ಸರದಾರ್ ವಲ್ಲಭಬಾಯಿ ಪಟೇಲರ ಆದರ್ಶ

0

ಸರದಾರರು ಅಧಿಕಾರದ ಸಮರವಿಲ್ಲದ ಸ್ವಾತಂತ್ರ್ಯ ಸಮರದ ಯೋಧರ ಹೋಂ ಮಿನಿಸ್ಟರ್ ಜವಾಬ್ದಾರಿ ಹೊತ್ತರು ದೇಶದ ಏಳಿಗೆಗೆ ಹಗಲಿರುಳು ದುಡಿದರು , ಹೀಗೆ ಬದುಕಿನುದ್ದಕ್ಕೂ ಹಲವಾರು ಜನಪರ ಕೆಲಸಗಳನ್ನು ಮಾಡುವ ಮೂಲಕ ಅಮರರಾಗಿದ್ದಾರೆ. ಅಲ್ಲದೆ ಇವರ ಸಾಧನೆಗಳು ಮುಗಿಲು ಮುಟ್ಟುವಷ್ಟು ವ್ಯಾಪಕವಾಗಿವೆ . ಧೀರ, ನಿರಂತರ, ನೆಟ್ಟ ಗಂಭೀರ ಮನುಷ್ಯ ಇವರು. ಇವರ ಆದರ್ಶ ನೀತಿಗಳ ಸರಳತೆ ಇವರನ್ನು ಇತಿಹಾಸ ಪುಟ್ಟದಲ್ಲಿ ಅಮರವಾಗಿಸಿದೆ ಎಂದೇ ಹೇಳಬಹುದು.

Gummata Nagari : Article

ಕೆಲವು ಮಹಾ ನಾಯಕರು ಇತಿಹಾಸದಲ್ಲಿ ಮರುಹುಟ್ಟು ಪಡೆಯುತ್ತಾರೆ ಅವರ ತಾತ್ವಿಕತೆ, ನಿಲುವುಗಳು ಮತ್ತೆ ಪ್ರಸ್ತುತತೆ ಎನಿಸುತ್ತವೆ. ಅಂತಹ ಸಾಲಿನಲ್ಲಿ ನಿಲ್ಲುವವರು ನಮ್ಮ ಸರ್ದಾರ್ ವಲ್ಲಬಾಯ್ ಪಟೇಲರು.

ಹೀಗೆ ಮರುಚಿಂತನೆಗೆ ಆಸ್ಪದ ನೀಡುತ್ತಿರುವ ಭರತ ಭೂಮಿ ಮಹಾ ನಾಯಕರಾದ ಸರ್ದಾರ್ ವಲ್ಲಬಾಯ್ ಪಟೇಲರು. ಅವರು ಇಲ್ಲದಿದ್ದರೆ ಇಂದಿನ ಕಲ್ಯಾಣ ಕರ್ನಾಟಕ ಭಾಗ ಸ್ವತಂತ್ರವಾಗಲು ಸಾಧ್ಯವಾಗುತ್ತಿರಲಿಲ್ಲ. ಏಕೀಕರಣ ಮತ್ತು ಇಂದಿನ ಗೌರವಕ್ಕೆ ನಿಜವಾದ ವ್ಯಾಖ್ಯಾನ ನೀಡಿದವರು ಸರ್ದಾರ್ ವಲ್ಲಬಾಯ್ ಪಟೇಲರು ಎಂಬುದು ನಾವ್ಯಾರೂ ಮರೆಯಬಾರದು.

ಅವರು ಸಾಮರಸ್ಯದ ಮೂಲಕ ದೇಶವನ್ನು ಒಗ್ಗೂಡಿಸಲು ಶ್ರಮಿಸಿದ ಧೀಮಂತ ನಾಯಕ ಪಟೇಲ್ ರವರು ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ. ಹಾಗಾಗಿ “ಭರತ ಭೂಮಿ ನಮ್ಮ ತಾಯಿ, ನಮ್ಮ ಪೊರೆವ ತೊಟ್ಟಿಲು, ಜೀವನವನೆ ದೇವಿಗೆರೆವೆ ನಗುತ ಗುಡಿಯ ಕಟ್ಟಲು”ಎಂಬ ಉತ್ಕಟ ರಾಷ್ಟ್ರಾಭಿಮಾನದಿಂದ, ತಾಯಿ ಭಾರತಿಯ ದಾಸ್ಯಶೃಂಖಲೆಗಳನ್ನು ಕಿತ್ತೆಸೆದ, ಸಾಧಕರ ಸಾಲಿನಲ್ಲಿನ ಅನನ್ಯ ಸಾಧಕ ಸರದಾರ್ ವಲ್ಲಭಬಾಯಿ ಪಟೇಲ್ ರವರು . ಸ್ವಾತಂತ್ರ‍್ಯ ಸಮರದ ವೀರ ಸೇನಾನಿಯಾಗಿ,ಅವರೊಬ್ಬ ವಕೀಲರಾಗಿ,ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣಕ್ಕಾಗಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.

