ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದ್ದು, ಚಿಕಿತ್ಸೆಗಾಗಿ ಹಾಸಿಗೆ, ವೆಂಟಿಲೇಟರ್, ಐಸಿಯು ಬೆಡ್ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ- ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

0

gummata nagari : dharwad

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಹಿಂದಿನ ಅನುಭವಗಳ ಆಧಾರದ ಮೇಲೆ ಜಿಲ್ಲಾಡಳಿತವು ಪ್ರಸ್ತುತದಲ್ಲಿರುವ ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಯಾವುದೇ ತೊಂದರೆ, ಲೋಪಗಳಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅವರು ಮಧ್ಯಾಹ್ನ ಮುಖ್ಯಮಂತ್ರಿಗಳೊಂದಿಗೆ ಜರುಗಿದ ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದ್ದು, ಚಿಕಿತ್ಸೆಗಾಗಿ ಹಾಸಿಗೆ, ವೆಂಟಿಲೇಟರ್, ಐಸಿಯು ಬೆಡ್ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ- ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಪಂಚಾಯತ್‍ರಾಜ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಡೀ ರಾಜ್ಯದಾದ್ಯಂತ ಏಪ್ರೀಲ 27 ರಿಂದ 14 ದಿನಗಳವರೆಗೆ ಜನತಾಕಫ್ರ್ಯೂ, ನೈಟ್‍ಕಫ್ರ್ಯೂ ಜಾರಿಗೊಳಿಸಲಾಗಿದೆ. ಈ ಕ್ರಮವನ್ನು ಜನರ ಹಿತಕ್ಕಾಗಿ ಕೈಗೊಂಡಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಯಮ ರೂಪಿಸಿ ನಿರ್ಬಂಧಿಸಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಕೋವಿಡ್ ಚೈನ್‍ಲಿಂಕ್‍ನ್ನು ತುಂಡರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ 14 ದಿನಗಳ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸದೇ ಮನೆಯಲ್ಲಿದ್ದು, ಸಹಕಾರ ನೀಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಮತ್ತು ಆಗಾಗ ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪಿನಿಂದ ಕೈ ತೊಳೆಯಬೇಕೆಂದು ಸಾರ್ವಜನಿಕರಲ್ಲಿ ಸಚಿವರ ವಿನಂತಿಸಿದರು.

