ಚಿತ್ತಾಪುರದಲ್ಲಿ ಧೂಳೋಧೂಳು

0

Gummata Nagari : Kalaburgi News

ಚಿತ್ತಾಪುರ : ಪಟ್ಟಣದ ಬಹುತೇಕ ರಸ್ತೆಗಳು ಧೂಳು..ಧೂಳು..ಧೂಳು… ಯಾವ ರಸ್ತೆಗೆ ಹೋದರೂ ಧೂಳು. ಇದು ಶಾಸಕ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿನ ರಸ್ತೆಗಳು ಹೇಗಾಗಿವೆ ಎಂದರೆ, ರಸ್ತೆಯಲ್ಲಿ ಧೂಳು ಇದೆಯೋ ಅಥವಾ ಧೂಳಿನಲ್ಲಿಯೇ ರಸ್ತೆಗಳಿವೆಯೋ ಎಂಬ ಅನುಮಾನ ಜನರಲ್ಲಿ ಮೂಡಿಸಿದೆ. ನಾಗಾವಿ ನಾಡು ಅಕ್ಷರಶಃ ಧೂಳು ನಾಡಾಗಿ ಪರಿವರ್ತನೆಗೋಳ್ಳುತ್ತಿದೆ.

ಪಟ್ಟಣದ ಲಾಡ್ಜಿಂಗ್ ಕ್ರಾಸ್, ಕೋರ್ಟ್ ರಸ್ತೆ, ನಾಗಾವಿ ದೇವಸ್ಥಾನ ರಸ್ತೆ, ಬಸ್ ಡಿಪೋ ರಸ್ತೆ, ಸೇರಿ ಬಸ್ ನಿಲ್ದಾಣದ ರಸ್ತೆ ಅಕ್ಕ-ಪಕ್ಕ ಸಾಕಷ್ಟು ಪ್ರಮಾಣದಲ್ಲಿ ಧೂಳು ಸಂಗ್ರಹಗೊಂಡಿದ್ದು, ಬಸ್ ಇನ್ನಿತರ ವಾಹನಗಳು ಸಂಚರಿಸಿದರೆ ಅದರ ಹಿಂದೆಯೇ ಧೂಳು ಹಿಂಬದಿ ಸವಾರರ ಕಣ್ಣಿಗೆ ಬೀಳುತ್ತಿದ್ದು ಇದರಿಂದ ಅನಾಹುತಗಳಾಗುವ ಸಂಭವವಿದೆ ಎಂದು ದ್ವಿಚಕ್ರ ವಾಹನ ಸವಾರರು ಭೀತಿ ಎದುರಿಸುವಂತಾಗಿದೆ.

ಒಂದೂವರೆ ತಿಂಗಳಿನಿಂದ ಇದ್ದ ಮಳೆ ಅವಳಿ ನಗರದ ರಸ್ತೆಗಳನ್ನು ಕೆಸರಿನ ಗದ್ದೆಯಂತಾಗಿದ್ದವು. ಕಳೆದ ಒಂದು ವಾರದಿಂದ ಮಳೆ ನಿಂತು ಬಿಸಿಲು ಬಿದ್ದ ಪರಿಣಾಮ ರಸ್ತೆಯಲ್ಲಿನ ಕೆಸರು ಒಣಗಿ ಹುಡಿ ಮಣ್ಣಾಗಿ ಧೂಳನೆಬ್ಬಿಸುತ್ತಿದೆ. ಒಂದು ಹಂತದಲ್ಲಿ ಕೆಸರು ಸಹಿಸಿಕೊಳ್ಳಬಹುದು. ಆದರೆ, ಈ ಧೂಳಿನ ಕಿರಿಕಿರಿ ಸಹಿಸಿಕೊಳ್ಳವುದು ಕಷ್ಟಸಾಧ್ಯ.

ಏಕೆಂದರೆ, ಪ್ರಮುಖ ರಸ್ತೆಗಳಲ್ಲಿ ಸಹಜವಾಗಿ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಿಗ್ಗೆಯಿಂದ ರಾತ್ರಿವರೆಗೆ ವಾಹನಗಳ ಓಡಾಟದಿಂದ ಏಳುವ ಧೂಳು ಇಡೀ ಪಟ್ಟಣವನ್ನು ಮಂಜು ಮುಸುಕಿದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಬೆಳಗ್ಗೆಯಿಂದ ರಾತ್ರಿವರೆಗೂ ರಸ್ತೆ ಅಕ್ಕ-ಪಕ್ಕದ ವ್ಯಾಪಾರಸ್ಥರು ಧೂಳಿನಿಂದ ಬೇಸತ್ತು ಹೋಗಿದ್ದಾರೆ.

