ಸಾಧನೆಗೆ ಸಪ್ತ ಸೂತ್ರಗಳು

0

ಸತತ ಪ್ರಯತ್ನ, ಪರಿಶ್ರಮ ವಹಿಸಿ ದುಡಿಯುವ ಮನೋಭಾವ ಮತ್ತು ಆತ್ಮವಿಶ್ವಾಸದೊಂದಿಗೆ ಪ್ರಯತ್ನಶೀಲರಾಗಿ ಯಶಸ್ಸು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಿಮ್ಮಲ್ಲಿ ಕೆಲಸದ ಬಗ್ಗೆ ಇರುವ ನಕಾರಾತ್ಮಕತೆ, ಕೆಟ್ಟದ್ದನ್ನು ಆಲೋಚಿಸುವುದು, ಸಂಕುಚಿತ ಮನೋಭಾವ, ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು, ನಮ್ಮ ಬಗ್ಗೆ ಯಾರೇ ಏನೇ ಟೀಕೆ, ಅಪಹಾಸ್ಯ, ಹೀಯಾಳಿಕೆಯ ಮಾತುಗಳನ್ನು ಆಡಿದರೆಅದಕ್ಕೆತಲೆ ಕೆಡಿಸಿಕೊಳ್ಳದೇ ಕಾರ್ಯದಲ್ಲಿ ನಿಷ್ಠೆ, ಬದ್ಧತೆ ಮತ್ತುಗುರಿ ಸಾಧನೆಯತ್ತ ಗಮನ ವಹಿಸಿ ಕಾರ್ಯ ಕೈಗೊಳ್ಳಿ. ಅಂದಾಗ ಮಾತ್ರ ನೀವು ಯಶಸ್ಸು ಪಡೆಯಲು ಸಾಧ್ಯ.

Gummata Nagari

ಖ್ಯಾತ್ ಸಾಹಿತಿ ಗೌರಗೋಪಾಲ ದಾಸರವರು “ಯಶಸ್ಸು ಎಂಬುದು ಜೀವನದಲ್ಲಿ ಯಾವುದೊಂದು ಸಂದರ್ಭದಲ್ಲಿ ತನ್ನದೇ ರೀತಿಯಲ್ಲಿ ಲಭಿಸುತ್ತದೆ. ಅದಕ್ಕಾಗಿ ನೀನು ತಡಪಡಿಸುವದು ಬೇಡ. ನೀನು ಕಾರ್ಯದಲ್ಲಿ ಶ್ರದ್ಧೆ, ನಿಷ್ಠೆಯಿಟ್ಟು ದುಡಿ, ಅದು ನಿನ್ನ ಪ್ರಯತ್ನಕ್ಕೆ ಮುಂದೊಂದು ದಿನ ಪ್ರತಿಫಲವಾಗಿ ದೊರೆಯುತ್ತದೆ” ಎಂದು ಹೇಳಿದ್ದಾರೆ. ಜೀವನವೆಂಬ ಸಾಗರದಲ್ಲಿ ಸಮಸ್ಯೆಗಳೆಂಬ ದೊಡ್ಡದೊಡ್ಡ ತೆರೆಗಳು ಬಂದಾಗ ಈಜಿದಡ ಸೇರಬೇಕಾದಾಗ ಅಥವಾ ಸಮಸ್ಯೆ, ತೊಂದರೆ, ಸಂದಿಗ್ಧ ಪರಿಸ್ಥಿತಿ, ಸನ್ನಿವೇಶ ಮುಂತಾದ ಕಷ್ಟಕರವಾದ ಪ್ರಸಂಗಗಳು ಎದುರಾದಾಗ ಅಥವಾ ಸೋಲು, ಅಪಜಯಗಳೆಂಬ ಕೆಟ್ಟ ಅನುಭವಗಳು ಉಂಟಾದಾಗ ನಮ್ಮನ್ನು ಯಾರೇ ಎಷ್ಟೇ ಅನುಮಾನ ಮಾಡಿದರೂ ಅಥವಾ ಕೀಳಾಗಿ ಕಂಡರೂ ಧೃತಿಗೆಡದೆ, ಎದೆಗುಂದದೆ, ನಮ್ಮ ಸ್ವಾಭಿಮಾನ ಬಿಡದೇ ಪರಿಶ್ರಮ ವಹಿಸುತ್ತಾ ಸಾಧಿಸಿಯೇ ತೀರುತ್ತೇನೆಂಬ ಅಚಲ ನಂಬಿಕೆ ಮತ್ತು ಆತ್ಮವಿಶ್ವಾಸದೊಂದಿಗೆ ಮುಂದಡಿಟ್ಟರೆ ಜಯ ನಮ್ಮದಾಗುತ್ತದೆ.