14 ದಿನಗಳ ಕಫ್ರ್ಯೂ ಯಶಸ್ವಿಗೊಳಿಸಿ: ರಾಜ್ಯದಲ್ಲಿ ಕೋವಿಡ್ ಚೈನ್ ಲಿಂಕ್‍ನ್ನು ತುಂಡರಿಸಿ ಕೋವಿಡ್ ನಿಯಂತ್ರಣಕ್ಕೆ ತರಲು ಕನಿಷ್ಠ ಮೂರು ವಾರಗಳ ಕಫ್ರ್ಯೂ ವಿಧಿಸುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳು ಆರಂಭದಲ್ಲಿ ಕಫ್ರ್ಯೂ 14 ದಿನಗಳಿಗೆ ಮಾತ್ರ ಸೀಮಿತಗೊಳಿಸಿ ಸಾರ್ವಜನಿಕರ ಸಹಕಾರದಲ್ಲಿ ಯಶಸ್ವಿಗೊಳಿಸಬೇಕು. ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರ ಸಹಕಾರ ಸಿಗದೇ ಕೋವಿಡ್ ನಿಯಂತ್ರಣ ಕಷ್ಟಸಾಧ್ಯವಾದಲ್ಲಿ ಕಫ್ರ್ಯೂ ಮತ್ತೇ ಮುಂದುವರೆಸಲು ಚಿಂತಿಸೋಣ ಎಂದು ತಿಳಿಸಿದ್ದಾರೆ. ಈ 14 ದಿನಗಳ ಕಾಲ ಕಫ್ರ್ಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅವಳಿ ನಗರದಲ್ಲಿ ಜನದಟ್ಟಣೆ ಉಂಟಾಗುವ ಮಾರುಕಟ್ಟೆ ಪ್ರದೇಶ ಹಾಗೂ ಎಪಿಎಂಸಿ ಗಳಲ್ಲಿ ಹೆಚ್ಚು ಜನ ಸೇರದಂತೆ ಮತ್ತು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ನಿಗಾ ವಹಿಸುವಂತೆ ವಿಶೇಷ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 3,489 ಸಕ್ರಿಯ ಕೋವಿಡ್ ಕೇಸ್ : ಧಾರವಾಡ ಜಿಲ್ಲೆಯಲ್ಲಿ ಈಗ 3,489 ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 2,486 ಜನ ಹೋಂ ಐಸೋಲೇಷನ್ ಆಗಿದ್ದಾರೆ. ಜಿಲ್ಲಾಸ್ಪತ್ರೆ, ಕಿಮ್ಸ್ ಆಸ್ಪತ್ರೆ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 1,212 ಜನ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇದರಲ್ಲಿ 228 ಜನ ನೆರೆ ಹೊರೆಯ ಜಿಲ್ಲೆಗಳಿಗೆ ಸಂಬಂಧಿಸಿದ ಕೋವಿಡ್ ಸೋಂಕಿತರಾಗಿದ್ದಾರೆ. ಮಾನವೀಯತೆ ಹಿನ್ನೆಲೆಯಲ್ಲಿ ಎಲ್ಲರಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 2,000 ಕ್ಕಿಂತ ಹೆಚ್ಚು ಬೆಡ್ ಲಭ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಲ್ಲಿ 2,000 ಕ್ಕಿಂತಲೂ ಹೆಚ್ಚು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇದರಲ್ಲಿ 1,074 ಬೆಡ್‍ಗಳು ಖಾಲಿ ಇವೆ. 397 ಆಕ್ಸಿಜನ್ ಬೆಡ್, 60 ಐಸಿಯು ಬೆಡ್ ಮತ್ತು 104 ವೆಂಟಿಲೇಟರ್‍ಗಳು ಚಿಕಿತ್ಸೆಗೆ ಲಭ್ಯ ಇವೆ.

ಕೋವಿಡ್ ಪಾಸಿಟಿವಿಟಿ ರೇಟ್ ಶೇ.11: ಜಿಲ್ಲೆಯಲ್ಲಿ ಸರಿಸುಮಾರು ಶೇ.11 ರಷ್ಟು ಕೋವಿಡ್ ಪಾಸಿಟಿವಿಟಿ ದರವಿದೆ. ಅತ್ಯಂತ ಪೀಕ್ ಅವಧಿಯಲ್ಲೂ ಶೇ.15 ನ್ನು ಮೀರಿಲ್ಲ. ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ತುಂಬಾ ಕಡಿಮೆ ಇದೆ. ಇದಕ್ಕೆ ಜಿಲ್ಲಾಡಳಿತದ ಸಕಾಲಿಕ ಕ್ರಮಗಳು ಮತ್ತು ವೈಜ್ಞಾನಿಕವಾಗಿ ನಿಭಾಯಿಸುವ ತಂತ್ರಗಾರಿಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳವಾದರೂ ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ನಿರಂತರವಾಗಿ ಉಸ್ತುವಾರಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