1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದ ಹಿರಿಮೆ ಇವರದು. ಇವರು ಕೈಗೊಂಡ ಹಲವಾರು ಕಠು ನಿರ್ಧಾರಗಳಿಂದ ಇವರಿಗೆ ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಜನಸಾಮಾನ್ಯರಿಂದ ದೊರೆತಿತ್ತು.

ಭಾರತದ ಮೊದಲ ಉಪಪ್ರಧಾನಿಯಾಗಿ, ಗೃಹಮಂತ್ರಿಗಳಾಗಿ ಪಟೇಲರು ಸವೆಸಿದ ಬದುಕೊಂದು ಅಮರ ಸಂದೇಶವಾಗಿದೆ ಬಂಧುಗಳೇ. ಭಾರತದ ಉಕ್ಕಿನ ಮನುಷ್ಯನೆಂದೇ ಪ್ರಸಿದ್ದವಾಗಿರುವ ಸರ್ಧಾರ ವಲ್ಲಭಾಯಿ ಪಟೇಲ್ ರವರು ಸಮುದ್ರದ ಹನಿಯಲ್ಲ ಸಮುದ್ರದ ಅಲೆಯೆಂದು ಹೇಳಬಹುದು .

ಇಡೀ ದೇಶವೇ ಹರಿದು ಹಂಚಿ ಹೋಗಿತ್ತು, ಅಂತಹ ಒಂದು ದೇಶ ಒಗ್ಗೂಡಿಸಿದ ಮಹಾನ ನಾಯಕ ನಮ್ಮ ಸರಧಾರ್ ಪಟೇಲರು.ಹೀಗಾಗಿ ಅಂಕಿತ ಭಾವ ಮತ್ತು ಕ್ರಮ ಶಿಕ್ಷಣದ ಪುಸ್ತಕಕ್ಕೆ ಇನ್ನೊಂದು ಹೆಸರು ಸರದಾರ ವಲ್ಲಭಾಯಿ ಪಟೇಲ್. ಸರ್ದಾರ್ ಗೆ ಹುಟ್ಟಿನಿಂದಲೇ ನಾಯಕತ್ವದ ಗುಣವುಳ್ಳ ಚಾಣಾಕ್ಷ ಏಕತೆಯ ಹರಿಕಾರರಾಗಿ , ಬಿಳಿಯರ ವಿರುದ್ಧದ ಹೋರಾಟವನ್ನು ಮಾಡುವ ಮೂಲಕ ಜನ ಮೆಚ್ಚಿನ ನೇತಾರರಾಗಿ ಮಿನಿಗಿದ್ದಾರೆ.

ಭಾಪುಜಿ ಆಜ್ಞೆಗೆ ತಲೆ ಕೊಟ್ಟಿರುವವರು.ಬರಗಾಲದ ಸಮಯದಲ್ಲಿ ದೇಶದ ರಾಜ್ಯಗಳ ಬಡ ಜನರ ಬಳಿಗೆ ಹೋಗಿ ಆತ್ಮಸೈರ್ಯ ತುಂಬಿದವರು. ಲಾಟಿಚಾರ್ಜ್, ದಂಡೆಯಾತ್ರೆ ಮಾರ್ಗದರ್ಶಕರು. ಸರದಾರರು ಅಧಿಕಾರದ ಸಮರವಿಲ್ಲದ ಸ್ವಾತಂತ್ರ್ಯ ಸಮರದ ಯೋಧರ ಹೋಂ ಮಿನಿಸ್ಟರ್ ಜವಾಬ್ದಾರಿ ಹೊತ್ತರು ದೇಶದ ಏಳಿಗೆಗೆ ಹಗಲಿರುಳು ದುಡಿದರು , ಹೀಗೆ ಬದುಕಿನುದ್ದಕ್ಕೂ ಹಲವಾರು ಜನಪರ ಕೆಲಸಗಳನ್ನು ಮಾಡುವ ಮೂಲಕ ಅಮರರಾಗಿದ್ದಾರೆ.