ಜೀವನದಲ್ಲಿ ನೀವು ಗುಲಾಬಿ ಹೂವುಗಳಾಗಬೇಕೆಂದು ಬಯಸಿದರೆ ಮುಳ್ಳುಗಳ ನಡುವೆ ಬಾಳುವುದನ್ನು ರೂಢಿಸಿಕೊಳ್ಳಬೇಕು. ಕಷ್ಟ ಪಡದೇ ಯಾರೂ ಏನನ್ನೂ ಹಾಗೂ ಯಾವುದನ್ನೂ ಸುಲಭವಾಗಿ ಪಡೆಯಲು ಸಾಧ್ಯವಿಲ್ಲ ಮತ್ತು ಅದು ಅವರಿಗೆ ಸಿಗುವುದಿಲ್ಲ. ಜೀವನದಲ್ಲಿ ಬೇಕು ಅಂದುಕೊಂಡಿದ್ದು ಯಾವುದೂ ಸುಲಭವಾಗಿ ಸಿಗುವುದಿಲ್ಲ. ಆದರೆ ಪಡದೇ ತೀರುತ್ತೇನೆಂಬ ಹಠ ಇದ್ರೆ ಎಲ್ಲವೂ ನಮಗೆ ದೊರೆಯಲಿದೆ. ಆದ್ದರಿಂದ ನಿರಂತರ ದುಡಿಮೆ, ಸಹನೆ ಮತ್ತು ತಾಳ್ಮೆ ಎಂಬುದೇ ಬದುಕಿನಲ್ಲಿ ಯಶ ಗಳಿಸಲು ಬೇಕಾದ ದಿವ್ಯ ಔಷಧಗಳಾಗಿವೆ ಎಂದರೆತಪ್ಪಾಗಲಿಕ್ಕಿಲ್ಲ. ಪ್ರತಿಯೊಬ್ಬರೂತಾವು ಹಿಡಿದಕಾರ್ಯ ಸಿದ್ಧಿಸುವವರೆಗೆ ಅಥವಾ ಗುರಿ ಸಾಧನೆಗೆ ನಾವು ನಮ್ಮ ಕೆಲಸ-ಕಾರ್ಯ ಮತ್ತು ಮಾಡಬೇಕಾದ ಕರ್ತವ್ಯವನ್ನು ಶ್ರದ್ಧೆ, ನಿಷ್ಠೆ ಮತ್ತು ದಕ್ಷತೆಯೊಂದಿಗೆ ನಿರ್ವಹಿಸಿದರೆ ಕೀರ್ತಿ ನಮ್ಮ ಕಾಲಡಿಯಲ್ಲಿ ಬೀಳುತ್ತದೆ ಮತ್ತು ಅದರ ಗೌರವವೂ ನಮ್ಮನ್ನು ತನ್ನಿಂದ ತಾನೇ ಹುಡುಕಿಕೊಂಡು ಬರುತ್ತದೆ. ನಾವು ಜೀವನದಲ್ಲಿ ಕಲಿಯಬೇಕಾದ ಸಂಗತಿಗಳು ಹಲವು. ಆ ಕಲಿಕೆಗೆ ಇಪ್ಪತ್ತು, ಎಪ್ಪತ್ತು ಎಂಬುದಿಲ್ಲ. ಅದಕ್ಕೆ ವಯಸ್ಸಿನ ಮಿತಿಯೂಇಲ್ಲ. ಹೀಗೆ ನಾವೆಲ್ಲ ಜೀವನುದ್ದಕ್ಕೂ ವಿದ್ಯಾರ್ಥಿಯಾಗಿ ನಿರಂತರಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುತ್ತಾ ಅನೇಕ ಹೊಸ ಹೊಸ ವಿಷಯ, ಸಂಗತಿ ಮತ್ತು ಜ್ಞಾನವನ್ನು ಪಡೆಯಬೇಕೆಂಬ ಹಂಬಲದೊಂದಿಗೆ ಸಾಗಬೇಕು. ಅಂದಾಗ ಮಾತ್ರ ನಾವು ಕಂಡ ಕನಸು ನನಸಾಗಲು ಹಾಗೂ ಹಿಡಿದ ಕಾರ್ಯದಲ್ಲಿ ಜಯ ಗಳಿಸಲು ಸಾಧ್ಯವಾಗುತ್ತದೆ.

ಸಾಧನೆಯ ಶಿಖರ ತಲುಪಲು ಅನುಸರಿಸಬೇಕಾದ ಸಪ್ತಸೂತ್ರಗಳು:

* ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯದ ಬಗ್ಗೆ ನಂಬಿಕೆಯಿರಲಿ: ಶ್ರೇಷ್ಠ ತತ್ವಜ್ಞಾನಿ ಕ್ರಿಸ್ಟೀಯನ್. ಡಿ. ಲಾರಸನ್‌ರವರು “ಎಲ್ಲವೂ ನಿನ್ನಲ್ಲಿದೆ ಎಂದು ಮೊದಲು ನಿನ್ನಲ್ಲಿ ನೀನು ನಂಬಿಕೆಯಿಡು. ಮುಂಬರುವ ಜೀವನದಲ್ಲಿ ಎದುರಾಗುವಎಂತಹ ಕಷ್ಟ, ಸಮಸ್ಯೆ, ತೊಂದರೆಗಳು ಬಂದರೆ ಅದನ್ನು ನಾನು ಪರಿಹರಿಸುವ ಶಕ್ತಿ ನಿನಲ್ಲಿದೆ ಎಂಬುದರ ಬಗ್ಗೆ ನಿನಗೆ ಅರಿವಿದ್ದರೆ, ಮುಂದೊಂದು ದಿನ ನೀನು ಯಶಸ್ವಿಯಾಗುವೆ” ಎಂದು ಹೇಳಿದ್ದಾರೆ. ಪ್ರತಿಯೊಬ್ಬರಿಗೆ ಒಂದಿಲ್ಲೊAದು ಕಲೆ, ಪ್ರತಿಭೆ, ಶಕ್ತಿ-ಸಾಮರ್ಥ್ಯ, ಜಾಣ್ಮೆ, ಪಾಂಡಿತ್ಯ, ಬುದ್ಧಿವಂತಿಕೆ, ಕೌಶಲ್ಯ, ನೈಪುಣ್ಯತೆ, ಕ್ರೀಯಾಶೀಲತೆಗಳು ಇದ್ದೇ ಇರುತ್ತವೆ. ಆದರೆ ಅವರಲ್ಲಿರುವ ಅದ್ಭುತ ಶಕ್ತಿ ಇರುವ ಬಗ್ಗೆ ಅರಿವು ಮತ್ತು ನಂಬಿಕೆ ಇರುವುದಿಲ್ಲ. ಕೆಲವರು ತಮ್ಮಲ್ಲಿ ಅಷ್ಟೇನೂ ಜಾಣ್ಮೆ, ಜ್ಞಾನ ಮತ್ತು ಪ್ರತಿಭೆಯಿಲ್ಲದಿದ್ದರೂ ಅವರಲ್ಲಿ ನನ್ನಲ್ಲಿರುವ ಶಕ್ತಿ-ಸಾಮರ್ಥ್ಯದಿಂದ ನಾನು ಎಂತಹ ಕೆಲಸ-ಕಾರ್ಯಗಳನ್ನು ಮಾಡಬಲ್ಲೆ ಮತ್ತು ಕಂಡ ಕನಸನ್ನು ನನಸು ಮಾಡಬಲ್ಲೆ ಮತ್ತು ಗುರಿಯನ್ನು ಸಾಧಿಸಬಲ್ಲೆನೆಂಬ ಆತ್ಮನಂಬಿಕೆ, ಅಚಲ ವಿಶ್ವಾಸ, ನಿಶ್ಚಲ ಮನಸ್ಸು ಎಂಬುದು ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಅಂತಹವರು ಏನನ್ನಾದರೂ ಸಾಧಿಸಿಯೇ ತೀರುತ್ತಾರೆ. ಆದರೆ ಕೆಲವರು ತಮ್ಮಲ್ಲಿ ಎನೆಲ್ಲವೂ ಇದ್ದರೂ ತಮ್ಮ ಮೇಲೆ ತಮಗಿಲ್ಲದ ನಂಬಿಕೆ, ಸ್ವ-ಅರಿವು ಅವರಲ್ಲಿ ಹಿನ್ನಡೆ, ಹಿಂಜರಿಕೆ ಮತ್ತು ಕೀಳರಿಮೆ ಉಂಟಾಗಿ ಏನನ್ನು ಸಾಧಿಸಲಾರರು. ಬದುಕಿನಲ್ಲಿ ಏನನ್ನಾದರ ಸಾಧಿಸಬೇಕಾದರೆ ಮೊದಲು ನಮಗೆ ಕೆಲಸ, ಅದರ ಮೇಲಿನ ನಂಬಿಕೆ, ಸಾಧಿಸಬಲ್ಲೆನೆಂಬ ಛಲಗಾರಿಕೆ ಮತ್ತು ಆತ್ಮವಿಶ್ವಾಸಗಳು ನಮಗೆ ಯಶಸ್ಸಿಗೆ ದಾರಿದೀಪವಾಗುತ್ತವೆ. ನಂಬಿಕೆಯು ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಬದುಕಿಗೊಂದು ಕೈಗನ್ನಡಿಯಾಗಿದೆ.

