ಅಪೌಷ್ಠಿಕತೆ ಮುಕ್ತಗೊಳಿಸಿ, ಬಲಿಷ್ಠ ರಾಷ್ಟ್ರ ನಿರ್ಮಿಸಿ

ಗದಗದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಪೋಷಣ ರಥಕ್ಕೆ ಚಾಲನೆ

0

Gummata Nagari : Gadag News

ಗದಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವರ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಪೋಷಣ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ರಾಜಶೇಖರ ವೆಂಕನಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಚಾಲನೆ ನೀಡಿದರು.

ನಂತರ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ರಾಜಶೇಖರ ಪಾಟೀಲ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಠಿಕ ಆಹಾರದ ಜೊತೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಮೂಲಕ ದೇಶವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಿ, ಆರೋಗ್ಯವಂತ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕು ಎಂದರು.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಆರೋಗ್ಯವಂತರಾದರೇ, ದೇಶದ ಭವಿಷ್ಯ ಉಜ್ವಲ ಆಗುತ್ತದೆ. ಅಭಿಯಾನದ ಉದ್ದೇಶ ಪ್ರತಿ ಹಳ್ಳಿಗಳ ಮನೆ ಮನೆಗೂ ತಲುಪಬೇಕು. ಇದೊಂದು ನಿರಂತರ ಅಭಿಯಾನವಾಗಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪೋಷಣ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಅದೊಂದು ಜನಾಂದೋಲನ ಮತ್ತು ಸಹಭಾಗಿತ್ವ ಆಗಿದೆ. ಸಂಬಂಧಿಸಿದ ಅಧಿಕಾರಿಗಳ ಸಮನ್ವಯತೆ, ಜನರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನ್ಯಾಯಧೀಶರಾದ ರಾಜಶೇಖರ ಪಾಟೀಲ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಅಪೌಷ್ಠಿಕತೆಯಿಂದ ಮಕ್ಕಳ ಸಾವು ತಡೆಗಟ್ಟುವ ಸಲುವಾಗಿ ಪ್ರತಿವರ್ಷ ದೇಶಾದ್ಯಂತ ಸೆಪ್ಟಂಬರ್ ತಿಂಗಳನ್ನು ರಾಷ್ಟ್ರೀಯ ಪೋಷಣ್ ಮಾಸವನ್ನಾಗಿ ಆಚರಿಸಲಾಗುತ್ತದೆ. ಜನರಿಗೆ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೋಷಣಾ ರಥದ ಮೂಲಕ ಪ್ರತಿ ಮನೆ ಮನೆಗೂ ಕಾರ್ಯಕ್ರಮ ತಲುಪಿಸಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಹೆಚ್.ಹೆಚ್.ಕುಕನೂರ ಅವರು ಮಾತನಾಡಿ, ಅಪೌಷ್ಠಿಕತೆಯನ್ನ ದೂರಗೊಳಿಸಿ ದೇಶಕ್ಕೆ ಶಕ್ತಿಶಾಲಿ ತಳಪಾಯ ಹಾಕಬೇಕು. ದೇಶದಲ್ಲಿ ಕುಬ್ಜತೆ, ಅಪೌಷ್ಠಿಕತೆ, ರಕ್ತಹೀನತೆ, ತೂಕ ಕಡಿಮೆ ಇರುವ ಶಿಶುಗಳ ಸಂಖ್ಯೆಯ ಪ್ರಮಾಣ ಕಡಿಮೆಗೊಳಿಸವುದು ಪೋಷಣ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪೋಷಣ್ ಮಾಸಾಚರಣೆಯ ಭಿತ್ತಿಪತ್ರಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ. ಸೇರಿದಂತೆ ಅತಿಥಿಗಳೆಲ್ಲರು ಬಿಡುಗಡೆಗೊಳಿಸಿದರು.

ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.