2,61,310 ಜನರಿಗೆ ಲಸಿಕೆ : ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣ ಯಶಸ್ವಿಯಾಗಿ ನಡೆದಿದೆ. ಇಲ್ಲಿವರೆಗೆ ಕೋವಿಶೀಲ್ಡ್ ಲಸಿಕೆಯನ್ನು 2,43, 610 ಜನರಿಗೆ ಹಾಗೂ ಕೋವ್ಯಾಕ್ಸಿನ ಲಸಿಕೆಯನ್ನು 17,700 ಜನರಿಗೆ ಸೇರಿದಂತೆ ಒಟ್ಟು 2,61,310 ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿರುವುದರಿಂದ ಲಸಿಕಾಕರಣಕ್ಕೆ ಜಿಲ್ಲೆಯಲ್ಲಿ ಹೆಚ್ಚು ಲಸಿಕಾ ಕೇಂದ್ರಗಳ ಸ್ಥಾಪನೆ ಮಾಡಿ ಜನರಲ್ಲಿ ಯಾವುದೇ ಗೊಂದಲ, ಜನದಟ್ಟಣೆಯಾಗದಂತೆ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸೀವರ್ ಕೊರತೆ ಇಲ್ಲ : ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಆಕ್ಸಿಜನ್ ಲಭ್ಯತೆ ಇದ್ದು, ಯಾವುದೇ ಕೊರತೆ ಉಂಟಾಗಿಲ್ಲ. ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ 40 ಕೆಎಲ್ ಸಾಮಥ್ರ್ಯದ 2 ಆಕ್ಸಿಜನ್ ಯೂನಿಟ್ ಮತ್ತು ಜಿಲ್ಲಾಸ್ಪತ್ರೆಯ ಆವರಣದಲ್ಲಿ 6 ಕೆಎಲ್ ಸಾಮಥ್ರ್ಯದ 1 ಆಕ್ಸಿಜನ್ ಯೂನಿಟ್ ಸ್ಥಾಪಿಸಲಾಗಿದ್ದು, ಪ್ರತಿದಿನದ ಚಿಕಿತ್ಸೆಗೆ ಯಾವುದೇ ಕೊರತೆಯಾಗದೇ ಆಕ್ಸಿಜನ್ ದಾಸ್ತಾನು ಉಳಿಯುತ್ತದೆ. ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್, ದಿ ಸದರ್ನ್ ಗ್ಯಾಸ್ ಲಿಮಿಟೆಡ್, ಪ್ರಾಕ್ಸಿಯರ್ ಕಂಪನಿಗಳು ಆಕ್ಸಿಜನ್ ಪೂರೈಕೆ ಮಾಡುತ್ತವೆ. ಜಿಲ್ಲಾಡಳಿತವು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಮತ್ತು ಅಗತ್ಯವಿರುವಷ್ಟು ಆಕ್ಸಿಜನ್ ನಿರಂತರವಾಗಿ ತಲುಪುವಂತೆ ನಿಗಾವಹಿಸಲು ಹಾಗೂ ಆಕ್ಸಿಜನ್ ಆಸ್ಪತ್ರೆಗಳಿಗಲ್ಲದೇ ಅನ್ಯ ಬಳಕೆಗೆ ಪೂರೈಕೆಯಾಗದಂತೆ ನಿರಂತರವಾಗಿ ಮೇಲುಸ್ತುವಾರಿ ಮಾಡಲು ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ತಂಡಗಳನ್ನು ರಚಿಸಿರುವುದು ಸಹಾಯಕಾರಿಯಾಗಿದ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ರೆಮಿಡಿಸೀವರ್ ಔಷಧ ಕೊರತೆ ಇಲ್ಲ. ನಿನ್ನೆಯ ದಿನ ಜಿಲ್ಲೆಗೆ 740 ರೆಮಿಡಿಸೀವರ್ ಔಷಧ ಬಂದಿದೆ. ಪ್ರತಿ 2 ದಿನಕ್ಕೊಮ್ಮೆ ಔಷಧ ಪೂರೈಕೆಯಾಗುತ್ತಿದ್ದು, ಬಂದಂತೆ ಬಳಸಲಾಗುತ್ತಿದೆ. ಯಾವುದೇ ಕೊರತೆ ಉಂಟಾಗಿಲ್ಲವೆಂದು ಸಚಿವರು ತಿಳಿಸಿದರು.

