ಮುಚಖಂಡಿ, ತುಳಸಿಗೇರಿ ದೇವಸ್ಥಾನ ಅಭಿವೃದ್ಧಿಗೆ ಒತ್ತು: ಡಿಸಿ ರಾಜೇಂದ್ರ

0

Gummata Nagari : Bagalkot News

ಬಾಗಲಕೋಟೆ : ಜಿಲ್ಲಾ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬಿ ಶ್ರೇಣಿಯ ದೇವಾಲಯಗಳಾದ ಮುಚಖಂಡಿ ಮತ್ತು ತುಳಸಿಗೇರಿ ದೇವಾಲಯಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆಯ ವ್ಯಾಪ್ತಿಗೆ ಪ್ರವರ್ಗ ಬಿ ಶ್ರೇಣಿಯ 3 ಹಾಗೂ ಸಿ ವರ್ಗದ 1163 ಸೇರಿ ಒಟ್ಟು 1166 ಅಧಿಸೂಚಿತ ದೇವಾಲಯಗಳಿವೆ. ತಾಲೂಕಾವಾರು ಮುಜರಾಯಿ ಅಧಿಸೂಚಿತ ದೇವಾಲಯಗಳ ಪಟ್ಟಿಯನ್ನು ಪಡೆದುಕೊಂಡು ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಮುಂದಿನ ಸಭೆಯಲ್ಲಿ ತಾಲೂಕಾವಾರು ದೇವಾಲಯಗಳ ಮಾಹಿತಿಯನ್ನು ಪಡೆದು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಮುಳುಗಡೆಯಾದ ದೇವಾಲಯಗಳಿದ್ದಲ್ಲಿ ಅಂತವುಗಳ ಪಟ್ಟಿ ನೀಡಿ ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು. ಇಲಾಖೆ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ಕಲಂ 25ರನ್ವಯ ವ್ಯವಸ್ಥಾಪನಾ ಸಮಿತಿಯನ್ನು ಹಾಗೂ ಅವಶ್ಯವಿದ್ದಲ್ಲಿ ಸಮಿತಿ ರಚನೆಯಾಗುವವರೆಗೆ ಕಾಯ್ದೆ 29 ರನ್ವಯ ಆಡಳಿತಾಧಿಕಾರಿ ನೇಮಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ತಿನ ನಿಯಂತ್ರಣವು ಅಧಿಸೂಚಿತ ಸಂಸ್ಥೆ ಮತ್ತು ದತ್ತಿಗಳು ಯೋಗ್ಯ ರೀತಿಯಲ್ಲಿ ಹಾಗೂ ಆದಾಯವು ದೇವಸ್ಥಾನದ ಅಸ್ತತ್ವಕ್ಕೆ ವಿನಿಯೋಗವಾಗುತ್ತಿರುವ ಬಗ್ಗೆ ಖಚಿತತೆಗೆ ಅವಶ್ಯವಿರುವ ಆದೇಶ ಹೊರಡಿಸಲು ಮತ್ತು ನಿರ್ದೇಶನ ನೀಡಲು ಧರ್ಮಿಕ ಪರಿಷತ್ತು ಅಧಿಕಾರ ಹೊಂದಿರುತ್ತದೆ. ಪರಿಷತ್ತಿನ ವ್ಯಾಪ್ತಿಯಲ್ಲಿ ಬರುವ ವಿವಾದಗಳನ್ನು, ಪರಿಷತ್ತಿನ ನ್ಯಾಯಿಕ ಸದಸ್ಯ ಹಾಗೂ ಕಾರ್ಯದರ್ಶಿ ಒಳಗೊಂಡ ನ್ಯಾಯಾಧಿಕರಣ ನಿರ್ಣಯಿಸುತ್ತದೆ. ಅದರಲ್ಲಿ ಭಿನ್ನಾಭಿಪ್ರಾಯ ಇದ್ದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ನಿರ್ಣಯಿಸಲಿದೆ ಎಂದರು.

ಮುಚಖಂಡಿ ಬಿ ಶ್ರೇಣಿಯ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ, ವಿವಿಧ ನ್ಯಾಯಾಲಯಗಳಲ್ಲಿ ಅಧಿಸೂಚಿತ ದೇವಾಲಯಗಳ ಆಡಳಿತದ ಬಗ್ಗೆ ದಾಖಲಾದ ಪ್ರಕರಣಗಳ ಕುರಿತು ಪರಿಶೀಲಿಸಿ ನಿಯಮಾನುಸಾರ ವ್ಯವಸ್ಥಾಪನಾ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡಬಹುದಾದ ದೇವಸ್ಥಾನಗಳ ವಿವರಗಳನ್ನು ಸಲ್ಲಿಸಲು ಧಾರ್ಮಿಕ ದತ್ತಿ ಸಹಾಯಕರಿಗೆ ಜವಾಬ್ದಾರಿ ವಹಿಸುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶಿವುಕುಮಾರ ಮೇಲನಾಡ, ಚಂದ್ರಶೇಖರ ದೊಡಮನಿ, ಉಮೇಶ ಸಿದ್ದರೆಡ್ಡಿ, ತವನಪ್ಪ ಉಪಾದ್ಯಾಯ, ಡಾ.ವಿಜಯಕುಮಾರ ಮಡಿವಾಳರ, ರಾಮಣ್ಣ ಮನಗೂಳಿ, ಗೀತಾ ದಾನಶೆಟ್ಟಿ, ಜಿಲ್ಲಾ ಮುಜರಾಯಿ ಇಲಾಖೆಯ ಪ್ರಶಾಂತ ಹೊಸಮನಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.