ನೆರೆ ಪೀಡಿತರಿಗೆ ಪರಿಹಾರ ಒದಗಿಸಿ: ಡಿಸಿ ಬಾಬು

ಜಿಲ್ಲಾಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ ಎಂ. ಸುಂದರೇಶ ಬಾಬು ಸೂಚನೆ

0

Gummata Nagari : Gadag News

ಗದಗ : ‘ಹೊಸದಾಗಿ ಗದಗ, ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಣೆ ಆಗಿದ್ದು, ಈ ಮೂಲಕ ಪ್ರವಾಹ ಪೀಡಿತ ಜಿಲ್ಲೆಯಾಗಿದೆ. ಹೀಗಾಗಿ ಸರ್ಕಾರದ ಮಾರ್ಗದರ್ಶನದನ್ವಯ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಪ್ರಮಾಣವನ್ನು ಸಮೀಕ್ಷೆ ಮಾಡಿ, ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ತಾಲೂಕಾಧಿಕಾರಗಳ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆ ಆಗಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ಸೇರಿದಂತೆ ಪ್ರವಾಹಕ್ಕೆ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಬೇಕು. ಅಲ್ಲದೇ, ಅರ್ಹ ಕುಟುಂಬಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಕಳೆದ ವರ್ಷ ಸಂಭವಿಸಿದ ನೆರೆಗೆ ಹಾನಿಗೊಳಗಾಗಿದ್ದು, ಪರಿಹಾರ ಸಿಗದೇ ಬಾಕಿ ಉಳಿದಿರುವ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಬೇಕು. ಇದಕ್ಕೆ ಸಂಬಂಧಿಸಿದಂತಹ ದೂರುಗಳನ್ನು ಆಯಾ ತಾಲ್ಲೂಕು ತಹಶೀಲ್ದಾರರು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಜಿಲ್ಲೆಯಾದ್ಯಂತ ಸುರಿದಿರುವ ನಿರಂತರ ಮಳೆಗೆ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ರಸ್ತೆ ನಿರ್ಮಿಸಿ, ನಿರ್ವಹಣೆಯ ಅವಧಿ ಮುಗಿಯದಿರುವ ಗುತ್ತಿಗೆದಾರರು ಅಥವಾ ಸಂಬಂಧಿಸಿದ ಏಜೆನ್ಸಿಗಳಿಂದ ಸಾರ್ವಜನಿಕರ ಅವಶ್ಯಕತೆಗನುಗುಣವಾಗಿ ರಸ್ತೆ ದುರಸ್ಥಿಗೊಳಿಸಲು ಕ್ರಮ ವಹಿಸಬೇಕು.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಲ್ಲದೇ, ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೊನಾ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಈಗಾಗಲೇ ನಿಗಾದಲ್ಲಿರುವ ಕೊರೊನಾ ಸೋಂಕಿತರು ಮತ್ತು ಶಂಕಿತರ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣವೇ ನಿಗದಿತ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಇದರೊಂದಿಗೆ ಕೊರೊನಾ ಸಾವಿನ ಪ್ರಮಾಣ ಕಡಿಮೆಗೊಳಿಸಬೇಕು. ಅದರಂತೆ ಕೊರೊನಾ ಸೋಂಕಿತರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಚಿಕಿತ್ಸೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ 50 ಆಕ್ಸಿಜೆನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆ ಹೆಚ್ಚುತ್ತಿದ್ದು, ಇಂತವರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಅಗತ್ಯವಿರುವ ಜಮೀನುಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಮಂಜೂರಾತಿ ನೀಡಬೇಕು. ಅದರಂತೆ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಸ್ಮಶಾನಕ್ಕಾಗಿ ಭೂಮಿ ಕಲ್ಪಿಸಬೇಕು. ಅಲ್ಲದೇ, ಅದಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.

ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.