ಕಳಚಿತು ಸಾಹಿತ್ಯ ಲೋಕದ ಮತ್ತೊಂದು ಕೊಂಡಿ

0

Gummata Nagari : Dharwad News

ಧಾರವಾಡ : ಸಾಹಿತ್ಯದ ಲೋಕದ ಇನ್ನೊಂದು ಕೊಂಡಿ ಕಳಚಿ ಬಿದ್ದಿದೆ. ಹಿರಿಯ ಸಾಹಿತಿ ಡಾ.ಜಿ.ಎಸ್.ಆಮೂರ (96) ಅವರು ಇಂದು ಬೆಳಗಿನಜಾವ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಜಿ.ಎಸ್.ಆಮೂರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿದ್ದವು.

ಆಧುನಿಕ ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಅತೀ ಅಗ್ರಮಾನ್ಯರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ. ಅಮೂರ ಅವರು, ಕರ್ನಾಟಕ ರಾಜ್ಯ ಸರ್ಕಾರ ಪ್ರದಾನ ಮಾಡುವ, ಪಂಪ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯ ಪ್ರಕಾರಗಳಲ್ಲಿ ಪ್ರಕಾಂಡ ಪಂಡಿತರೆಂದು ಇವರು ಗುರುತಿಸಲ್ಪಟ್ಟಿದ್ದರು.

ಆಮೂರರು 1925 ಮೇ.8 ರಂದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದ್ದರು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲೀಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.

ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ 14 ಕೃತಿಗಳ ಜೊತೆಗೆ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲೀಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಆಮೂರ ಸಂಪಾದಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.