ಅಲ್ಲದೆ ಇವರ ಸಾಧನೆಗಳು ಮುಗಿಲು ಮುಟ್ಟುವಷ್ಟು ವ್ಯಾಪಕವಾಗಿವೆ . ಧೀರ, ನಿರಂತರ, ನೆಟ್ಟ ಗಂಭೀರ ಮನುಷ್ಯ ಇವರು. ಇವರ ಆದರ್ಶ ನೀತಿಗಳ ಸರಳತೆ ಇವರನ್ನು ಇತಿಹಾಸ ಪುಟ್ಟದಲ್ಲಿ ಅಮರವಾಗಿಸಿದೆ ಎಂದೇ ಹೇಳಬಹುದು.

ಜನನ, ಜೀವನ: ಅಕ್ಟೋಬರ್ 31, 1875ರಲ್ಲಿ ಗುಜರಾತಿನ ನಂದಿಯಾಡದಲ್ಲಿನ ಕೃಷಿಕ ಕುಟುಂಬದ ಜವೇರಭಾಯಿ ಮತ್ತು ಲಾಡಾಬಾಯಿಯವರ ಮಗನಾಗಿ ಪಟೇಲರು ಜನಿಸಿದರು. ಬಾಲ್ಯದಲ್ಲಿಯೇ ಚಾಣಕ್ಯನ ಛಲ ಮತ್ತು ಭೀಮನ ಬಲದ ಬುದ್ಧಿವಂತ ಯುವಕನಾಗಿ ಎಲ್ಲರಿಗೂ ಮಾದರಿಯ ಪಡುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಶಾಲೆಗೆ ಹೋಗುವ ದಾರಿಯಲ್ಲಿ ಅಡ್ಡವಾಗಿದ್ದ ಬೃಹತ್ ಶಿಲೆಯನ್ನು ಬದಿಗೆ ಸರಿಸಿದ ಪರೋಪಕಾರಿ ಈ ಪಟೇಲರು.

ಬ್ಯಾರಿಸ್ಟರ್ ಪದವಿ ಪಡೆದು ವಕೀಲ ವೃತ್ತಿಯಲ್ಲಿ ತೊಡಗಿದ್ದ ಪಟೇಲರದ್ದು ಅದಮ್ಯ ಕರ್ತವ್ಯ ನಿಷ್ಠೆ. ಗುಜರಾತ್‌ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲರು ಯಶಸ್ವಿ ವಕೀಲರಾಗಿದ್ದರು. ಅವರು ತರುವಾಯ ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು.

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.

ಮಡದಿಯ ಅನಾರೋಗ್ಯದ ನಡುವೆಯೂ ಕೆಲಸಕ್ಕೆ ಹಾಜರಾಗಿ, ಪತ್ನಿ ವಿಧಿವಶಳಾದ ತಂತಿಸಂದೇಶವನ್ನು ಓದಿಯೂ ವಾದ ಮುಂದುವರಿಸಿದ ಸ್ಥಿತಪ್ರಜ್ಞ. ಅಹಿಂಸಾ ಮಾರ್ಗವನ್ನು ಅಪಹಾಸ್ಯ ಮಾಡುತ್ತಿದ್ದ ಪಟೇಲರ ವರ್ತನೆಯ ನರ್ತನಕೆ ಪರಿವರ್ತನೆಯ ಶೃಂಗಾರ ನೀಡಿದ್ದು , ಗಾಂಧೀಜಿಯವರ ಶಾಂತಿ-ಪ್ರೀತಿಯ ಸಂದೇಶ ತುಂಬಿದ ಅಹಿಂಸಾ ಮಾರ್ಗ. ಗಾಂಧೀಜಿಯವರ ನಿಷ್ಠಾವಂತ ಅನುಯಾಯಿಯಾಗಿ, ಅವರ ಸೇನಾನಿಯಾಗಿ, ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಿದ ಅದ್ಭುತ ಸಂಘಟಕ ಸರದಾರ್ ಪಟೇಲರು ಎಂಬುದು ಸುಳ್ಳಲ್ಲ. ಮೊದಲ ಗೃಹ ಮಂತ್ರಿಯಾಗಿದ ಪಟೇಲರು ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಮಾಡಿದ ಕೆಲಸ ಅದ್ಭುತ.

