ಹೆಚ್ಚುವರಿ ಕಬ್ಬು ಬಾಕಿ ಪಾವತಿಗೆ ಗಡುವು

0

Gummata Nagari : Bagalkot News

ಬಾಗಲಕೋಟೆ : ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರಿಗೆ ನೀಡಬೇಕಾಗ ಎಫ್‌ಆರ್‌ಪಿ ಹಾಗೂ ಘೋಷಿಸಿದ ಹೆಚ್ಚುವರಿ ಕಬ್ಬಿನ ಬಾಕಿ ಮೊತ್ತವನ್ನು ಅಕ್ಟೋಬರ 25 ರೊಳಗಾಗಿ ಪಾವತಿಸದೇ ಹೊರತು 2020-21ನೇ ಹಂಗಾಮು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2019-20ನೇ ಹಂಗಾಮಿಗೆ ಜಿಲ್ಲೆಯಲ್ಲಿರುವ 12 ಸಕ್ಕರೆ ಕಾರ್ಖಾನೆಗಳ ಪೈಕಿ 11 ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಎಫ್‌ಆರ್‌ಪಿ ದರದ ಪ್ರಕಾರ ಸಂಪೂರ್ಣ ಪಾವತಿ ಮಾಡಿರುತ್ತಾರೆ. ಆದರೆ ಮುಧೋಳನ ನಿರಾಣಿ ಶುಗರ್ಸನವರು ಮಾತ್ರ 4.18 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದು, ಒಂದು ವಾರದಲ್ಲಿ ಪಾವತಿಸುವಂತೆ ಕಾರ್ಖಾನೆ ಮಾಲೀಕರಿಗೆ ನಿರ್ದೇಶನ ನೀಡಿದರು.

2019-20ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿದ ಹೆಚ್ಚುವರಿ ಹಣ ಬಾಕಿ ಉಳಿಸಿಕೊಂಡಿದ್ದು, ಗೋದಾವರಿ ಶುಗರ್ಸನವರು ಮಾತ್ರ ಪೂರ್ತಿಯಾಗಿ ಪಾವತಿ ಮಾಡಿರುತ್ತಾರೆ. ಉಳಿದ 11 ಕಾರ್ಖಾನೆಯವರು ಪಾವತಿ ಮಾಡಿರುವುದಿಲ್ಲ. ಬಾಕಿ ಮೊತ್ತವನ್ನು ಅಕ್ಟೋಬರ 25 ರೊಳಗಾಗಿ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಪ್ರಸಕ್ತ ಹಂಗಾಮಿಗೆ ಕ್ರಷರ್ ಮಾಡುವಂತಿಲ್ಲವೆ ಎಂದರು. ಕೆಲವೊಂದು ಕಾರ್ಖಾನೆಯವರು ಬಾಕಿ ಪಾವತಿಸಲು ಪ್ರಾರಂಭಿಸಿದ್ದು, ಸಂಪೂರ್ಣ ಬಾಕಿ ಹಣವನ್ನು ತುರ್ತಾಗಿ ಪಾವತಿಸಲು ಸೂಚಿಸಿದರು.

ಬೀಳಗಿ ಶುಗರ್ಸ್ 17.69 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 10.46 ಕೋಟಿ, ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿ. 21.40 ಕೋಟಿ, ಜಮಖಂಡಿ ಸುಗರ್ಸ್ 10.18 ಕೋಟಿ, ನಿರಾಣಿ ಶುಗರ್ಸ್ 24.28 ಕೋಟಿ, ಸಿದ್ದಾಪೂರದ ಪ್ರಭುಲಿಂಗೇಶ್ವರ ಸುಗರ್ಸ್ 18.10 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 5.32 ಕೋಟಿ, ಹಿಪ್ಪರಗಿಯ ಶ್ರೀ ಸಾಯಿಪ್ರೀಯಾ ಶುಗರ್ಸ್ 10.97 ಕೋಟಿ ಸೇರಿ ಒಟ್ಟು 118.41 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿರುವುದಾಗಿ ತಿಳಿಸಿದರು.

ಅಲ್ಲದೇ 2018-19ರ ಹಂಗಾಮಿಗೆ ಹೆಚ್ಚುವರಿ ಹಣ ಸಂದಾಯ ಕುರಿತು ರೈತರ ಸಭೆ ಕರೆದು ಹೆಚ್ಚುವರಿ ಹಣ ಘೋಷಣೆ ಮಾಡಿ ಪಾವತಿಸಲು ಕ್ರಮಕೈಗೊಳ್ಳಲು ತಿಳಿಸಿದರು. ಬಾಕಿ ಪಾವತಿಸದೇ ಪ್ರಸಕ್ತ ಹಂಗಾಮಿಗೆ ಕಬ್ಬು ನುರಿಸುವಂತಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆಯ ಮಾಲಿಕರು ಕೇಂದ್ರ ಸರಕಾರದಿಂದ ಬರಬೇಕಾದ ಇನ್‌ಪುಟ್ ಸಬ್ಸಿಡಿ, ಬಫ್ ಸ್ಟಾಕ್ ಬಡ್ಡಿ, ವಿದ್ಯುತ್‌ನ ಕೋರ್ಜ ಬಿಲ್ ಬಾಕಿ ಬರಬೇಕಾಗಿದ್ದು, ಇದರಿಂದ ಬಾಕಿ ಪಾವತಿಸಲು ವಿಳಂಬವಾಗಿರುವುದಾಗಿ ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಿಮಗೆ ತೊಂದರೆ ಇದ್ದರೂ ಸಹ ಬೇರೆ ಯಾವುದಾದರೂ ಮೂಲಗಳಿಂದ ಬಾಕಿ ಹಣ ಪಾವತಿಗೆ ವ್ಯವಸ್ಥೆ ಮಾಡಿ ಅಕ್ಟೋಬರ 25ರ ನಂತರ ಕಾರ್ಖಾನೆ ಪ್ರಾರಂಭಕ್ಕೆ ಎಲ್ಲ ಸಿದ್ದತೆಗಳನ್ನು ಮಾಡುಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಕಾರ್ಖಾನೆಯ ವಿವಿಧ ಪ್ರತಿನಿಧಿಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.