ಸೈಯದ್ ಚಿಂಚೋಳಿ ಗ್ರಾಮ ಸ್ಥಳಾಂತರಕ್ಕೆ ಸಚಿವ ಆರ್.ಅಶೋಕ ಸೂಚನೆ

0

ಸೋಮಾರಿತನ ತೋರಿಸಿದಲ್ಲಿ ಮುಲಾಜಿಲ್ಲದೆ ಮನೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಪ್ರಸ್ತುತ 20.78 ಕೋಟಿ ರೂ. ಹಣವಿದೆ. ಯಾದಗಿರಿ ಡಿ.ಸಿ. ಖಾತೆಯಲ್ಲಿ 11 ಕೋಟಿ ರೂ. ಇದೆ. ಸಂತ್ರಸ್ತರ ರಕ್ಷಣೆಗೆ ಈ ಹಣ ಬಳಸುವಂತೆ ಜಿಲ್ಲಾಧಿಕರಿಗಳಿಗೆ ಸೂಚನೆ ನೀಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆಯಿಲ್ಲ. ಇನ್ನೂ ಬೇಕಾದಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಪ್ರಕೃತಿ ವಿಕೋಪದಂತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ಕೆಲಸ ಮಾಡಬೇಕು. ಕೆಲಸದಲ್ಲಿ ಸೋಮಾರಿತನ ಮಾಡುವ ಅಧಿಕಾರಿಗಳಿಗೆ ಮುಲಾಜಿಲ್ಲದೆ ಮನೆಗೆ ಕಳುಹಿಸಲಾಗುವುದು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

Gummata Nagari : Kalaburgi News

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಭೋಸಗಾ ಕೆರೆಯಿಂದ ಪ್ರವಾಹಕ್ಕೊಳಗಾದ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಕಂದಾಯ ಸಚಿವ ಅರ್.ಅಶೋಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನೆರೆ ಪೀಡಿತ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗ್ರಾಮ ಸ್ಥಳಾಂತರ ಸಂಬಂಧ ಗ್ರಾಮಕ್ಕೆ ಹತ್ತಿರದಲ್ಲಿಯೇ 11 ಎಕರೆ ಪ್ರದೇಶ ಗುರುತಿಸಲಾಗಿದೆ. ಗ್ರಾಮಸ್ಥರು ಒಪ್ಪಿದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಅಯುಕ್ತ ರಾಮಚಂದ್ರ ಗಡಾದೆ ಅವರಿಗೆ ಸಚಿವ ಆರ್. ಅಶೋಕ ಸೂಚಿಸಿದರು.

ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಮೂರು ಹೊತ್ತು ಊಟದ ಜೊತೆಗೆ ಮೊಟ್ಟೆ, ಮಲಗಲು ಹೊದಿಕೆ, ಟವೆಲ್, ಸ್ಯಾನಿಟೈಸ್ ನೀಡಬೇಕು. ಮಹಿಳೆಯರಿಗೆ ಸೀರೆ ಸಹ ನೀಡುವಂತೆ ಕಂದಾಯ ಸಚಿವ ಅರ್.ಅಶೋಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ ಹಾಗೂ ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕಳೆದ ಮೂರು ದಶಕದಲ್ಲಿ ಕಾಣದ ಭೀಕರ ಮಳೆ ಇದಾಗಿದ್ದು, ರಕ್ಷಣೆ ಕಾರ್ಯ ಕೈಗೊಳ್ಳಲು ಎನ್.ಡಿ.ಅರ್.ಎಫ್. ತಂಡಗಳನ್ನು ಈಗಾಗಲೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಕಳುಹಿಸಿದೆ. ರಾಜ್ಯದ ಒಟ್ಟು 173 ತಾಲೂಕುಗಳನ್ಬು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ನೆರೆ ಪರಿಹಾರ ಕಾರ್ಯ ಯುದ್ದೋಪಾದಿಯಲ್ಲಿ ಸಾಗಿದೆ. ಕಲಬುರಗಿ ಜಿಲ್ಲೆಯ 11 ತಾಲೂಕುಗಳು ಸಹ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಸೇರಿವೆ ಎಂದರು.

ಪ್ರಸ್ತುತ ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ಮತ್ತು ಸಂಪೂರ್ಣ ಮನೆ ಕುಸಿತ ಪ್ರಕರಣದಲ್ಲಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಬೆಳೆಗಳ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ವರದಿಯಂತೆ ಪರಿಹಾರ ಧನ ವಿತರಿಸಲಾಗುವುದು. ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಯಾವುದೇ ಅನುದಾನ ಕೊರತೆಯಿಲ್ಲ ಎಂದ ಅರ್. ಅಶೋಕ ಅವರು ಸ್ಪಷ್ಟಪಡಿಸಿದರು.

ಐದು ಪಟ್ಟು ಮಳೆ ಹೆಚ್ಚಳ, 3.31 ಲಕ್ಷ ಹೆಕ್ಟೇರ್ ಹಾನಿ: ಇತ್ತೀಚೆಗೆ ಸುರಿದ ಮಳೆಯಿಂದ ರಾಜ್ಯದಲ್ಲಿ 3.31 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 32976 ತೋಟಗಾರಿಕೆ ಬೆಳೆ ಹಾಗೂ 38626 ಪ್ಲ್ಯಾಂಟೇಷನ್ ಬೆಳೆ ಹಾನಿಯಾಗಿದೆ. 1268 ಸೇತುವೆ ಕೆಟ್ಟು ಹೋಗಿವೆ. 10978 ಮನೆಗಳಿಗೆ ಹಾನಿಯಾಗಿದ್ದು, 360 ಕೆರೆ ಒಡೆದಿವೆ ಎಂದು ನೆರೆಯ ಹಾನಿಯ ಬಗ್ಗೆ ವಿವರಿಸಿದರು.

ರಾಷ್ಟ್ರೀಯ ವಿಪತ್ತು ಘೋಷಣೆಗೆ ಮನವಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂರು ದಶಕ ಕಂಡರಿಯದ ಮಳೆಯಿಂದ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರಾಷ್ಟ್ರೀಯ ವಿಪತ್ತು ಘೋಷಣೆಗೆ ಮತ್ತು ಕೇಂದ್ರ ಅಧ್ಯಯನ ತಂಡ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಆರ್. ಅಶೋಕ ತಿಳಿಸಿದರು.

ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ಡಾ.ಅವಿನಾಶ ಜಾಧವ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಸೇರಿದಂತೆ ಅಧಿಕಾರಿಗಳು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.