ತೊಗರಿಯಲ್ಲಿ ಸಮಗ್ರ ಪೀಡೆ ನಿರ್ವಹಣೆ

0

Gummata Nagari : Bagalkot News

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಮರುಕ (ಚುಕ್ಕೆ ಕಾಯಿ ಕೊರಕ), ಕಾಯಿಕೊರೆಯುವ ಕೀಡೆ, ಹೆಲಿಕೋವರ್ಪಾ ಆರ್ಮಿಜೆರ, ಕಾಯಿ ನೊಣ, ಮತ್ತು ರಸ ಹೀರುವ ಕೀಟಗಳ ಬಾಧೆ ಕಂಡುಬಂದಿದೆ. ಸದ್ಯದ ಪರಿಸ್ಥಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುತ್ತಿರುವುದರಿಂದ ಈ ಕೀಟಗಳು ಹೆಚ್ಚಿನ ಪ್ರಮಾಣದಲ್ಲಿ ವೃದ್ದಿಯಾಗುವ ಲಕ್ಷಣಗಳಿದ್ದು, ರೈತರು ಈ ಕೀಟಗಳ ಹತೋಟಿ ಕ್ರಮಗಳನ್ನು ಸರಿಯಾದ ಸಮಯದಲ್ಲಿ ಕೈಗೊಂಡರೆ ತಮ್ಮ ಬೆಳೆಗಳನ್ನು ರಕ್ಷಿಸಬಹುದಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಚುಕ್ಕೆ ಕಾಯಿ ಕೊರಕ (ಮರುಕ/ಜಾಡ ಹುಳು/ಬಲೆ ಕಟ್ಟುವ ಕೀಟ)

ಈ ಕೀಟವು ಇತ್ತೀಚಿನ ದಿನಗಳಲ್ಲಿ ತೊಗರಿಯ ಮೇಲೆ ಹೆಚ್ಚಾಗಿ ಕಂಡು ಬರುತ್ತಿದ್ದು ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ. ಪ್ರೌಢ ಚಿಟ್ಟೆಯು ಕುಡಿ, ಮೊಗ್ಗು ಮತ್ತು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಬಂದ ಮರಿ ಹುಳುಗಳು ಮೊಗ್ಗುಗಳನ್ನು, ಕಾಯಿಗಳನ್ನು ಮತ್ತು ಎಲೆಗಳನ್ನು ಕೂಡಿಸಿ ಬಲೆಯನ್ನು ಕಟ್ಟುತ್ತದೆ. ನಂತರ ಬಲೆಯೊಳಗಿದ್ದು ತಿನ್ನುವುದರಿಂದ ಇಳುವರಿ ಕಡಿಮೆಯಾಗುತ್ತದೆ.

ಈ ಕೀಟದ ನಿಯಂತ್ರಣಕ್ಕಾಗಿ ಮಡಚಿದ, ಗುಂಪುಗಟ್ಟಿದ ಜಾಡು ಎಲೆಗಳನ್ನು ಬೆಳೆಯ ಮೇಲಿಂದ ಬಿಡಿಸಬೇಕು. ಬೆಳೆಯು ಮೊಗ್ಗು ಹಾಗೂ ಹೂವು ಬಿಡುವ ಸಮಯದಲ್ಲಿದ್ದಾಗ 2.0 ಮಿ.ಲೀ ಪ್ರೋಪೆನೋಪಾಸ್ 50 ಇ.ಸಿ ಅಥವಾ ಅಸಿಫೇಟ್ 1 ಗ್ರಾಂ. ಅಥವಾ ಅಸಿಟಾಮಾಪ್ರಿಡ್ 0.33. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹಸಿರು/ಕಾಯಿ ಕೊರಕ ಕೀಡೆ (ಹೆಲಿಕೊವರ್ಪಾ) :

ಮೊದಲನೇ ಕೀಟನಾಶಕದ ಸಿಂಪರಣೆ : ಪ್ರತಿಶತ 25-50 ರಷ್ಟು ಹೂವಾಡುವಾಗ ಪ್ರತಿ ಗಿಡದಲ್ಲಿ ಎರಡು ತತ್ತಿ ಅಥವಾ ಒಂದು ಕೀಡೆ ಕಾಣಿಸಿಕೊಂಡರೆ ಮೊದಲನೇ ಸಿಂಪರಣೆಯಾಗಿ ತತ್ತಿ ಕೀಟನಾಶಕಗಳಾದ ಪ್ರೊಫೆನೋಸಾನ್ 50 ಇ.ಸಿ. 2 ಮಿ.ಲೀ. ಮಿಥೊಮಿಲ್ 0.6 ಗ್ರಾಂ ಅಥವಾ ಥಯೋಡಿಕಾರ್ಬ 75 ಡಬ್ಲು ಪಿ 0.6 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.