ತದನಂತರ ಭಾರತಕ್ಕೆ “ಹಂಚಿಕೆಯಾದ” ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಿಸಿದರು.

ಸೇನಾಪಡೆಗಳ ಸಹಾಯವನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು. ಮಾನಸಿಕ ದಾಸ್ಯ ಹಾಗೂ ಬೌದ್ಧಿಕ ದಿವಾಳಿತನದ ಸಂಕೇತವಾದ ಪಾಶ್ಚಿಮಾತ್ಯ ಉಡುಗೆಗೆ ವಿದಾಯ ಹೇಳಿದ ಪಟೇಲರು, ಬದುಕಿನುದ್ದಕ್ಕೂ ಧರಿಸಿದ್ದು ಖಾದಿಯ ಧೋತಿ ಹಾಗೂ ಕುರ್ತಾ. ಅಹಮದಾಬಾದ್ ಪುರಸಭೆಗೆ ಆಯ್ಕೆಯಾಗುವುದರೊಂದಿಗೆ ಪ್ರಾರಂಭವಾದ ಪಟೇಲರ ರಾಜಕೀಯ ಬದುಕು, ಅವರ ಕ್ರಿಯಾಶೀಲ ನಾಯಕತ್ವದ ಕೈಗನ್ನಡಿ.

ಅಭಿಜಾತ ನಾಯಕರಾದ ಪಟೇಲರು, ಕಾರ್ಪೋರೇಷನ್ನಿನ ಅಧ್ಯಕ್ಷರಾಗಿ, ಅಹಮದಾಬಾದಿನ ಬೀದಿಗಳ ಸ್ವಚ್ಛತೆಯನ್ನು ಆರಂಭಿಸಿದ್ದು ಹರಿಜನ ಕೇರಿಯಿಂದ. ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಆಂದೋಲನದ ಪ್ರೇರಕ ಶಕ್ತಿ ಬಹುಶಃ ಪಟೇಲರು ಎನ್ನಬಹುದಾಗಿದೆ. ಆಡಿದ ಮಾತಿಗೆ ಎಂದು ತಪ್ಪಿದವರಲ್ಲ ಪಟೇಲರು. ಅಹಮದಾಬಾದನ್ನು ನಡುಗಿಸಿದ ಪ್ಲೇಗ್ ಮಾರಿ ಮತ್ತು ಗುಜರಾತಿನ ಮಹಾ ಪ್ರವಾಹಗಳ ಸಮಯದಲ್ಲಿ ನೊಂದವರ ಪಾಲಿನ ಮಾಹಾ ಸಂತರಾಗಿ ಜನರ ಕಷ್ಟಕ್ಕೆ ಸ್ವಂದನೇ ಮಾಡಿದರು ಪಟೇಲರು. ಅವರು ನಡೆಸಿದ ಸಮರ ಸ್ವರೂಪಿ ಕಾರ್ಯಾಚರಣೆ ಜನಪರ ಕಾಳಜಿಯ ಜೀವಂತ ನಿದರ್ಶನ ಮತ್ತು ನಾಡಿನ ಜನತೆಗೆ ಮಾದರಿ.

ಪಟೇಲರ ಪ್ರತಿಭಟನೆ, ಹೋರಾಟ:

ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳು ಸಂಪಾದಿಸಿ ಖೇಡಾ ಹೋರಾಟದೊಂದಿಗೆ ಪಟೇಲರು ಸ್ವಾತಂತ್ರ‍್ಯ ಹೋರಾಟಕ್ಕೆ ಕಾಲಿಟ್ಟರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿ ಈ ಹೋರಾಟಕ್ಕೆ ಒಪ್ಪಿದ್ದರೂ ಸ್ವತಃ ಚಂಪಾರಣ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಕಾರಣ, ಈ ಹೋರಾಟದ ಮುಖಂಡತ್ವವನ್ನು ವಹಿಸಲು ಅಸಾಧ್ಯವಾಗಿತ್ತು.ಖೇಡಾ ವಿಷಯಕ್ಕಾಗಿ ಪೂರ್ಣಾವಧಿ ಸಮಯವನ್ನು ಮೀಸಲಿಡುವ ಸ್ವಯಂಸೇವಕನಿಗಾಗಿ ಗಾಂಧಿ ಕೇಳಿದಾಗ ಪಟೇಲರು ಕೈಯೆತ್ತಿ, ಎದ್ದು ನಿಂತರು.

