ಜಿಲ್ಲಾಸ್ಪತ್ರೆಯಿಂದ ಉತ್ತಮ ಕೋವಿಡ್ ಚಿಕಿತ್ಸೆ

6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ಘಟಕ ಕಾರ್ಯಾರಂಭ ; ಡಿಸಿ ಪಾಟೀಲ ಪ್ರಶಂಸೆ

0

Gummata Nagari : Dharwad News

ಧಾರವಾಡ : ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್ ಪೂರೈಕೆಯ ಘಟಕಕ್ಕೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಇದುವರೆಗೆ ಪ್ರತಿದಿನ 80 ರಿಂದ 100 ಜಂಬೋ ಆಕ್ಸಿಜನ್ ಸಿಲಿಂಡರುಗಳನ್ನು ವೈದ್ಯಕೀಯ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಇವುಗಳನ್ನು ಪ್ರತಿದಿನ ಪೂರೈಕೆದಾರರ ಬಳಿ ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬರಬೇಕಾಗಿತ್ತು. ಈಗ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ಘಟಕ ಸ್ಥಾಪನೆಯಿಂದ ಸಮಯ, ಸಾರಿಗೆ ವೆಚ್ಚ ಉಳಿಯಲಿದೆ. ಸುರಕ್ಷತೆ ಮತ್ತು ಲಭ್ಯತೆ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲವಾಗಲಿದೆ. ಧಾರವಾಡ ಜನತೆಗೆ, ಜಿಲ್ಲಾ ಆಸ್ಪತ್ರೆಗೆ ಇದೊಂದು ಶಾಶ್ವತ ಆಸ್ತಿಯಾಗಲಿದೆ. ಈ ಘಟಕ ಸ್ಥಾಪನೆ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ದೊರೆತು ಸಾಕಷ್ಟು ಸಹಕಾರ ಸಿಕ್ಕಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಕಿಮ್ಸ್ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ. ಇದೇ ತೆರನಾಗಿ ಧಾರವಾಡ ಜಿಲ್ಲಾಸ್ಪತ್ರೆಯೂ ಕೋವಿಡ್ ಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಇದುವರೆಗೆ ಇಲ್ಲಿಂದ ಸುಮಾರು 540 ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸಿಬ್ಬಂದಿ, ಮಾನವ ಸಂಪನ್ಮೂಲ, ತಜ್ಞ ವೈದ್ಯರ ಕೊರತೆಯ ನಡುವೆಯೂ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯಾಧಿಕಾರಿಗಳು ಅಹರ್ನಿಶಿ ದುಡಿಯುತ್ತಿರುವುದು ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತುಂಬು ಹೃದಯದಿಂದ ಶ್ಲಾಘಿಸಿದರು.

ಕೊರೊನಾ ಸೋಂಕಿತರ ಚಿಕಿತ್ಸೆಯೊಂದಿಗೆ ಓಪಿಡಿ, ಹೆರಿಗೆ ವಿಭಾಗಗಳು ಜಿಲ್ಲಾ ಆಸ್ಪತ್ರೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ನೂರು ಹಾಸಿಗೆ ಸೌಲಭ್ಯ ವಿಭಾಗ ಸೇರಿದಂತೆ ಜಿಲ್ಲಾ ಆಸ್ಪತ್ರೆಗೆ ಅಗತ್ತಯಿರುವ ಮೂಲಸೌಕರ್ಯಗಳನ್ನು ಕಲ್ಪಿಸಿ, ಜಿಲ್ಲಾ ಆಸ್ಪತ್ರೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್ ಮಾನಕರ್, ಡಾ.ಸಿ.ಡಿ.ಕಳಸಗೌಡರ, ಡಾ.ಎಸ್.ವಿ.ಸಾನು, ಡಾ.ಶಿವಕುಮಾರ್ ಕುಂಬಾರ, ಉಪ ಔಷಧ ನಿಯಂತ್ರಕ ಕೆ.ಎಸ್.ಮಲ್ಲಿಕಾರ್ಜುನ, ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಗನ್ನಾಥ ಜಾಧವ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ, ಉಪಕರಣ ಇಂಜಿನಿಯರ್ ಲಾಳಗೆ ಮತ್ತಿತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.