* ನಿರಂತರಅಧ್ಯಯನ ಮತ್ತು ಪ್ರಯತ್ನಶೀಲರಾಗಿ: ಬರೀ ಆತ್ಮವಿಶ್ವಾಸವನ್ನು ಮಾತ್ರ ಬೆಳೆಸಿಕೊಂಡರೆ ಸಾಲದು. ಅದಕ್ಕೆ ಪೂರಕವಾಗಿ ಕಾರ್ಯ ಸಾಧನೆಗೆ ಬೇಕಾದ ಸತತ ಪ್ರಯತ್ನ, ಕಠಿಣ ಪರಿಶ್ರಮ ಅವಶ್ಯಕ. ಕೆಲವರು ಮೊದಲು ಅನೇಕ ಕೆಲಸ-ಕಾರ್ಯಗಳನ್ನು ಬಹಳ ಉತ್ಸುಕರಾಗಿ ಆರಂಭಿಸುತ್ತಾರೆ. ಆದರೆ ಕ್ರಮೇಣ ದಿನಗಳೆದಂತೆ ಅದರ ಮೇಲಿನ ಆಸಕ್ತಿ, ಉತ್ಸಾಹ, ಹುಮ್ಮಸ್ಸು, ತಾಳ್ಮೆ, ಕಳೆದುಕೊಳ್ಳುತ್ತಾರೆ. ಮತ್ತೊಬ್ಬರ ಅಭಿಪ್ರಾಯ, ಭಾವನೆಗಳಿಗೆ ಮತ್ತು ಬೇರೆಯವರು ತಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆಂಬ ಬಗ್ಗೆ ಕಿಂಚಿತ್ತೂ ಮಹತ್ವ ಕೊಡದೇ ದೃಢ ಮನಸ್ಸಿನಿಂದ ಪ್ರಯತ್ನಶೀಲ ಮತ್ತು ಕಾರ್ಯದಲ್ಲಿ ಮಗ್ನರಾದರೆ ನೀವು ಕಾರ್ಯದಲ್ಲಿ ಸಾಫಲ್ಯತೆಯನ್ನು ಪಡೆಯಬಹುದು. ಅದಕ್ಕಂತಲೇ ಡಾ. ಎ.ಪಿ.ಜೆಅಬ್ದುಲ್ ಕಲಾಂ ರವರು“ ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ದೊಡ್ಡ ಮದ್ದು. ಇದು ಯಾರಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ“ ಎಂದು ಹೇಳಿದ್ದಾರೆ.

* ವಿಳಂಬ ಪ್ರವೃತ್ತಿ ಬೇಡ: ಖ್ಯಾತ ರಷ್ಯಾದ ಲೇಖಕ ಲಿಯೋಟಾಲ್ ಸ್ಟಾಯ್ ಹೇಳುವಂತೆ, “There is never a bad time to do the good work” ಎಂದು ಹೇಳಿದ್ದಾರೆ. ಆದ್ದರಿಂದ ನಾವು ಮಾಡಬೇಕೆಂದು ಕಾರ್ಯವನ್ನು ನಿರ್ಧಿಷ್ಟ ಅವಧಿಯ ಒಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಆ ಕಾರ್ಯವನ್ನು ಇಂದು, ನಾಳೆ, ಈಗ ಕಾಲ ಸರಿಯಾಗಿಲ್ಲ ಎಂಬAತಹ ಮೌಢ್ಯಗಳಿಂದ ಹೊರಬಂದು ತತ್‌ಕ್ಷಣದಲ್ಲಿಯೇ ಆಗಿಂದಾಗ್ಗೆ ಮಾಡಿ ಮುಗಿಸಬೇಕು. ಯಾವುದೇ ವಿಳಂಬ, ಉದಾಸೀನತೆ, ನಿರ್ಲಕ್ಷ್ಯ ಮನೋಭಾವನೆಗಳನ್ನು ತೊರೆದು ಸಮಯ ನಿರ್ವಹಣೆಯ ವೇಳಾಪಟ್ಟಿಗೆ ತಕ್ಕಂತೆ ಕಾರ್ಯಪ್ರವೃತ್ತರಾಗಬೇಕು. ಕಾರ್ಯದಲ್ಲಿ ವಿಳಂಬ ಮಾಡುವದರಿಂದ ಏಕಾಗ್ರತೆ ಹಾಳಾಗುತ್ತದೆ. ಫಲಿತಾಂಶ ಏನೇ ಬರಲಿ ಯಾವುದೇ ಸಮಯಕ್ಕಾಗಿ ಕಾದು ಕುಳಿತುಕೊಳ್ಳದೇ ಅಥವಾ ಮುಂದೂಡದೇ, ಎಷ್ಟೇ ಕಷ್ಟವಾದರೂ ಸರಿಯೇ ಆ ಕೆಲಸ-ಕಾರ್ಯವನ್ನು ಪೂರ್ಣಗೊಳ್ಳುವವರೆಗೂ ವಿಶ್ರಾಂತಿ ಪಡೆಯದೇ ನಿರಂತರ ಪ್ರಯತ್ನಶೀಲರಾದರೆ ಗೆಲುವೆಂಬುದು ನಿಮ್ಮನ್ನು ಅರಸಿಕೊಂಡು ಬರುತ್ತದೆ.