ಹಿಂದೆ ವಕೀಲರೂ, ಗಾಂಧಿಯವರ ಅನುಯಾಯಿಗಳೂ ಆಗಿದ್ದ ನರಹರಿ ಪಾರೀಖ್ ಮತ್ತು ಮೋಹನಲಾಲ್ ಪಂಡ್ಯರೊದಿಗೆ ಪಟೇಲರು ಹಳ್ಳಿಹಳ್ಳಿ ಪ್ರವಾಸ ಕೈಗೊಂಡು, ಗ್ರಾಮಸ್ಥರ ತೊಂದರೆಗಳನ್ನು ಪರಿಶೀಲಿಸಿ, ರಾಜ್ಯವ್ಯಾಪಿ ಹೋರಾಟ ಮಾಡಿದರು. ಜೊತೆಗೆ ಎಲ್ಲೆಡೆಗಳಲ್ಲಿ ಹಿಂದೂ, ಮುಸ್ಲಿಂ ಎನ್ನದೆ, ಬಹುತೇಕ ಪ್ರತಿಯೊಬ್ಬರೂ ಪಟೇಲರ ಪರಿಶ್ರಮ ಮತ್ತು ನಾಯಕತ್ವವನ್ನು ಒಪ್ಪಿಕೊಂಡರು.

ಪಟೇಲರ ಈ ಹೋರಾಟವು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಹಳ್ಳಿಗರು ಒಗ್ಗಟ್ಟನ್ನು ಮುರಿಯಬಾರದೆಂದು ಸಾರಿಹೇಳಿದರು. ಹಳ್ಳಿಗರ ಕರನಿರಾಕರಣೆಯ ಸತ್ಯಾಗ್ರಹವನ್ನು ಮುರಿಯಲು ಸರಕಾರ ಪೊಲೀಸ್ ಪಡೆಗಳನ್ನು ಕಳುಹಿಸಿ, ಜಮೀನು, ಸಾಕು ಪ್ರಾಣಿಗಳನ್ನೊಳಗೊಂಡು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ಬಂಧಿತರಾದರೂ ಹಳ್ಳಿಗರ ಕಡೆಯಿಂದ ಹಿಂಸಾತ್ಮಕ ಪ್ರತಿಕ್ರಿಯೆ ಇಲ್ಲವೇಇಲ್ಲವೆನ್ನುವಷ್ಟು ಅಪರೂಪವಾಗಿತ್ತು.

ಸತ್ಯಾಗ್ರಹಿಗಳಿಗೆ ರಾಜ್ಯಾದ್ಯಂತ ಜನಸಾಮಾನ್ಯರು, ಆಹಾರ, ಬಟ್ಟೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಿ, ಬೆಂಬಲ ಸೂಚಿಸಿದರು. ತೆರಿಗೆ ಸಲ್ಲಿಸಿದ, ಸರಕಾರಕ್ಕೆ ಬೆಂಬಲವಿತ್ತ ಹಳ್ಳಿಗಳಿಗೆ ಗುಜರಾತಿನ ಜನ ಬಹಿಷ್ಕಾರ ಹಾಕಿದರು. ಈ ಪ್ರತಿಭಟನೆಗೆ ಭಾರತದಾದ್ಯಂತ ಸಹಾನುಭೂತಿ ವ್ಯಕ್ತವಾದರೂ, ಈ ಪ್ರತಿಭಟನೆ ಸ್ಥಳೀಯ ಸಮಸ್ಯೆಗಾಗಿತ್ತೆ ಹೊರತು, ಭಾರತದ ಸ್ವಾತಂತ್ರ‍್ಯಕ್ಕಾಗಿ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು.

