ಹಲವು ಪ್ರಕರಣ: ಆರೋಪಿಗಳ ಬಂಧನ

0

Gummata Nagari : Bijapur News

ಬಿಜಾಪುರ : ಗಾಂಜಾ, ಕ್ರಿಕೆಟ್ ಬೆಟ್ಟಿಂಗ್, ಮಾವಾ, ಅಕ್ರಮ ಮದ್ಯ ಮೊದಲಾದ ಅಪರಾಧಿಕ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಬಿಜಾಪುರ ಜಿಲ್ಲೆಯ ಪೊಲೀಸರು ಹಲವಾರು ಪ್ರಕರಣಗಳನ್ನು ದಾಖಲಿಸಿ ಅನೇಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್, ಬಿಜಾಪುರ ಜಿಲ್ಲೆಯಲ್ಲಿ ಅಪರಾಧಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಹಲವಾರು ರೀತಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವ ಹಾಗೂ ಮಾರಾಟ ಮಾಡುವವರ ಮೇಲೆ ಈಗಾಗಲೇ 18 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಬಂಧಿತ ಆರೋಪಿಗಳಿಂದ 287.088 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್‌ಗೂ ಕಡಿವಾಣ ಹಾಕಲು ಇಲಾಖೆ ವ್ಯಾಪಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ 16 ಪ್ರಕರಣಗಳನ್ನು ದಾಖಲಿಸಲಾಗಿದ್ದು, 32 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು 39 ಮೊಬೈಲ್, 1 ಲ್ಯಾಪಟಾಪ್, 1 ಡಸ್ಟರ್ ಕಾರು ಸೇರಿದಂತೆ 6,52,770 ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಅನಧಿಕೃತವಾಗಿ ಅಡುಗೆ ಅನೀಲವನ್ನು ರಿ-ಫೀಲಿಂಗ್ ಮಾಡುವವರ ಮೇಲೆಯೂ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,38,060 ರೂ. ಮೌಲ್ಯದ ಸಿಲಿಂಡರ್‌ಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮಾವಾ ಮಾರಾಟ ಮಾಡುವವರ ಮೇಲೆಯೂ ಹದ್ದಿನ ಕಣ್ಣು ಇರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 186,905 ಲಕ್ಷ ರೂ. ಮೌಲ್ಯದ ಮಾವಾ ಜಪ್ತು ಮಾಡಿಕೊಳ್ಳಲಾಗಿದೆ.

ಸಮಾಜದಲ್ಲಿ ಶಾಂತಿ ಕದಡುವವರ ಮೇಲೆ ಈಗಾಗಲೇ ಹದ್ದಿನ ಕಣ್ಣು ಇರಿಸಲಾಗಿದೆ, ಓರ್ವ ವ್ಯಕ್ತಿ ಪದೇ ಪದೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗುವುದು ಕಂಡು ಬಂದರೆ ಅವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸುವ ನಿಟ್ಟಿನಲ್ಲಿ ಇಲಾಖೆ ದಿಟ್ಟ ಹೆಜ್ಜೆ ಇರಿಸಿದೆ, ಈಗಾಗಲೇ ಆರು ಜನರ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಮಾಹಿತಿ ನೀಡಿದರು.

ಮನೆಗಳ್ಳರ ಬಂಧನ

ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಸೋಹೇಲ್ ಮುರ್ತುಜಸಾಬ ಇನಾಮದಾರ (21), ಆಕಾಶ ರಮೇಶ ಕೋಲಕಾರ (19) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2.15 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣವನ್ನು ಜಪ್ತು ಮಾಡಿಕೊಳ್ಳಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.