ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಭೇಟಿ

ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ

0

ಕಾವೇರಿ ಭವನದ ಹಿನ್ನೆಲೆ!
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದ ಸಂಖ್ಯೆ: 10ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯದ ಗಣ್ಯಾತಿಗಣ್ಯರ ವಾಸ್ತವ್ಯಕ್ಕೆ ಎಂದೇ ಕರ್ನಾಟಕ ಭವನ ಕಟ್ಟಡವು 1967ರಲ್ಲಿ ನಿರ್ಮಾಣಗೊಂಡಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ಕಟ್ಟಡದಲ್ಲಿ ಕಾಲಕಾಲಕ್ಕೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಕಟ್ಟಡವು ಶಿಥಿಲಗೊಳ್ಳುತ್ತಿರುವುದನ್ನು ಪರಿವೀಕ್ಷಿಸಿದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತ ಎಂದು 2018 ರ ಫೆಬ್ರವರಿ 1 ರಂದು ಮೆ ಸಿವಿಲ್ ಏಡ್ ಟೆಕ್ನೋ ಕ್ಲಿನಿಕ್ ತಾಂತ್ರಿಕ ಸಂಸ್ಥೆ ನೀಡಿದ ತಾಂತ್ರಿಕ ಶಿಫಾರಸ್ಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಕಟ್ಟಡ ಪುನನಿರ್ಮಾಣ ಕಾಮಗಾರಿಗಳಿಗೆ 87 ಕೋಟಿ ರೂ ಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ 81 ಕೋಟಿ ರೂ ತಾಂತ್ರಿಕ ಮಂಜೂರಾತಿ ನೀಡಿದೆ. ಕಟ್ಟಡದ ನಿರ್ಮಾಣಕ್ಕೆ ಮೆ: ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಮೇಳೈಸಲಿರುವ ಕಾವೇರಿ ಕಟ್ಟಡವು ಕೌಟಿಲ್ಯ ಮಾರ್ಗದ ಹೆಗ್ಗುರುತಾಗಿ ಮತ್ತೆ ಕಂಗೊಳಿಸಲಿದೆ.

Gummata Nagari : India News

ನವದೆಹಲಿ : ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರಾಷ್ಟ್ರದ ರಾಜಧಾನಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1, ಕಾವೇರಿ ಕಟ್ಟಡದ ಪುನನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ತಳ ಮಹಡಿಗಳೂ, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ರ್ಮಾಣಕ್ಕೆ ಮೆ: ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೆಟ್ ಲಿಮಿಟೆಡ್ ಅವರಿಗೆ ವಹಿಸಿದ್ದು, ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಪ್ರತಿಪಕ್ಷ ನಾಯಕರ ಆರೋಪ ತಳ್ಳಿಹಾಕಿದ ಮುಖ್ಯಮಂತ್ರಿ

ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸೂಪರ್ ಸಿ ಎಂ ಎಂದು ಬಣ್ಣಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ, ವಿಜಯೇಂದ್ರ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದಲ್ಲಿ ಉಪಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ರಾಜ್ಯ ಸರ್ಕಾರದ ಯಾವುದೇ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತಿಲ್ಲ ಎಂದು ಸ್ಪಷ್ಟಪಡಿಸಿದರು.

ಊಹಾಪೋಹ ಬೇಡ!

ಜಾತ್ಯಾತೀತ ಜನತಾ ದಳದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ತಮ್ಮ ನಡುವಿನ ಇತ್ತೀಚಿನ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕರಲ್ಲೊಬ್ಬರು. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಮಿಸಿದ್ದರು. ಇಂತಹ ವಿಷಯಗಳಲ್ಲಿ ಅನಗತ್ಯ ಊಹಾಪೋಹ ಬೇಡ ಎಂದು ಉತ್ತರಿಸಿದರು.

ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗಳ ಹೊತ್ತ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಚಿಕ್ಕೋಡಿಯ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆ ಸಂಸದ ಪಿ.ಸಿ.ಗದ್ದೀಗೌಡರ್, ಕಲಬುರಗಿಯ ಸಂಸದ ಉಮೇಶ್ ಜಾಧವ್, ಬೀದರ್‌ನ ಸಂಸದ ಭಗವಂತ ಖೂಬಾ, ಕೊಪ್ಪಳದ ಸಂಸದ ಕರಡಿ ಸಂಗಣ್ಣ, ಬಳ್ಳಾರಿಯ ವೈ.ದೇವೇಂದ್ರಪ್ಪ, ದಾವಣಗೆರೆಯ ಸಂಸದ ಜಿ ಎಂ ಸಿದ್ದೇಶ್ವರ್, ಶಿವಮೊಗ್ಗದ ಸಂಸದ ಬಿ ವೈ ರಾಘವೇಂದ್ರ, ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ, ತುಮಕೂರು ಸಂಸದ ಜಿ ಎಸ್ ಬಸವರಾಜು, ಮೈಸೂರು ಸಂಸದ ಪ್ರತಾಪ ಸಿಂಹ, ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ ಸಿ ಮೊಹನ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಕೋಲಾರ ಸಂಸದ ಎಸ್ ಮುನಿಸ್ವಾಮಿ, ನವದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರೂ ಒಳಗೊಂಡಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್,ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ ಇ ವಿ ರಮಣ ರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ ಆದ ಕರ್ನಾಟಕ ಭವನದ ನಿವಾಸಿ ಆಯುಕ್ತ ಡಾ.ಸಂದೀಪ್ ದವೆ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.