140 ಕೋಟಿ ರೂ.ಗೆ ಅನುಮೋದನೆ

ಇಂಡಿ ತಾಲೂಕಿನ 16 ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆ

0

Gummata Nagari : Bijapur News

ಬಿಜಾಪುರ : ತಿಡಗುಂದಿ ಶಾಖಾ ಕಾಲುವೆಯ ಮೂಲಕ ಇಂಡಿ ತಾಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ತುಂಬುವ 140 ಕೋಟಿ ರೂ.ವೆಚ್ಚದ ಯೋಜನೆಯ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ, ಬಬಲೇಶ್ವ ಶಾಸಕ ಎಂ.ಬಿ. ಪಾಟೀಲ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ಭಾಗದಲ್ಲಿ ನೀರಿನ ಕೊರತೆ ಅಧಿಕವಾಗಿದ್ದು, ಅಂತರ್ಜಲ ಪ್ರಮಾಣ ಸಹ ಕಡಿಮೆಯಾಗಿತ್ತು. ಈ ಕಾರಣಕ್ಕಾಗಿಯೇ ತಿಡಗುಂದಿ ಶಾಖಾ ಕಾಲುವೆಯ 50.88 ಕಿ.ಮೀ.ಯಿಂದ ಗುರುತ್ವಾಕರ್ಷಣ ಆಧಾರದ ಮೇಲೆ ನೀರನ್ನು ಹರಿಸಿ 16 ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಕಾರ್ಯಸಾಧ್ಯತಾ ವರದಿ ರೂಪದ ಪ್ರಸ್ತಾವನೆಯನ್ನು ಕೃಷ್ಣಾ ಭಾಗ್ಯ ಜಲನಿಗಮದ 16 ನೇ ತಾಂತ್ರಿಕ ಪರಿಶೀಲನಾ ಸಮಿತಿಯಲ್ಲಿ ಮಂಡನೆ ಮಾಡಲಾಗಿತ್ತು, ಈಗ ಪ್ರಸ್ತಾವನೆಯನ್ನು ಕೃಷ್ಣಾ ಭಾಗ್ಯ ಜಲನಿಗಮದ ಆರ್ಥಿಕ ನಿರ್ದೇಶಕ ಮಂಡಳಿಯಲ್ಲಿ ಅನುಮೋದನೆ ದೊರಕಿದೆ ಎಂದು ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಈ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರುವುದರಿಂದ ಇಂಡಿ ಭಾಗದ 16 ಕೆರೆಗಳು ಭರ್ತಿಯಾಗಿ ಆ ಭಾಗದ ರೈತರ ಬದುಕು ಸುಂದರವಾಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲ ಶಾಸಕ ಮಿತ್ರರು, ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳು ವಿಶೇಷ ಸಹಕಾರ ನೀಡಿದ್ದಾರೆ ಎಂದರು.

ತಿಡಗುಂದಿ ಶಾಖಾ ಕಾಲುವೆಯ ನೀರಿನ ಸಾಮರ್ಥ್ಯ 14.229 ಕ್ಯೂಮೆಕ್ಸ್ಗಳಿದ್ದು, ಆ ಪೈಕಿ 1.40 ಕ್ಯೂಮೆಕ್ಸ್ ನೀರನ್ನು ಉಪಯೋಗಿಸಿಕೊಂಡು ಈ 16 ಕೆರೆಗಳನ್ನು 51 ದಿನಗಳಲ್ಲಿ ತುಂಬಿಸುವ ಯೋಜನೆ ಇದಾಗಿದೆ. ಅದೇ ತೆರನಾಗಿ ತಿಡಗುಂದಿ ಶಾಖಾ ಕಾಲುವೆ 25,572 ಹೆಕ್ಟೇರ್‌ಗಳಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಈಗಾಗಲೇ ಈ ಕಾಲುವೆಯ ಕಾಮಗಾರಿ 40 ಕೀ.ಮೀ.ವರೆಗೆ ಪೂರ್ಣಗೊಂಡಿದೆ, ಇನ್ನುಳಿದ 40 ಕೀ.ಮಿಯಿಂದ 56 ಕೀ.ಮೀವರೆಗೆ ಕಾಮಗಾರಿ ಸದ್ಯ ಪ್ರಗತಿಯಲ್ಲಿ ಎಂದು ತಿಡಗುಂದಿ ಶಾಖಾ ಕಾಲುವೆಯ ಕಾಮಗಾರಿ, ವಿಸ್ತಾರದ ಕುರಿತು ಎಂ.ಬಿ. ಪಾಟೀಲ ತಾಂತ್ರಿಕ ವಿವರಣೆ ನೀಡಿದರು.

ಇಂಡಿ ತಾಲೂಕು ದೀರ್ಘಕಾಲಿಕ ಬರಗಾಲ ಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿದೆ, ಅಂತರ್ಜಲ ಪ್ರಮಾಣ ಸಹ ಕಡಿಮೆಯಾಗಿತ್ತು. ವರ್ಷವೀಡಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿತ್ತು. ಈ ಕಾರಣಕ್ಕಾಗಿಯೇ ಆ ಭಾಗ ಪ್ರತಿನಿಧಿಸುವ ಶಾಸಕರು, ಜನಪ್ರತಿನಿಧಿಗಳು ಇಂಡಿ ತಾಲೂಕಿನ ಸಣ್ಣ ನೀರಾವರಿ ಕೆರೆಗಳನ್ನು ತುಂಬಲು ಮನವಿ ಸಲ್ಲಿಸಿದ್ದರು. ಈಗ ಈ ಭಾಗದ 16 ಕೆರೆಗಳು ತುಂಬುವುದರಿಂದ ಆ ಭಾಗದ ಕೊಳವೆಬಾವಿ, ತೆರೆದ ಬಾವಿ ಹಾಗೂ ಅಂತರ್ಜಲ ಪ್ರಮಾಣ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ತುಂಬಲಿವೆ 16 ಕೆರೆಗಳು

ತಿಡಗುಂದಿ ಶಾಖಾ ಕಾಲುವೆ ಮೂಲಕ ಇಂಡಿ ತಾಲೂಕಿನ ದೇಗಿನಾಳ, ಹಳಗುಣಕಿ, ಬಬಲಾದ, ಕೂಡಗಿ, ಗುಂದವಾನ, ಕೋಳೂರಗಿ, ಹಡಲಸಂಗ, ಸೊನಕನಹಳ್ಳಿ, ನಂದರಗಿ, ಶಿಗ್ಗಣಾಪೂರ, ಸಾತಲಗಾಂವ, ಸಾವಳಸಂಗ, ಜಿಗಜೀವಣಗಿ, ಇಂಚಗೇರಿ ಕೆರೆ 1, ಇಂಚಗೇರಿ ಕೆರೆ 2, ನಿಂಬಾಳ ಹೊರ್ತಿ ಕೆರೆಗಳು ತುಂಬಲಿವೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.