* ಎಲ್ಲರಿಗಿಂತ ವಿಭಿನ್ನವಾಗಿ ಚಿಂತಿಸಿ: ನಾವು ಜೀವನದಲ್ಲಿ ವಿಭಿನ್ನವಾಗಿ ಚಿಂತಿಸುವ ಮನೋಭಾವವನ್ನು ಹೊಂದಿರಬೇಕು. ನಾನು ಹಾಕಿಕೊಂಡ ಗುರಿಯ ಸಾಧನೆಗೆ ಇರಬೇಕಾದ ಶಕ್ತಿ-ಸಾಮರ್ಥ್ಯ ನನ್ನಲ್ಲಿದೆ. ಈ ಕಾರ್ಯಸಾಧನೆಯು ನನ್ನಿಂದ ಮಾತ್ರ ಸಾಧ್ಯ ಮತ್ತು ಅದಕ್ಕಾಗಿ ನಾನು ಶಕ್ತಾನುಸಾರ ಪ್ರಾಮಾಣಿಕವಾಗಿ ಪರಿಶ್ರಮ ವಹಿಸಿ ದುಡಿಬೇಕು ಎನ್ನುವಂತಹ ಬದ್ಧತೆಯನ್ನು ಹೊಂದಿರಬೇಕು. ಎಲ್ಲರೂ ಹೇಗೆ ಕಾರ್ಯ ನಿರ್ವಹಿಸುತ್ತಾರೆ, ಅವರೇನು ಮಾಡುತ್ತಾರೆ, ಅನುಸರಿಸುವ ಕಾರ್ಯ ವಿಧಾನಗಳೇನು ಎಂಬುದರ ಬಗ್ಗೆ ಚಿಂತಿಸಬಾರದು. ಅವರಿಗೆ ಹೀಗಾಯಿತು, ಇವರಿಗೆ ಹಾಗಾಯಿತು ಎನ್ನುವಂತಹ ವಿಚಾರದಲ್ಲಿ ವೃಥಾ ಕಾಲಹರಣ ಮಾಡದೇ ನಾನು ನಾನೇ, ಇತರರಂತೇ ನಾನಲ್ಲ, ನಾನು ಎಲ್ಲರಿಗಿಂತ ಭಿನ್ನವೆನ್ನುದನ್ನು ಇತರರಿಗೆ ತೋರಿಸಬೇಕು. ನನ್ನ ದೃಷ್ಟಿಕೋನದಲ್ಲಿ ವಿಭಿನ್ನವಾಗಿ ಆಲೋಚಿಸುವ ಮತ್ತು ನೈಜವಾದ ನೆಲೆಗಟ್ಟಿನಲ್ಲಿ ಚಿಂತಿಸಬೇಕು. ಯಾವುದೇ ವ್ಯಕ್ತಿಗಳು ಮಾಡಿದತಪ್ಪಿನಿಂದಅವರಿಗಾದ ಸೋಲು-ಕಹಿ ಅನುಭವ ಮತ್ತು ಹಿನ್ನೆಡೆಯ ಬಗ್ಗೆ ವಿಚಾರ ಮಾಡಬಾರದುಅಂದಾಗ ಮಾತ್ರ ನಮ್ಮ ನಡೆ ಯಶಸ್ಸಿನತ್ತ ಸಾಗಲು ಮತ್ತು ಸಾಧನೆಯ ಶಿಖರವನ್ನು ತಲುಪಲು ಸಾಧ್ಯವಾಗುತ್ತದೆ.

* ಸಿಕ್ಕ ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಿ: ಜಗತ್ತಿನ ಶ್ರೀಮಂತ ಉದ್ಯಮಿದಾರರಲ್ಲಿ ಒಬ್ಬರಾದ ಬಿಲ್ ಗೇಟ್ಸ್ರವರ ಪ್ರಕಾರ, “ಸರಿಯಾದ ಸಮಯ, ಕಾಲ ಅಥವಾಉತ್ತಮ ಗಳಿಗೆಗಾಗಿ ಕಾಯಬೇಡಿ. ಒಳ್ಳೆಯ ಕಾರ್ಯವನ್ನು ಶ್ರದ್ಧಾವಹಿಸಿ ಕೈಗೊಳ್ಳಿ ಎಲ್ಲ ಸಮಯವೂ ಶುಭಪ್ರದವಾಗುತ್ತದೆ” ಎಂದು ಹೇಳಿದ್ದಾರೆ. ಸಿಕ್ಕ ಸಮಯ ಮತ್ತು ಅವಕಾಶವನ್ನು ಎಂದೂ ಕಳೆದುಕೊಳ್ಳಬಾರದು. ಆ ಸಮಯ ಮತ್ತು ಅವಕಾಶಗಳು ನಮಗೆ ಮತ್ತೆ ಮತ್ತೆ ಮರಳಿ ದೊರಕಲಾರವು. ಅವಕಾಶಗಳು ನಮಗೆ ಆಶೀರ್ವಾದಗಳಿದ್ದಂತೆ. ಯಾರಿಗೆ ಗೊತ್ತು ಅವು ನಮ್ಮನ್ನೇ ಬದಲಾಯಿಸಬಲ್ಲವು ಅಥವಾ ಜಗತ್ತನ್ನೇ ಬದಲಾಯಿಸಬಲ್ಲವೆಂದು.

