ಕರೋನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ

0

Gummata Nagari : Bangalore News

ಬೆಂಗಳೂರು : ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ದುರುದ್ದೇಶದಿಂದ ಕೊರೊನಾ ಟೆಸ್ಟ್‌ಗಳನ್ನು ಸರಿಯಾಗಿ ಮಾಡಲಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಆರೋಪಿಸಿದ್ದಾರೆ.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜಲಗಂಗಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಆರೋಗ್ಯ ಹಸ್ತ ಹಾಗೂ ಅರೋಗ್ಯ ಹಸ್ತ ಸ್ವಯಂ ಸೇವಕರುಗಳಿಗೆ ಕೋವಿಡ್‌ – ೧೯ ತಪಾಸಣೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೋನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಟೆಸ್ಟ್‌ಗಳನ್ನು ಹೆಚ್ಚು ಮಾಡಿದಲ್ಲಿ ಹೆಚ್ಚು ಜನರಿಗೆ ಕೋವಿಡ್‌ ಇರುವುದು ಗೊತ್ತಾಗುತ್ತದೆ. ಇದರಿಂದ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ದುರುದ್ದೇಶದಿಂದ ಟೆಸ್ಟ್‌ಗಳನ್ನು ಸರಿಯಾಗಿ ಮಾಡಲಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಆರೋಪಿಸಿದ್ದಾರೆ.

ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸಲು ಕೆಪಿಸಿಸಿ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಹಸ್ತ ವಿನೂತನ ಕಾರ್ಯಕ್ರಮ ಅಧಿಕಾರ ಇಲ್ಲದೇ ಇದ್ದರೂ ಕೂಡಾ ನಾವು ಜನರ ಮನೆ ಮನೆಗೆ ಹೋಗಿ ಟೆಸ್ಟ್‌ ಮಾಡುತ್ತಿದ್ದೇವೆ. ನಿರಂತರವಾಗಿ ಜನರ ಪರವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇವೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಈ ಸರಕಾರಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಆದರೆ, ನಮ್ಮ ಸಲಹೆಗಳನ್ನು ಗಣನೆಗೆ ತಗೆದುಕೊಳ್ಳದೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಕರೋನಾ ನಿರ್ವಹಣೆಯಲ್ಲಿ ವಿಫಲವಾಗಿದೆ. ಟೆಸ್ಟ್‌ಗಳ ಸಂಖ್ಯೆ ಹೆಚ್ಚಿಸುವಲ್ಲಿ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದರು.

ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯರಾದ ಬಿ.ಕೆ ಹರಿಪ್ರಸಾದ್‌ ಮಾತನಾಡಿ, ಅಮೇರಿಕಾ ದೇಶದಲ್ಲಿ 10 ಲಕ್ಷ ಜನರಲ್ಲಿ 1.15 ಲಕ್ಷ ಜನರಿಗೆ ಟೆಸ್ಟ್‌ ಮಾಡಲಾಗುತ್ತಿದ್ದರೆ, ಭಾರತದಲ್ಲಿ ಕೇವಲ 11 ಸಾವಿರ ಜನರಿಗೆ ಟೆಸ್ಟ್‌ ಮಾಡಲಾಗುತ್ತಿದೆ. ಬಡ ಜನರಿಗೆ ಟೆಸ್ಟ್‌ ದೊರಕದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಎಲ್ಲಾ ಸುರಕ್ಷತೆಗಳನ್ನು ತಗೆದುಕೊಂಡು ಜನರ ಟೆಸ್ಟ್‌ ಮಾಡಿ ಎಂದು ಸ್ವಯಂ ಸೇವಕರುಗಳಿಗೆ ಸಲಹೆ ನೀಡಿದರು.

ಮಲ್ಲೇಶ್ವರಂ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆಂಗಲ್‌ ಶ್ರೀಪಾದ ರೇಣು ಅವರು ಮಾತನಾಡಿ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 60 ಜನ ಸ್ವಯಂ ಸೇವಕರುಗಳು ಮನೆ ಮನೆಗೆ ತೆರಳಿ ಕೋವಿಡ್‌ – 19 ತಪಾಸಣೆಯನ್ನು ನಡೆಸಲಿದ್ದಾರೆ. ಇಂದು ಅವರಿಗೆ ಅಗತ್ಯ ತರಬೇತಿಯನ್ನು ವೈದ್ಯರು ನೀಡಲಿದ್ದಾರೆ. ಈ ತರಬೇತಿಯ ನಂತರ ಅಗತ್ಯವಿರುವ ಎಲ್ಲಾ ಜನರಿಗೂ ಸೇವೆಯನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಇದೇ ವೇಳೆ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ 2 ಲಕ್ಷ ರೂಪಾಯಿಗಳ ದೇಣಿಗೆಯನ್ನೂ ನೀಡಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.