ತಾತ್ಕಾಲಿಕ ಆಶ್ರಯ ಕಲ್ಪಿಸಲು ಸೂಚನೆ

ಜೋರು ಮಳೆಯಲ್ಲೇ ಜಲಾವೃತ ಪ್ರದೇಶಗಳಿಗೆ ಡಿಸಿ ಆರ್.ವೆಂಕಟೇಶ ಕುಮಾರ ಭೇಟಿ, ಪರಿಶೀಲನೆ

0

Gummata Nagari : Raichur News

ರಾಯಚೂರು : ನಗರದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜಲಾವೃತಗೊಂಡ ನಗರದ ವಿವಿಧ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಶನಿವಾರ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಸಂಗ್ರಹಗೊಂಡ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಹಾಗೂ ಮಳೆ ನೀರು ನುಗ್ಗಿ ಸಂತ್ತಸ್ಥಗೊಂಡವರಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಅವರು ಮೊದಲಿಗೆ ನಗರದ ಮಾವಿನ ಕೆರೆಗೆ ಭೇಟಿ ನೀಡಿ, ಅಲ್ಲಿಗೆ ಹರಿದು ಬರುತ್ತಿರುವ ಹಾಗೂ ಹೊರ ಹೋಗುತ್ತಿರುವ ನೀರನ್ನು ವೀಕ್ಷಿಸಿದರು, ಈ ಸಂದರ್ಭದಲ್ಲಿ ಯಾರೊಬ್ಬರೂ ಕೂಡ ಕೆರೆಗೆ ಇಳಿಯಬಾರದು ಎಂದು ನಿರ್ದೇಶನ ನೀಡಿದರು.

ನಂತರ ಡ್ಯಾಡಿ ಕಾಲೋನಿ, ಜಹೀರಬಾದ್, ಹರಿಜನವಾಡ, ನೀರಭಾವಿ ಕುಂಟ ಮತ್ತು ಗದ್ವಾಲ್ ರಸ್ತೆಯಲ್ಲಿರುವ ಕಾಕಿ ಕರೆ ಮತ್ತು ಜಲಾಲ್ ನಗರದಲ್ಲಿ ಮಳೆ ನೀರು ನಿಂತ ವಿವಿಧ ಸ್ಥಳಗಳನ್ನು ಪರಿಶೀಲಿಸಿ, ಅಲ್ಲಿ ಸಾಮಾನ್ಯ ಜನ ಜೀವನಕ್ಕೆ ಅನಾನುಕೂಲವಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಾಮರ್ಶಿಸಿದರು, ಈ ಸಂದರ್ಭದಲ್ಲಿ ವಿವಿಧ ಬಡಾವಣೆಗಳ ನಿವಾಸಿಗಳೊಂದಿಗೆ ಮಾತನಾಡಿದ ಅವರು, ಸಂಗ್ರಹಗೊಂಡ ನೀರನ್ನು ಹೊರಹಾಕಲು ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದಿಂದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ, ಅದಕ್ಕಾಗಿ ನಗರದ ವಿವಿಧ ಪ್ರದೇಶಗಳಲ್ಲಿ ನೀರು ನಿಂತಿರುವ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ, ಅವರು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಅಲ್ಲಿ ಮಳೆ ನೀರನ್ನು ಹೊರ ಹಾಕುವ ವ್ಯವಸ್ಥೆ ಮಾಡುತ್ತಿದ್ದಾರೆ, ನಗರದಲ್ಲಿ ಮಳೆ ಆರಂಭವಾಗುತ್ತಲ್ಲೆ ಅವರಿಗೆಲ್ಲಾ ಸೂಕ್ತ ನಿರ್ದೇಶನ ನೀಡಲಾಗಿದೆ, ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸುವ ವ್ಯವಸ್ಥೆಯೂ ಮಾಡಲಾಗುತ್ತಿದೆ, ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಕುಟುಂಬಗಳಿಗೆ 10 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತದೆ. ಗಂಜಿ ಕೇಂದ್ರ ಆರಂಭಿಸಿ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಡ್ಯಾಡಿ ಕಾಲೋನಿಯ ಜಲಾವೃತವಾಗಿರುವದರಿಂದ ಮಳೆ ನೀರು ಸುಗಮವಾಗಿ ಹರಿಯಲು ಪರ್ಯಾಯ ಮಾರ್ಗ ಕಲ್ಪಿಸುವಂತೆ, ಹರಿಜನವಾಡ ಬಡಾವಣೆ ತೆರಳಿದ ಡಿಸಿ ಅವರು ರಾಜ ಕಾಲುವೆ ಸ್ವಚ್ಛಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆಯ ಎಂಜಿನಿಯರ್ ಶಫಿ, ಪಿ. ಬೂದೆಪ್ಪ, ನಾಗರಾಜ ಸೇರಿದಂತೆ ಸಂಬAಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ರಾತ್ರಿಯಿಂದ ನಗರದಲ್ಲಿ ಬಿದ್ದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಸಂಗ್ರಹಗೊಂಡ ಮಳೆ ನೀರನ್ನು ಹೊರ ಹಾಕಲು ಹಾಗೂ ನಗರವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಸಂಬAಧಿಸಿದ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಎಲ್ಲಾ ನೋಡಲ್ ಅಧಿಕಾರಿಗಳು ಮಳೆ ನಿಲ್ಲುವ ವರೆಗೆ ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ತಮಗೆ ನಿಯೋಜಿಸಲ್ಪಟ್ಟ ಪ್ರದೇಶದಲ್ಲಿ ಕಡ್ಡಾಯವಾಗಿ ಇರಬೇಕು.

ಮಳೆ ನೀರು ಆದಷ್ಟು ಬೇಗ ಹರಿದುಹೋಗುವಂತೆ ಎಲ್ಲಾ ವ್ಯವಸ್ಥೆಗಳು ಮಾಡುವುದು.

ಮನೆಗೆ ನೀರು ನುಗ್ಗಿರುವ ಮತ್ತು ಆಹಾರ, ಊಟ ಕೊರತೆಯಾಗಿರುವ ಜನರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸಾಧ್ಯವಾದಲ್ಲಿ ಸ್ವತಃ ಅಥವಾ ರಾಯಚೂರು ತಾಲ್ಲೂಕ ತಹಶೀಲ್ದಾರರನ್ನು ಸಂಪರ್ಕಿಸುವುದು.

ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಸಂತ್ರಸ್ಥರನ್ನು ಆಶ್ರಯ ಕೇಂದ್ರದಲ್ಲಿ (ಕಲ್ಯಾಣ ಮಂಟಪ, ಶಾಲೆ, ಹಾಸ್ಟೆಲ್, ಇತ್ಯಾದಿ) ಇರಿಸುವುದು.

ನಗರಸಭೆಯ ಸಹಾಯ ಪಡೆದು ಊಟ ಹಂಚುವ, ಇತರೆ ಯಾವುದೇ ಕಾರ್ಯಕ್ಕೆ ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.