* ಕೈಲಾಗದೆಂಬ ನಕಾರಾತ್ಮಕತೆಯ ಭಾವ ತೊಲಗಿಸಿ: ಸಕಾರಾತ್ಮಕ ಮನೋಭಾವ ಪ್ರತಿಯೊಂದರಲ್ಲಿಯೂ ಅವಕಾಶಗಳನ್ನು ಹುಡುಕುತ್ತದೆ. ಋಣಾತ್ಮಕ ಮನಸ್ಥಿತಿ ಯಾವುದೇ ಕೆಲಸ-ಕಾರ್ಯದಲ್ಲಿ ಕಠಿಣತೆ, ತಪ್ಪು, ಸೋಲು, ಅಪಜಯ, ವೈಫಲ್ಯ, ಸಮಸ್ಯೆ, ತೊಂದರೆಯನ್ನೇ ಎತ್ತಿತೋರಿಸುತ್ತದೆ. ಶಾಂತತೆ ಮತ್ತು ನಗು ನಮ್ಮ ಖುಷಿ ಜೀವನದ ಪ್ರಮುಖ ಅಸ್ತçಗಳಿದ್ದಂತೆ. ನಗು ಎಂತಹ ಕಠಿಣ ಸಂದರ್ಭ, ಸನ್ನಿವೇಶ ಅಥವಾ ತೊಂದರೆಗಳನ್ನು ಸುಲಭವಾಗಿ ಎದುರಿಸುವ ಮಾರ್ಗವಾದರೆ, ಶಾಂತತೆ ಎಂಬುದು ಹಲವಾರು ಸನ್ನಿವೇಶಗಳನ್ನೇ ಎದುರಾಗದಂತೆ ಪರಿಹರಿಸುವ ಮತ್ತು ತಡೆಯುವ ಸಾಧನವಾಗಿದೆ ಎಂದು ಹೇಳಬಹುದು.

* ಅದೃಷ್ಟ-ಹಣೆಬರಹಕ್ಕಾಗಿ ಕಾಯಬೇಡಿ: ಅದೃಷ್ಟ ಮತ್ತು ಹಣೆಬರಹ ಯಾವ ಮನುಷ್ಯನಾದರೂ ಯಶಸ್ಸು ಗಳಿಸಲು ಸಾಧ್ಯವೆಂದ ನಮ್ಮ ಮೌಢ್ಯತೆ, ನಕಾರಾತ್ಮಕ ಮನೋಭಾವ ಮತ್ತು ಮನೋಧರ್ಮವು ನಮ್ಮನ್ನು ಯಾವುದೇ ಕಾರ್ಯಸಾಧನೆಗೆ ಅಣಿಯಾಗಲು ಬಿಡುವುದಿಲ್ಲ. ಅದೃಷ್ಟ ನಮ್ಮ ಕೈ ಹಿಡಿಯದೇ ಹೋದರೆ ಏನು ಸಾಧಿಸಲಾಗದೆಂಬ ಮನಸ್ಥಿತಿಯು ನಮ್ಮನ್ನು ಬೆಳೆಯುತ್ತದೆ. ಖ್ಯಾತ ಪ್ರೆಂಚ್ ತತ್ವಜ್ಞಾನಿ ಡಾ. ರಾರ್ಬರ್ಟಕೋಲ್ಲಿಯರ್‌ರವರ ಪ್ರಕಾರ, “Success is the sum of small efforts, repeated day-in and day out” ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ನಾವು ಮಾಡುವ ಕೆಲಸ-ಕಾರ್ಯದ ಯಶಸ್ಸು ನಮ್ಮ ಆತ್ಮವಿಶ್ವಾಸದ ಮೇಲೆ ನಿಂತಿರುತ್ತದೆ. ಸಾಧಕರು ಅವರು ನಮ್ಮಂತೆ ಮನುಷ್ಯರೇ ಎಂಬುದನ್ನು ಅರಿತು ಅವರ ಸಾಧನೆಯ ಪಥವನ್ನು ಅನುಸರಿಸಿ ನಡೆದರೆ ಗೆಲುವು ನಮ್ಮದಾಗುತ್ತದೆ. ನನ್ನಲ್ಲಿ ಅದ್ಭುತವಾದ ಶಕ್ತಿಯಿದೆ ಅದರಿಂದ ನಾನು ಸಾಧಿಸಬಲ್ಲೆನೆಂಬ ದಿಟ್ಟಛಲದಿಂದ ಕಾರ್ಯದ ಫಲಿತಾಂಶದ ಬಗ್ಗೆ ಕಿಂಚಿತ್ತೂ ಯೋಚಿಸದೇ ಕಾರ್ಯಪ್ರವೃತ್ತರಾಗುತ್ತಾ ನೀವು ಹಿಡಿದ ಕಾರ್ಯ ಸಿದ್ಧಿಯಾಗುವವರೆಗೂ ವಿರಮಿಸದೇ ನಿರಂತರ ಅಧ್ಯಯನ, ಸತತ ಪ್ರಯತ್ನ, ಪರಿಶ್ರಮ ವಹಿಸಿ ದುಡಿಯುವ ಮನೋಭಾವ ಮತ್ತು ಆತ್ಮವಿಶ್ವಾಸದೊಂದಿಗೆ ಪ್ರಯತ್ನಶೀಲರಾಗಿ ಯಶಸ್ಸು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಿಮ್ಮಲ್ಲಿ ಕೆಲಸದ ಬಗ್ಗೆ ಇರುವ ನಕಾರಾತ್ಮಕತೆ, ಕೆಟ್ಟದ್ದನ್ನು ಆಲೋಚಿಸುವುದು, ಸಂಕುಚಿತ ಮನೋಭಾವ, ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು, ನಮ್ಮ ಬಗ್ಗೆ ಯಾರೇ ಏನೇ ಟೀಕೆ, ಅಪಹಾಸ್ಯ, ಹೀಯಾಳಿಕೆಯ ಮಾತುಗಳನ್ನು ಆಡಿದರೆಅದಕ್ಕೆತಲೆ ಕೆಡಿಸಿಕೊಳ್ಳದೇ ಕಾರ್ಯದಲ್ಲಿ ನಿಷ್ಠೆ, ಬದ್ಧತೆ ಮತ್ತುಗುರಿ ಸಾಧನೆಯತ್ತ ಗಮನ ವಹಿಸಿ ಕಾರ್ಯ ಕೈಗೊಳ್ಳಿ. ಅಂದಾಗ ಮಾತ್ರ ನೀವು ಯಶಸ್ಸು ಪಡೆಯಲು ಸಾಧ್ಯ.

