ಬಿ ಎಸ್ ವೈ ಸರ್ಕಾರದಲ್ಲಿ ಭ್ರಷ್ಟಾಚಾರವೇ ಪಾರದರ್ಶಕ

ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಎಸ್.ವೈ ವಿರುದ್ಧ ವಾಗ್ದಾಳಿ

0

Gummata Nagari : Bangalore News

ಬೆಂಗಳೂರು : ಭ್ರಷ್ಟಾಚಾರ ರಹಿತ ಹಾಗೂ ಪಾರದಾರ್ಶಕ ಆಡಳಿತವನ್ನು ರಾಜ್ಯದ ಜನ ನಿರೀಕ್ಷಿಸಿದ್ದರು, ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಭ್ರಷ್ಟಾಚಾರವನ್ನೇ ಪಾರದರ್ಶಕವಾಗಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿ.ಎಸ್.ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬ ಜೆಸಿಬಿ ಮೂಲಕ ಹಣ ಗೋರುತ್ತಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಚುನಾವಣಾ ಭಾಷಣದಲ್ಲಿ ವಂಶಪಾರಂಪರ್ಯ ಭ್ರಷ್ಟಾಚಾರ ಗೆದ್ದಲು ಇದ್ದಂತೆ ಅಂದಿದ್ದಾರೆ, ಅವರ ಹೇಳಿಕೆ ಗಮನಿಸಿದರೆ ಬಹುಶಃ ಯಡಿಯೂರಪ್ಪನವರ ಆಡಳಿತವನ್ನು ನೋಡಿಯೇ ಈ ರೀತಿ ಹೇಳಿದ್ದಾರೆ ಅಂತ ನನಗನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ಬಿಟ್ಟು ಯಡಿಯೂರಪ್ಪ ಅವರ ಸರ್ಕಾರ ಹೊಸದಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿಮಾಡಿಲ್ಲ. ದುರಂತವೆಂದರೆ ನಮ್ಮ ಹಲವು ಕಾರ್ಯಕ್ರಮಗಳಿಗೂ ಅನುದಾನ ನೀಡದೆ ಇತಿಶ್ರೀ ಹಾಡಿದ್ದೇ ರಾಜ್ಯ ಬಿಜೆಪಿ ಸರ್ಕಾರದ ಈ ವರೆಗಿನ ಸಾಧನೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಸಾಲ ಮಾಡಿ ಜನರಿಗೆ ಹೋಳಿಗೆ ತಿನ್ನಿಸುತ್ತಿದೆ ಎಂದು ಬಿಜೆಪಿಯವರು ವ್ಯಂಗ್ಯವಾಡುತ್ತಿದ್ದರು. ಈಗಿನ ಬಿಜೆಪಿ ಸರ್ಕಾರ ನಮಗಿಂತ ದುಪ್ಪಟ್ಟು ಸಾಲ ಮಾಡಿದೆ, ಹೋಗಲಿ ಅದನ್ನು ಜನರಿಗಾದ್ರೂ ಉಪಯೋಗಿಸ್ತಿದ್ದಾರಾ, ಅದೂ ಇಲ್ಲ. ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿದ್ದಾರೆ.

ಕೆ.ಆರ್ ಪೇಟೆಯಲ್ಲಿ ಹಣ ಹಂಚಿದಂತೆ ಶಿರಾದಲ್ಲೂ ಬಿಜೆಪಿಯವರು ಮತದಾರರ ಮನೆಬಾಗಿಲಿಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಈ ವಿಚಾರ ಪೊಲೀಸ್ ಇಲಾಖೆ, ಚುನಾವಣಾ ಆಯೋಗಕ್ಕೆ ಗೊತ್ತಿದ್ದರೂ ಅವುಗಳು ಕಣ್ಣುಮುಚ್ಚಿ ಕೂತಿರುವುದೇಕೆ? ಎಂದು ಪ್ರಶ್ನಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.