1919ರಲ್ಲಿ ಸರಕಾರ ಮಣಿದು, ಕರವನ್ನು ಮುಂದೂಡಿದ್ದಷ್ಟೇ ಅಲ್ಲ, ಅದರ ದರವನ್ನೂ ಕಡಿಮೆ ಮಾಡುವುದರೊಂದಿಗೆ ಈ ಹೋರಾಟ ಮುಕ್ತಾಯ ಕಂಡಿತು. ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನ ಪ್ರೀತಿಯಿಂದ ಕರೆದರು. ನಂತರ ಈ ಹೋರಾಟದಿಂದ ಸ್ವೊರ್ತಿ ಪಡೆದು ಭಾರತದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆಯನ್ನು ಗಳಿಸಿದರು.

1918 ರಿಂದ 1928ರವರೆಗೆ, ಪಟೇಲರು, ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಙಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು. ಇದೆ ಸಮಯದಲ್ಲಿ ಅಂದರೆ1922ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು.ಇದರಿಂದ ಪಟೇಲರಿಗೆ ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ ಮತ್ತು ಆಡಳಿತರಂಗಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವ ಅವಕಾಶ ದೊರಕಿತು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದಿಗೆ ವಿದ್ಯುತ್ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದರು.

ಹಿಂದೂ-ಮುಸ್ಲಿಮ್ ವಿವಾದದಂತಹ ನಾಜೂಕು ವಿಷಯಗಳನ್ನೂ ಕೈಗೆತ್ತಿಕೊಂಡು, ನಗರದ ಬಹುತೇಕ ಜನಸಂಖ್ಯೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡರು.

565 ಸಂಸ್ಥಾನಗಳ ವಿಲೀನ:

ರಾಜ-ಮಹಾರಾಜ-ಸಾಮಂತರುಗಳಿAದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ಇಂಡಿಯವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು. ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಿಗೆ (ತಿರುವಾಂಕೂರು ಮತ್ತಿತರೆಡೆ) ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರನ್ನು ಒಲಿಸಿದರು.565 ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಮುಂದಾದರು.

ಜೊತೆಗೆ ಯುದ್ಧ ಮಾಡಲು ಹಿಂಜರಿಯದೆ ಹಾಗೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ, ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.

ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಪಟೇಲರದಾಗಿತ್ತು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೋಡಿದ್ದರು.

1947 ರ ಮೇ 6 ರಂದು ಪಟೇಲರು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ತಪ್ಪಿಸುವ ಉದ್ದೇಶ ಅವರದಾಗಿತ್ತು. ಇದಲ್ಲದೆ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ರೂಪಿಸುವ ಹಾಗೂ ಭಾರತವನ್ನು ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿಕೊಂಡರು.

ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟಿಷ್ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮರು ಘೋಷಿಸಿದರು. ಆನಂತರ ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು ಮದ್ದುಗುಂಡು ಮತ್ತು ತರಬೇತಿಯನ್ನು ಬ್ರಿಟಿಷರು ನೀಡಿದರು. ಕಾಸಿಂ ರೆಜ್ಜಿ ಎಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ರಾಜಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನಡೆಸಿದರು. ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಹತ್ಯೆ, ಜನರ ಹತ್ಯೆ, ಸಾವಿರಾರು ಕಡೆ ನಡೆಯಿತು.

1948 ರ ಸೆಪ್ಟೆಂಬರ್ನಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ ಹೈದರಾಬಾದ್ ವನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು, ಇದೇ ಸಂದರ್ಭದಲ್ಲಿ ಮಿಲಿಟರಿ ಕ್ರಮವನ್ನು ಕೈಗೊಳ್ಳಬೇಕಾಗಿ ಬಂತು ಹೈದರಾಬಾದ್ ನಿಜಾಮನ ಕೈಯಿಂದ ಮುಕ್ತಿಗೊಳಿಸಲು ಸರ್ದಾರ್ ವಲ್ಲಭಾಯಿ ಪಟೇಲರು ಆಪರೇಷನ್ ಪೋಲೋ ಹಮ್ಮಿಕೊಂಡರು.