* ಸಾಧಿಸಬಲ್ಲೆನೆಂಬ ಆತ್ಮಬಲವೊಂದಿದ್ದರೆ ಸಾಕು: ಆತ್ಮವಿಶ್ವಾಸವೆಂಬುದು ಮನುಷ್ಯನ ಬಹು ದೊಡ್ಡ ಆಸ್ತಿ. ನಮ್ಮಲ್ಲಿರುವ ಅಂತಃಶಕ್ತಿ ಮತ್ತು ಅನುಕೂಲಕರವಾದ ಸಂಗತಿ ಮತ್ತೊಂದಿಲ್ಲ. ಅದನ್ನು ಪೋಷಿಸಿ ಬೆಳೆಸಿಕೊಂಡರೆ ಎಲ್ಲ ಅವಕಾಶಗಳನ್ನು ನಮಗೆ ಅನುಕೂಲಕವಾಗುವ ರೀತಿಯಲ್ಲಿ ಪರಿವರ್ತಿಸಲು ಸಾಧ್ಯ. ಆತ್ಮಬಲವು ಎಂತಹ ಸಂದರ್ಭದಲ್ಲೂ ವ್ಯಕ್ತಿಯದೇಹ ಮತ್ತು ಮನಸ್ಸು ಕೇಂದ್ರಿಕೃತಗೊಳ್ಳಲು ಹಾಗೂ ಪ್ರೇರೇಪಣೆ ನೀಡುತ್ತದೆ. ಹಿಡಿದ ಕಾರ್ಯಕ್ಕೆ ತಕ್ಕಂತೆ ಪರಿಶ್ರಮ ಹಾಕುವಂತೆ ಶಕ್ತಿ ನೀಡಿ ಬುದ್ಧಿವಂತಿಕೆ ಹೆಚ್ಚಲು ಸ್ಪೂರ್ತಿ ನೀಡುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ಹಿಡಿದಿದ್ದನ್ನೇ ಸಾಧಿಸುವ ಹಠ ಹುಟ್ಟಿಸುತ್ತದೆ. ಇಟ್ಟ ಹೆಜ್ಜೆ ಹಿಂದೆಗೆಯದAತೆ, ಮುಂದಡಿಯಿಟ್ಟು ಅಂದುಕೊಂಡದ್ದನ್ನು ಆಗುವಂತೆ ಮತ್ತು ಸಾಧಿಸುವಂತಹ ಸಾಮರ್ಥ್ಯ ನೀಡುತ್ತದೆ. ಆದರೆಆರಂಭದಲ್ಲೇ ಇದೆಲ್ಲವೂ ನನ್ನಿಂದ ಸಾಧ್ಯವೇ? ಎಂಬ ಅನುಮಾನ, ಭಯ, ಆತಂಕ, ಅಂಜಿಕೆ, ಸೋತರೆ ಹೇಗೆ? ಮುಂದೇನು? ಮತ್ತೇನು ಎಂಬ ನಕಾರಾತ್ಮಕ ಭಾವ ಮನದಲ್ಲಿ ಮೂಡಿ ಅವರ ಸೋಲಿಗೆ ಅಥವಾ ಅಪಜಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಜೀವನದಲ್ಲಿ ಏನೇ ಎಂತಹ ಸವಾಲು ಮತ್ತು ಸಮಸ್ಯೆಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮಬಲ ಇರಬೇಕು. ಅಂಜಿಕೆ-ಅಳುಕುತ್ತಾ ಬದುಕುವುದಕ್ಕಿಂತ ಜೀವನದಲ್ಲಿ ಅರಳುತ್ತಾ ಬದುಕಬೇಕು. ಅಂದಾಗ ಮಾತ್ರಜೀವನದಲ್ಲಿ ಏನನ್ನಾದರೂ ಸಾಧಿಸಿ ಅರ್ಥಪೂರ್ಣ ಬದುಕು ನಡೆಸಲು ಸಾಧ್ಯವಾಗುತ್ತದೆ.