ಎರಡನೇ ಸಿಂಪರಣೆ : ಪ್ರತಿ ಲೀಟರ್ ನೀರಿಗೆ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಮೆನಸಿನಕಾಯಿ (0.5%) & ಬೆಳ್ಳುಳ್ಳಿ (0.25%) ಕಷಾಯ ಬಳಸಬೇಕು. ಬೇವಿನ ಬೀಜದ ಲಭ್ಯತೆ ಇಲ್ಲದಿದ್ದರೆ ಬೇವಿನ ಮೊಲದ ಕೀಟನಾಶಕಗಳನ್ನು ಪ್ರತಿ ಲೀ ನೀರಿಗೆ 3 ಮಿ.ಲೀ ನಂತೆ ಉಪಯೋಗಿಸಬೇಕು ಅಥವಾ ಹೆಲಿಕೋವರ್ಪಾ ಎನ್.ಪಿ.ವಿ. ನಂಜಾಣುವನ್ನು ಎಕರೆಗೆ 100 ಎಲ್.ಇ ನಂತೆ ಬೆರೆಸಿ ಸಿಂಪಡಿಸಬೇಕು.

ಮೂರನೇಯ ಸಿಂಪರಣೆ: ಹುಳುಗಳ ಬಾಧೆ ಮತ್ತು ಸಂಖ್ಯೆ ಹೆಚ್ಚಾಗಿರು ಸಮಯದಲ್ಲಿ ಕೀಟನಾಶಕಗಳಾದ 0.3 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ ಅಥವಾ 0.15ಮಿ.ಲೀ ಕ್ಲೋರೆಂಟ್ರಿನಿಲಿಪ್ರೋಲ್ 18.5 ಎಸ್.ಸಿ ಅಥವಾ 0.2 ಗ್ರಾಂ ಪ್ಲೊಬೆಂಡಿಯಾಮೈಡ್ 20ಡಬ್ಲೂ.ಜಿ ಅಥವಾ 0.75 ಮಿ.ಲೀ ನೊವಲ್ಯುರಾನ್ 10 ಇ.ಸಿ ಅಥವಾ 0.1 ಮಿ.ಲೀ ಸ್ಪೈನೋಸಾಡ್ 45 ಎಸ್.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.

ಕಾಯಿ ನೊಣ :

ಕಡಿಮೆ ಅವಧಿ ಇರುವತಳಿಗಳನ್ನು ಆಯ್ಕೆಮಾಡಬೇಕು. ಈ ಕೀಟದ ನಿರ್ವಹಣೆಗಾಗಿ ಬೆಳೆಯು ಕಾಯಿಕಟ್ಟುವ ಹಂತದಲ್ಲಿ 0.2 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ +1 % ಬೆಲ್ಲದ ದ್ರಾವಣ ಅಥವಾ 0.2 ಮಿ.ಲೀ ಥೈಯೋಮಿಥಾಕ್ಸಾಮ್ 25 ಡಬ್ಲೂ.ಜಿ + 1 % ಬೆಲ್ಲದ ದ್ರಾವಣ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ ಅಥವಾ 0.25 ಗಾಂ ಅಸಿಟಾಮಿಪ್ರಿಡ್ 20 ಎಸ್.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಮೇಲೆ ಈ ಕೀಟದ ಹಾವಳಿ ಕಂಡು ಬಂದಾಗ ಸಿಂಪಡಿಸಬೇಕು.

ರಸ ಹೀರುವ ಕೀಟಗಳು :

ತೊಗರಿ ಬೆಳೆಯುವ ಎಲ್ಲ ಪ್ರದೇಶಗಳಲ್ಲೂ ಜಿಗಿ ಹುಳುಗಳ ಬಾಧೆ ಕಂಡು ಬಂದರೂ ಇಳುವರಿಯಲ್ಲಿ ಅಷ್ಟೇನೂ ನಷ್ಟವಾಗಿರುವ ವರದಿಗಳಿಲ್ಲ. ನುರಿತ ಕೀಟತಜ್ಞರು ಮಾತ್ರ ಅವುಗಳನ್ನು ಗುರುತಿಸಬಲ್ಲರು. ಈ ಕೀಟಗಳು ತೊಗರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಾಗ ಹೆಚ್ಚಿನ ಹಾನಿ ಉಂಟು ಮಾಡುತ್ತವೆ. ಅಂತಹ ಸನ್ನಿವೇಶದಲ್ಲಿ ಅಂತರವ್ಯಾಪಿ ಕೀಟನಾಶಕಗಳಾದ 0.2 ಮಿ.ಲೀ ಥೈಯೋಮಿಥಾಕ್ಸಾಮ್ 25 ಡಬ್ಲೂ.ಜಿ ಅಥವಾ ಅಸಿಫೇಟ್ 1 ಗ್ರಾಂ. ಅಥವಾ ಅಸಿಟಾಮಾಪ್ರಿಡ್ 0.33 ಗ್ರಾಂ. ಪ್ರತಿ ಲೀಟರ. ನೀರಿಗೆ ಬೆರೆಸಿ ಬೆಳೆಯ ಮೇಲೆ ಈ ಕೀಟದ ಹಾವಳಿ ಕಂಡು ಬಂದಾಗ ಸಿಂಪಡಿಸಬೇಕು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.