ನಿಜಾಮರು ಪಾಕಿಸ್ತಾನಕ್ಕೆ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಸುಳ್ಳು ಭರವಸೆಯನ್ನು ಪ್ರಜೆಗಳಲ್ಲಿ ಬಿತ್ತಲು ಯತ್ನಿಸಿದ್ದ ಆದರೆ 5 ದಿನಗಳ ಕಾಲ ಚುರುಕಾದ ಕಾರ್ಯಾಚರಣೆಯ ಬಳಿಕ 1948ರ ಸೆಪ್ಟಂಬರ್ 17ರಂದು ಹೈದರಾಬಾದನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಂಡಿತು. ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ ಎಂಬುದು ಇಲ್ಲಿ ನೆನಪಿನಲ್ಲಿಟ್ಟಿಕೊಳ್ಳಬೇಕು. ಕಾರಣ ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ.

ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು. ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.

ಖೇರಾ ಸತ್ಯಾಗ್ರಹ, ಬಾರ್ಡೋಲಿ ಕರನಿರಾಕರಣ ಚಳುವಳಿ ಹಾಗೂ ಚಲೇಜಾವ್ ಚಳುವಳಿಗಳ ಪ್ರೇರಕ ಶಕ್ತಿ. ಸೆರೆಯ ಸರಳ ಹಿಂದೆಯೂ ಅವರದು ತಗ್ಗದ, ಬಗ್ಗದ, ಕುಗ್ಗಿ ಹೋಗದ ಆತ್ಮವಿಶ್ವಾಸ.1946ರಲ್ಲಿ ಗುಜರಾತಿನ ಕೈರಾ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಘವನ್ನು ಪಟೇಲರು ಆರಂಭಿಸಿದರು. ಇಂದು ಅದೇ ಸಂಘ ‘ಅಮೂಲ್’ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಗೃಹಮಂತ್ರಿಯಾದ ಪಟೇಲರ ಎದುರಿಗಿತ್ತು ಬೆಟ್ಟದಷ್ಟು ಸವಾಲು! ಇದನ್ನು ಸ್ವೀಕರಿಸಿ, ಅಖಂಡ ಹಿಂದೂಸ್ಥಾನದ ಕನಸನ್ನು ನನಸಾಗಿಸಿದ, ಭಾರತದ ಬಿಸ್ಮಾರ್ಕ್, ಜುನಾಗಢ ಮತ್ತು ಕಾಶ್ಮೀರ ಸಮಸ್ಯೆಗಳಿಗೆ ಎದೆಯೊಡ್ಡಿದರು ಪಟೇಲರು. ರಕ್ತರಹಿತ ಕ್ರಾಂತಿಯಾದ ಪೊಲೀಸ್ ಕಾರ್ಯಾಚರಣೆಯಿಂದ ಹೈದರಾಬಾದನ್ನು ವಿಮೋಚನೆಗೊಳಿಸಿ, ‘ಉಡಿಯೊಳಗೆ ಉದಯಿಸುವ ಉರಿವ ಕೆಂಡ’ದ ಅಪಾಯದಿಂದ ರಾಷ್ಟ್ರವನ್ನು ಪಾರು ಮಾಡಿದ ಉಕ್ಕಿನ ಮನುಷ್ಯ ನಮ್ಮ ಪಟೇಲರು.

ಗೌರವ ಪ್ರಶಸ್ತಿ:

ಗುಜರಾತಿನ ಜನರಿಂದ ಗೌರವಾರ್ಥ ‘ಸರ್ದಾರ್’ ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ‘ಉಕ್ಕಿನ ಮನುಷ್ಯ’ ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ 1991 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದೇಶದ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.

ಕೊನೆಯ ಮಾತು: “ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು”ಎಂಬ ದಿವ್ಯಸಂಕಲ್ಪದೊಂದಿಗೆ, ಪಾರತಂತ್ರ್ಯದ ಶೃಂಖಲೆಗಳಿಂದ ಮುಕ್ತವಾದ, ಭಾರತದ ಪ್ರಧಾನಿಯಾಗುವ ಅವಕಾಶದಿಂದ ವಂಚಿತರಾದರೂ, ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಧೀಮಂತ ರಾಜಕಾರಣಿ ಪಟೇಲರು.ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು “ಭಾರತದ ನಾಗರಿಕ ಸೇವಕರ ಪೋಷಕ ಸಂತ” (patron saint of India’s civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು “ಭಾರತದ ಏಕೀಕರಣ ನೇತಾರ” ಎಂದೂ ಕರೆಯಲಾಗುತ್ತದೆ.

