. ಮಹಿಳೆಯರು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ತಮ್ಮ ಅಂತರಂಗದಿಂದ ಮಾಡುವುದರಿಂದ ಸಮರ್ಪಕವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದರು.

ಅಕ್ಕಮಹಾದೇವಿಯ ಹೆಸರಿನ ಈ ಮಹಿಳಾ ವಿಶ್ವವಿದ್ಯಾನಿಲಯ ಇಡೀ ಸಮಾಜಕ್ಕೆ ಒಂದು ಮಾದರಿ ಎಂದೆನಿಸಿದೆ. ಉತ್ತರ ಕರ್ನಾಟಕದಲ್ಲಿ ಇಂತಹ ಅಪೂರ್ವ ವಿಶ್ವವಿದ್ಯಾನಿಲಯವಿರುವುದು ಈ ಭಾಗದ ಮಹಿಳೆಯರಿಗೆ ಒಂದು ವರವಾಗಿದೆ. ಶಿಕ್ಷಣ ಮಾತ್ರದಿಂದಲೇ ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಬೆಳವಣಿಗೆ ಸಾಧ್ಯ, ಇದರಲ್ಲಿ ಯಾವುದೇ ಭೇದವೂ ಬರುವುದಿಲ್ಲ. ನಮ್ಮ ಆಂತರಿಕ ಬೆಳವಣಿಗೆಯಿಂದ ಮಾತ್ರ ದೇಶದಲ್ಲಿ ಸಮಾನ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವುತ್ತದೆ ಎಂಬುದು ನನ್ನ ನಂಬಿಕೆ ಎಂದರು.

ಮಹಿಳೆಯರ ಸೂಕ್ಷ್ಮತೆ, ಬಹುಮುಖ ಪ್ರತಿಭೆ, ಸವಾಲುಗಳನ್ನು ಎದುರಿಸಲು ಇರುವ ಆಂತರ್ಯ ಶಕ್ತಿ, ವಿಶಿಷ್ಟ ದೃಷ್ಟಿಕೋನ ಮತ್ತು ಕಾರ್ಯಕ್ಷಮತೆ ಇವೆಲ್ಲವೂ ಅವರನ್ನು ಒಬ್ಬ ಪರಿಪೂರ್ಣ ವ್ಯಕ್ತಿತ್ವವಾಗಿಸುತ್ತದೆ. ಶಿಕ್ಷಣವು ಮಹಿಳೆಯರ ವಿವಿಧ ಮಜಲುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬಹುದು. ಶಿಕ್ಷಣದಿಂದ ನಮ್ಮ ಆಂತರಿಕ ಶಕ್ತಿಯ ವಿಸ್ತಾರವಾಗುತ್ತದೆ. ಆಂತರ್ಯ ಬಲವಿದ್ದರೆ ಹೊರ ಪ್ರಪಂಚದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ ಬರುತ್ತದೆ ಎಂದರು.

ಉಜ್ವಲ ದಿನಗಳನ್ನು ಎದುರು ನೋಡೋಣ

ಇತ್ತೀಚಿನ ದಿನಗಳಲ್ಲಿ ವಿಶ್ವವೇ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಭಯಭೀತವಾಗಿದೆ. ಇನ್ನು ಹಲವು ತಿಂಗಳಲ್ಲಿ ನಾವು ಈ ಸಂಕಟದಿಂದಲೂ ಮುಕ್ತರಾಗುತ್ತೇವೆ. ನಿಮ್ಮಲ್ಲಿರುವ ಆತಂಕಗಳನ್ನು ಇಲ್ಲಿಯೇ ಬಿಟ್ಟುಬಿಡಿ. ಧೈರ್ಯದಿಂದ ಮುಂಬರುವ ಉಜ್ವಲ ದಿನಗಳನ್ನು ಎದುರು ನೋಡೋಣ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ನೀವು ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಿ. ನೀವೇನೇ ಮಾಡಿದರೂ ಅದು ವಿಶಿಷ್ಟವಾಗಿರಬೇಕು. ಸಾಮಾನ್ಯರಂತೆ ಯೋಚಿಸುವ ಬದಲು ನಿಮ್ಮ ಚಿಂತನೆಯಲ್ಲಿ ಹೊಸತಿರಬೇಕು ಎಂದು ನವ ಪದವೀಧರರಿಗೆ ಪ್ರೊ.ಶ್ರೀಧರ ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಓಂಕಾರ ಕಾಕಡೆ ಅವರು ಚಿನ್ನದ ಪದಕ ವಿಜೇತರು ಹಾಗೂ ಪಿಎಚ್‌ಡಿ ಪದವೀಧರರಿಗೆ ಪದಕ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನ್‌ಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.