ಹೊರಗಿನಿಂದ ಜಿಲ್ಲೆಗೆ ಬಂದವರಿಗೆ ಟೆಸ್ಟಿಂಗ್ : 14 ದಿನಗಳ ಕಫ್ರ್ಯೂ ಘೋಷಣೆಯ ನಂತರ ಸಾಕಷ್ಟು ಜನ ಜಿಲ್ಲೆಗೆ ಹೊರಜಿಲ್ಲೆಗಳಿಂದ ಆಗಮಿಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗಕ್ಕೆ ವಲಸೆ ಬಂದಿದ್ದಾರೆ. ಹೀಗೆ ಹೊರಗಿನಿಂದ ಬಂದವರಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳು ಕ್ರಮವಹಿಸಿ ಸಿಬ್ಬಂದಿಗಳನ್ನು ನೇಮಿಸಿ ಕೋವಿಡ್ ಟೆಸ್ಟಿಂಗ್ ಆರಂಭಿಸಿದ್ದಾರೆ. ಈಗಾಗಲೇ ಶೇ.50 ರಷ್ಟು ಜನರಿಗೆ ಟೆಸ್ಟಿಂಗ್ ಪೂರ್ಣಗೊಂಡಿದ್ದು, ಮುಂದಿನ 2-3 ದಿನಗಳಲ್ಲಿ ಹೊರಗಿನಿಂದ ಬಂದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಉಚಿತ ಕೋವಿಡ್ ಚಿಕಿತ್ಸೆಗಾಗಿ ರೆಫರಲ್ ಪಡೆಯಿರಿ : ಕೋವಿಡ್ ಸೋಂಕಿತ ಅನೇಕರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ. ಬಡ, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆರ್ಥಿಕ ತೊಂದರೆ ಅನುಭವಿಸುತ್ತಾರೆ. ಸರ್ಕಾರವು ಕೋವಿಡ್ ಸೋಂಕಿತ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟು ಬೆಡ್‍ಗಳನ್ನು ಸುಪರ್ದಿಗೆ ಪಡೆದು ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದೆ.

ಖಾಸಗಿ ಆಸ್ಪತ್ರೆಗೆ ದಾಖಲಾಗುವ ಬಡ ಹಾಗೂ ಮಧ್ಯಮ ವರ್ಗದ ಸಾರ್ವಜನಿಕರು ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಶಿ ಪಾಟೀಲ, ಮೊ.ಸಂ.-9880973247 ಗೆ ಕರೆ ಮಾಡಿ ರೆಫರೆಲ್ ಪಡೆದುಕೊಳ್ಳಬೇಕು. ಮತ್ತು ಕೋವಿಡ್ ಪಾಸಿಟಿವ್ ವರದಿಯ ಎಸ್‍ಆರ್‍ಎಫ್ ಐಡಿ ಸಂಖ್ಯೆಯನ್ನು ಮತ್ತು ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ತಿಳಿಸಬೇಕು. ನೋಡಲ್ ಅಧಿಕಾರಿಗಳು ಸೋಂಕಿತರು ದಾಖಲಾಗುವ ಆಸ್ಪತ್ರೆಗೆ ರೆಫರೆಲ್ ಪತ್ರ ನೀಡುತ್ತಾರೆ. ಇದರಿಂದ ಸೋಂಕಿತರ ಯಾವುದೇ ರೀತಿಯ ಖರ್ಚಿಲ್ಲದೇ ಉಚಿತವಾಗಿ ಸರ್ಕಾರದಿಂದ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು.