ಕೊನೆಯ ನುಡಿ: ಸರ್. ಎಂ. ವಿಶ್ವೇಶ್ವರಯ್ಯಅವರು “ದುಡಿ, ಮೈ ಮುರಿದುದುಡಿ, ಹೆಚ್ಚು ಹೆಚ್ಚಾಗಿ ದುಡಿ, ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ, ನಿಯಮವಿರಲಿ, ಗುರಿಯಿರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ. ಒಂದಿಲ್ಲೊಂದು ದಿನ ನೀನು ಸಾಧನೆಯ ಶಿಖರವನ್ನು ತಲುಪಬಲ್ಲೆ “ಎಂದು ಹೇಳಿದ್ದಾರೆ. ಜೀವನದಲ್ಲಿ ಗೆಲ್ಲುವವರು ಅಥವಾ ಸಾಧಿಸುವವರ ಪೈಕಿ ಹೆಚ್ಚಿನವರು ಗುರಿ ಹಾಗೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದವರೇ ಆಗಿರುತ್ತಾರೆ ಅಥವಾ ಗೆಲುವೆಂಬ ಹೋರಾಟದಲ್ಲಿ ತಮಗೆ ಎದುರಾಗುವ ಸವಾಲು, ಸಮಸ್ಯೆ ಮತ್ತು ಅಡ್ಡಿ-ಆತಂಕಗಳನ್ನು ತಮ್ಮಲ್ಲಿರುವ ಶಕ್ತಿ-ಸಾಮರ್ಥ್ಯಗಳೊಂದಿಗೆ ಸಮರ್ಥವಾಗಿ ಎದುರಿಸುತ್ತಾ ಮುಂದಡಿ ಇಡುತ್ತಾರೆ. ಅವರು ಈಗ ನಾವು ಎಲ್ಲಿದ್ದೇವೆ ಮತ್ತು ಮುಂದೆಎಲ್ಲಿಗೆ ಸಾಗಬೇಕಾಗಿದೆ ಎಂಬುದರತ್ತ ಲಕ್ಷ್ಯವಹಿಸುತ್ತಾರೆ. ಅಷ್ಟೇ ಅಲ್ಲದೇ ತಾವು ಎಲ್ಲಿಗೆ ತಲುಪಬೇಕಾಗಿದೆ ಎಂಬ ದಡ ಸೇರಲು ಹಗಲಿರುಳು ಪರಿಶ್ರಮ ವಹಿಸಿ, ಧನಾತ್ಮಕ ಚಿಂತನೆ ಮತ್ತುಗುರಿ ಸಾಧಿಸಬಲ್ಲೆನೆಂಬ ಆತ್ಮಸ್ಥೈರ್ಯದೊಂದಿಗೆ ಮುನ್ನಡೆದು ಯಶಸ್ಸು ಪಡೆಯುತ್ತಾರೆ. ಇನ್ನು ಕೆಲವರು ತಮ್ಮಲ್ಲಿ ಎಷ್ಟೇ ಶಕ್ತಿ-ಸಾಮರ್ಥ್ಯ ಮತ್ತು ಪ್ರತಿಭೆಯಿದ್ದರೂ ಯಾವುದೇ ಗೊತ್ತುಗುರಿ-ಯೋಜನೆ ಮತ್ತು ಸಾಧಿಸಬೇಕೆಂಬ ಛಲವಿಲ್ಲದೇ, ಏನಾದರೂ ಆಗಬೇಕೆಂದು ಅಂದು ಕೊಳ್ಳುವದರ ಬಗ್ಗೆಯೇ ಆತಂಕ, ಭಯ ಮತ್ತು ಮನಸ್ಸಿನಲ್ಲಿ ಕೀಳರಿಮೆ ಮನೋಭಾವ, ನನಗೆ ಸಾಧ್ಯವಿಲ್ಲ, ನನ್ನಿಂದ ಆಗದು, ಕೈಲಾಗದು ಎಂಬಂತಹ ಋಣಾತ್ಮಕ ಮನೋಧೋರಣೆಯನ್ನು ತಾಳುತ್ತಾ, ಜೀವನದಲ್ಲಿ ಏನನ್ನು ಸಾಧಿಸದೇ ತಮ್ಮ ಬದುಕಿನ ಅಮೂಲ್ಯವಾದ ಸಮಯವನ್ನೇ ವೃಥಾ ಹಾಳು ಮಾಡಿಕೊಳ್ಳುತ್ತಾರೆ ಮತ್ತು ನಿರಾಶಾವಾದಿಗಳಾಗುತ್ತಾರೆ. ಆದ್ದರಿಂದ ನಾನು ಏನನ್ನಾದರೂ ಮಾಡಬೇಕು, ಸಾಧಿಸಬೇಕುಅದಕ್ಕೆ ಪೂರಕವಾದಯೋಜನೆ, ಪೂರ್ವತಯಾರಿ, ರೂಪುರೇಷೆ, ಸಿದ್ಧತೆ ಮಾಡಿಕೊಳ್ಳಬೇಕು. ಸಾಧನೆಯ ಮಾರ್ಗದಲ್ಲಿ ಸಾಗುತ್ತಾ ನಿರಂತರ ಕಲಿಕೆ, ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸದೊಂದಿಗೆ ಹೆಜ್ಜೆಯಿಟ್ಟರೆ ಹಿಡಿದಕಾರ್ಯ ನೆರವೇರಲು ಅಥವಾ ಜಯ ಗಳಿಸಲು ಸುಲಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

-ಮಲ್ಲಪ್ಪ ಸಿ.ಖೊದ್ನಾಪೂರ (ತಿಕೋಟಾ)

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.