ಸರ್ದಾರ್ ವಲ್ಲಭಾಯಿ ಪಟೇಲರು ಬಹುಮುಖ ವ್ಯಕ್ತಿತ್ವ. ದೊಡ್ಡ ರಾಜಕೀಯ ನಾಯಕ, ಅನನ್ಯ ಸಂಘಟಕ, ಸಂಪೂರ್ಣ ಆಡಳಿತಗಾರ ಹಾಗೂ ಕುಶಲ ರಾಯಭಾರಿ. ಭಾರತದ ನಾಗರಿಕತೆಯ ಸೇವಾ ವ್ಯವಸ್ಥೆಯ ಉಕ್ಕಿನ ಚೌಕಟ್ಟಿನ ಹಿಂದಿರುವ ವಸ್ತುಸಿಲ್ಪ ಕೂಡ ಈ ಉಕ್ಕಿನ ವ್ಯಕ್ತಿಯೇ ಸರ್ದಾರ್ ವಲ್ಲಭಾಯಿ ಪಟೇಲರು ಅವರು ನಿಜವಾದ ರಾಜಕೀಯ ಪ್ರಜ್ಞೆ ಹೊಂದಿದ್ದ ಮುತ್ಸದ್ದಿಯಾಗಿದ್ದರು.

ಸರ್ದಾರ್ ವಲ್ಲಭಾಯಿ ಪಟೇಲರು ದೂರದರ್ಶಿತ್ವ, ದೇಶಭಕ್ತಿ, ಜಾಣತನ, ಮನವೊಲಿಸುವ ಸಾಮರ್ಥ್ಯ ಯಾರ ಹಿತಾಸಕ್ತಿಗೂ ದಕ್ಕೆ ಬರಬಾರದು ಎಂದು ಮನೋಭಾವ ಇವೆಲ್ಲ ಗುಣಗಳಿಂದ ಏಕೀಕರಣದ ಭಾವವು ಪೂರ್ಣವಾಯಿತು. ಅದಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಉಕ್ಕಿನ ಮನುಷ್ಯ ಎಂದು ಬಿರುದು ಬಂದಿತು. ಪಟೇಲರು ರಾಷ್ಟ್ರಪ್ರೇಮ, ಸಂಘಟನಾಶಕ್ತಿ, ಧೀಮಂತಿಕೆ, ಧೀರತನ, ತೆರೆದ ಮನ ಮತ್ತು ಪರಿವರ್ತನಾ ಗುಣಗಳ ಪ್ರತಿಮಾ ರೂಪ.

ಅವರ ಸ್ವಯಂ ಮತ್ತು ಸಾಂಸ್ಥಿಕ ಶಿಸ್ತು, ಕರ್ತವ್ಯಪ್ರಜ್ಞೆ, ಮಾನವೀಯ ಅನುಕಂಪ, ಅರ್ಥ-ಸ್ವಾರ್ಥ, ಮತ್ತು ಅಧಿಕಾರ ದಾಹಗಳಿಂದ ದೂರವಾದ ನಾಯಕತ್ವ ಗುಣ ಅನುಕರಣೀಯ ಆದರ್ಶ. ಪಟೇಲರ ಕೊಡುಗೆಗಳಿಂದಲೇ ಅವರು ರಾಜಕೀಯ ಕ್ಷಿತಿಜದ ಧ್ರುವತಾರೆ. ನಾನಳಿವೆ ನೀನಳಿವೆ, ನಮ್ಮೆಲುವುಗಳ ಮೇಲೆ ಮೂಡುವುದು ನೋಡು ನವಭಾರತದ ಲೀಲೆ ಎಂದು ನಂಬಿ ನಡೆದ, ರಾಷ್ಟ್ರಾಭಿಮಾನದಿಂದ ಪ್ರೇರಿತವಾದ ಪಟೇಲರ ಆದರ್ಶಗಳು, ಕೊಡುಗೆಗಳು ಭಾರತೀಯರಿಗೆ ದಾರಿದೀಪ ಮತ್ತು ಪ್ರೇರಣೆವಾಗಬೇಕು.

-ಸಂಗಮೇಶ ಎನ್.ಜವಾದಿ ಕೊಡಂಬಲ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.