ನಿರಂತರ ಸಹಾಯವಾಣಿ ಆರಂಭ : ಕೋವಿಡ್ ಸೋಂಕಿತರ ನೆರವಿಗೆ ಸ್ಪಂಧಿಸಲು ಜಿಲ್ಲಾಡಳಿತವು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ದಿನದ 24 ಗಂಟೆ ಸೋಂಕಿತರಿಗೆ ಬೆಡ್ ಲಭ್ಯತೆಯ ಕುರಿತು ಮಾಹಿತಿ ನೀಡುವುದಕ್ಕಾಗಿ ಸಹಾಯವಾಣಿಯನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸಹಾಯವಾಣಿ ಕಾರ್ಯಾ ಆರಂಭವಾಗಲಿದೆ. ಈಗಾಗಲೇ ಜಿಲ್ಲಾಡಳಿತ ಕೋವಿಡ್ ಸಂಬಂಧಿತ ಮಾಹಿತಿ, ನೆರವು ನೀಡಲು ಸಹಾಯವಾಣಿಯನ್ನು ಆರಂಭಿಸಿದ್ದು ಉಚಿತ ದೂರವಾಣಿ ಸಂಖ್ಯೆ-1077 ಗೆ ಕರೆ ಮಾಡಿ ನೆರವು ಪಡೆಯಬಹುದೆಂದು ಸಚಿವರು ಹೇಳಿದರು.

ಖಾಸಗಿ ಆಸ್ಪತ್ರೆಗಳ ಸಹಕಾರ ಮುಖ್ಯ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಗಳ ಸಹಕಾರವು ಮುಖ್ಯ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಜರುಗಿಸಿ, ಕೋವಿಡ್ ನಿಯಂತ್ರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಹಕಾರ ಕೋರಿ ಮನವರಿಕೆ ಮಾಡಲಾಗಿದೆ. ಮತ್ತು ಸರ್ಕಾರದ ಆದೇಶದಂತೆ ಪ್ರತಿ ಆಸ್ಪತ್ರೆಯು ಅನುಮತಿ ಪಡೆದ ಬೆಡ್‍ಗಳ ಪೈಕಿ ಶೇ.50 ರಷ್ಟನ್ನು ಆರೋಗ್ಯ ಇಲಾಖೆಯಿಂದ ಶಿಫಾರಸ್ಸು ಮಾಡುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆ ಸೂಚಿಸಲಾಗಿದೆ.

ಆದರೆ ಖಾಸಗಿ ಆಸ್ಪತ್ರೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲವೆಂದು ತಿಳಿಸಿದ ಸಚಿವರು ಶೀಘ್ರದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಜರುಗಿಸಿ ಸರ್ಕಾರದ ನಿರ್ದೇಶನಗಳನ್ನು ತಿಳಿಸಿ ಮತ್ತೊಮ್ಮೆ ಅವರ ಸಹಕಾರ ಕೋರಲಾಗುವುದು. ಆದಾಗ್ಯೂ ಅವರಿಂದ ನಿರೀಕ್ಷಿತ ಮಟ್ಟದ ಸಹಕಾರ ಸಿಗದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಿಮ್ಸ್ ಆವರಣದಲ್ಲಿ ಮೇಕ್‍ಶಿಫ್ಟ್ ಹಾಸ್ಪಿಟಲ್ ವಾರ್ಡ್ ಆರಂಭ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುಂತೆ ಸುಮಾರು 66 ಬೆಡ್‍ಗಳಿರುವ ಮೇಕ್‍ಶಿಫ್ಟ್ ಹಾಸ್ಪಿಟಲ್ ವಾರ್ಡ್‍ನ್ನು ಮುಂದಿನ 10 ದಿನಗಳಲ್ಲಿ ತಯಾರಿಸಲಾಗುವುದು. ಈ ಕುರಿತು ಆಸ್ಪತ್ರೆಯ ಬೆಡ್, ವಾರ್ಡ್‍ಗಳನ್ನು ರೂಪಿಸಲು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಜಿಲ್ಲಾಡಳಿತ ಈಗಾಗಲೇ ಆದೇಶ ನೀಡಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಜಿಲ್ಲಾಡಳಿತದ ಮುಂದಾಲೋಚನೆಯಿಂದ ಇಂತಹದೊಂದು ಮಾದರಿ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್, ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.