ಜನರು ಮನೆ ಬಿಟ್ಟು ಹೊರ ಬರಬೇಕಾದರೆ, ತಲೆ, ಮುಖ ಮುಚ್ಚಿಕೊಂಡು ಹೊರ ಬರುವುದು ಸಾಮಾನ್ಯವಾಗಿದೆ. ಹಿರಿಯರು, ಮಹಿಳೆಯರು, ಮಕ್ಕಳು ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಈ ಧೂಳು ಅನೇಕರಿಗೆ ಶ್ವಾಸಕೋಶ, ಚರ್ಮ ರೋಗ ಸೇರಿದಂತೆ ಹತ್ತಾರು ಕಾಯಿಲೆಗೆ ತುತ್ತಾಗುವಂತೆ ಮಾಡಬಹುದು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ಧೂಳಿನ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಪರಿಹಾರ ಮಾತ್ರ ಸಿಗುತ್ತಲೇ ಇಲ್ಲ ಎನ್ನುತ್ತಿದ್ದಾರೆ.

ರಸ್ತೆ ಸ್ವಚ್ಛತೆ, ಅದರ ಸಂರಕ್ಷಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ, ಅಧಿಕಾರಿಗಳು ಇಂತಹ ಚಟುವಟಿಕೆಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಮಣ್ಣು, ಸಿಮೆಂಟ್ ಇತರ ಲಘು ಪದಾರ್ಥಗಳು ಗಾಳಿಯಲ್ಲಿ ತೂರಿ ಹೋಗಿ ವಾತಾವರಣದಲ್ಲಿ ಪಸರಿಸಿಕೊಳ್ಳುತ್ತದೆ. ಮಣ್ಣು ತುಂಬಿದ, ಸಿಮೆಂಟ್ ತುಂಬಿದ ಲಾರಿಗೆ ತಾಡಪತ್ರಿ ಮೂಲಕ ಮುಚ್ಚಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಮಣ್ಣು ತುಂಬಿದ, ಸಿಮೆಂಟ್ ತುಂಬಿದ ಲಾರಿಗಳು ಓಡಾಡುವುದರಿಂದ ಬೈಕ್ ಸವಾರರು ಕಂಗೆಟ್ಟಿದ್ದಾರೆ. ಸಂಚಾರಿ ನಿಯಮ ಲೆಕ್ಕಿಸದೇ ಓಡಾಡುವ ಟಿಪ್ಪರ್‌ಗಳು ತಮ್ಮನ್ನು ಹಿಂಬಾಲಿಸುವ ದ್ವಿಚಕ್ರ ವಾಹನ ಸವಾರರಿಗೆ ಮುಂದೆ ಸಾಗಲು ಅವಕಾಶ ನೀಡದಿರುವುದರಿಂದ ಬೈಕ್ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಇದೇ ರಸ್ತೆಯಲ್ಲಿ ಶಾಸಕರು ಸೇರಿ ತಾಲೂಕು ಆಡಳಿತ ಅಧಿಕಾರಿಗಳು ದಿನನಿತ್ಯ ತಮ್ಮ ಕಚೇರಿಗಳಿಗೆ ಸಂಚರಿಸುತ್ತಾರೆ ಇದು ಅವರಿಗೆ ಕಾಣುವುದಿಲ್ಲವೇ ಎಂಬ ಪ್ರಶ್ನೆ ಸರ್ವಜನಿಕರಿಗೆ ಕಾಡುತ್ತಿದೆ.

ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿತ್ಯ ರಸ್ತೆ ಪಕ್ಕದಲ್ಲಿ ನೀರು ಸಿಂಪಡಿಸುವ ಕಾರ್ಯವನ್ನು ಮಾಡಲು ಮುಂದಾಗಬೇಕು. ಹಾಗೂ ರಸ್ತೆಯ ಬದಿಯಲ್ಲಿರುವ ಧೂಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವರದಿ: ಜಗದೇವ ಎಸ್ ಕುಂಬಾರ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.