ಡಿಸೆಂಬರ್ ನಲ್ಲಿ ಬಿಜಾಪುರ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭ

0

Gummata Nagari : Bijapur News

ಬಿಜಾಪುರ : ಡಿಸೆಂಬರ್ ತಿಂಗಳಲ್ಲಿ ಬಿಜಾಪುರ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಕಳೆದ ಆರು ವರ್ಷಗಳಿಂದ ಆಳ್ವಿಕೆ ನಡೆಸಿದ ಸರ್ಕಾರಗಳು ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿರಲಿಲ್ಲ, ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಹಾಗೂ ಎಲ್ಲ ಶಾಸಕರು ನಮ್ಮ ಸರ್ಕಾರದ ಮೇಲೆ ಒತ್ತಡ ತಂದ ಕಾರಣದಿಂದಾಗಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಲೋಕೋಪಯೋಗಿ ಇಲಾಖೆಯ ವತಿಯಿಂದಲೇ ಕಾಮಗಾರಿ ನಡೆಯಲಿದೆ ಎಂದು ಕಾರಜೋಳ ಸ್ಪಷ್ಟಪಡಿಸಿದರು.

ಟೆಂಡರ್ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ, ನೂರಾರು ಕೋಟಿ ರೂ. ಬೃಹತ್ ಮೊತ್ತದ ಕಾಮಗಾರಿ ಆಗಿರುವುದರಿಂದಾಗಿ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅದನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆಗೆ ಇರಿಸಬೇಕಾಗುತ್ತದೆ, ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಭೀಮಾ ನದಿ ಪ್ರವಾಹದಿಂದಾಗಿ ತೊಂದರೆಗೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಕೇಂದ್ರದಲ್ಲಿರುವ ಪ್ರಧಾನಿ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರೆ. ಅಧಿಕಾರಕ್ಕೆ ಬಂದ ನಂತರ 18,453 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ, ಪಂ.ದೀನದಯಾಳ ವಿದ್ಯುತ್ ಯೋಜನೆಯಡಿಯಲ್ಲಿ ಶೇ.99 ರಷ್ಟು ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುವ ಮಹತ್ವದ ಯೋಜನೆ ರೂಪಿಸಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ವಿವರಣೆ ನೀಡಿದ ಅವರು, 80 ಕೋಟಿಯಷ್ಟು ಜನರಿಗೆ ಉಚಿತವಾಗಿ ಧವಸ ಧಾನ್ಯ ವಿತರಣೆ, ಉಜ್ವಲ ಯೋಜನೆಯಡಿಯಲ್ಲಿ 12 ಕೋಟಿ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನೀಲ ಸಿಲಿಂಡರ್‌ಗಳ ವಿತರಣೆ ಹೀಗೆ ಹತ್ತಾರು ಯೋಜನೆಗಳ ಮೂಲಕ ಮೋದಿಜಿ ನೇತೃತ್ವದ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಆಯುಷ್ಮಾನ ಯೋಜನೆಯಡಿಯಲ್ಲಿ 10 ಕೋಟಿ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಕಾರ್ಯ ಕೈಗೊಳ್ಳಲಾಗಿದೆ.

ಒಂದು ದೇಶ-ಒಂದು ಪಡಿತರ ಚೀಟಿ ಜಾರಿಗೆ ತಂದಿರುವುದರಿಂದ ದೇಶದ ಯಾವುದೇ ಮೂಲೆಯಲ್ಲಿಯೂ ಬಡವರು ಧವಸ-ಧಾನ್ಯಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ, ಈ ಹಿಂದೆ ಗುಳೇ ಹೋಗುವ ಕುಟುಂಬಗಳಿಗೆ ಆಯಾ ರಾಜ್ಯದಲ್ಲಿ ಪಡಿತರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಈ ಯೋಜನೆ ಗುಳೇ ಹೋಗುವ ಜನರಿಗೂ ಅವರು ಇರುವ ರಾಜ್ಯದಲ್ಲಿಯೇ ಪಡಿತರ ಸಿಗುವ ವ್ಯವಸ್ಥೆ ದೊರಕಿಸಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ಕರ್ನಾಟಕ ರಾಜ್ಯ ಸಾವಯವ ಬೀಜ-ಪ್ರಮಾಣಿಕೃತ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ, ಗೂಳಪ್ಪ ಶೆಟಗಾರ, ಮಲ್ಲಮ್ಮ ಜೋಗೂರ, ರವೀಂದ್ರ ಲೋಣಿ, ಶಿವರುದ್ರ ಬಾಗಲಕೋಟ, ಕೃಷ್ಣ ಗುನ್ನಾಳಕರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.