ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಲಿ

ಸಿಎಂ ಮಗ, ಮೊಮ್ಮಗ ಸೇರಿ ಇಡೀ ಕುಟುಂಬವೇ ಭ್ರಷ್ಟಾಚಾರದಲ್ಲಿ ಭಾಗಿ: ಸಿದ್ದರಾಮಯ್ಯ ಆರೋಪ

0

‘ಹೋಂ ನನ್ನ ಕೈಯಲ್ಲಿದೆ’ ಎನ್ನುವ ಮೂಲಕ ಗೃಹ ಇಲಾಖೆಯನ್ನು , ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಮಾಧ್ಯಮ ಕ್ಷೇತ್ರವನ್ನು ತಮ್ಮ ಬೆರಳ ತುದಿಯಲ್ಲಿ ನಿಯಂತ್ರಿಸುವ ಅಪಾಯಕಾರಿ ಹಂತಕ್ಕೆ ಸೂಪರ್ ಸಿಎಂ ಇಳಿದಿರುವುದು ಭಾರತೀಯ ಜನತಾ ಪಕ್ಷದ ಹೊಸ ಆಡಳಿತ ವೈಖರಿ ಇದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Gummata Nagari : Bangalore News

ಬೆಂಗಳೂರು : ಮಗ, ಮೊಮ್ಮಗ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಇಡೀ ಹಗರಣದ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ವಿಶೇಷ ತನಿಖಾದಳವನ್ನು ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾ ಖಾವುಂಗಾ ನಾ ಖಾನೆ ದೂಂಗಾ’ ಎನ್ನುತ್ತಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಘೋಷಣೆಯನ್ನು ‘ಮೈ ಖಾವುಂಗಾ ಔರ್ ಖಾನೆ ದೂಂಗಾ ಎಂದು ತಕ್ಷಣ ಬದಲಾಯಿಸಿಕೊಳ್ಳುವುದು ಒಳಿತು. ಈ ಭ್ರಷ್ಟಾಚಾರದ ಹಣದಲ್ಲಿ ತನ್ನ ಪಾಲೆಷ್ಟು ಎನ್ನುವುದನ್ನು ಕೂಡಾ ನರೇಂದ್ರ ಮೋದಿಯವರು ತಿಳಿಸಬೇಕು ಎಂದು ಹೇಳಿದರು.

ಅವೈಜ್ಞಾನಿಕ ಜಿಎಸ್‌ಟಿ ಮೂಲಕ ದೇಶದ ಜನರನ್ನು ಲೂಟಿ ಮಾಡುತ್ತಿರುವ ನರೇಂದ್ರಮೋದಿಯವರ ಜೊತೆ ಪೈಪೋಟಿಗೆ ಇಳಿದಿರುವ ಬಿಎಸ್‌ವೈ ಅವರು ತನ್ನ ಮಗ ವಿಜಯೇಂದ್ರನ ಮೂಲಕ ವಿಎಸ್‌ಟಿ (ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್) ಮೂಲಕ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಮಗ ಮತ್ತು ಮೊಮ್ಮಗ ಸೇರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದಿರುವ ಕಾಮಗಾರಿಯಲ್ಲಿ ವರ್ಕ್ ಆರ್ಡರ್ ಕೊಡುವ ಹಂತದಲ್ಲಿ ಗುತ್ತಿಗೆದಾರರೊಬ್ಬರಿಂದ 17 ಕೋಟಿ ಹಣ ವಸೂಲಿಗೆ ಇಳಿದಿದ್ದು, ಈ ವ್ಯವಹಾರ ಕುದುರಿಸಿದ ಇಡೀ ಲಂಚಾವತಾರವನ್ನು ಮಾಧ್ಯಮ ಸಂಸ್ಥೆಯೊಂದು ಬಯಲಿಗೆಳೆದಿದೆ ಎಂದು ತಿಳಿಸಿದರು.

ರಾಜಾರೋಷವಾಗಿ ಹಣ ಒಂದೆಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆಯಾಗಿದೆ. ಒಂದು ಮೂಲದ ಮಾಹಿತಿಯ ಪ್ರಕಾರ ರಾಜ್ಯಗಳ ಗಡಿ ದಾಟಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿರುವ ಕಂಪೆನಿಗಳಲ್ಲಿ ಹಣ ಹೂಡಿಕೆಯಾಗಿದೆ. ಇದನ್ನು ಮನಿ ಲಾಂಡರಿಂಗ್ ಕಾಯ್ದೆಯಡಿ ತನಿಖೆಗೊಳಪಡಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಡೀ ಭ್ರಷ್ಟಾಚಾರದಲ್ಲಿ ಹಣ ಯಾರ ಕೈಲಿ ಕೊಡಬೇಕು? ಯಾರನ್ನು ಸಂಪರ್ಕಿಸಬೇಕು? ಎಲ್ಲಿ-ಎಷ್ಟೊತ್ತಿಗೆ ಸಂಪರ್ಕಿಸಬೇಕು? ಬಾಕಿ ಹಣವನ್ನು ಯಾವಾಗ, ಯಾವ ಖಾತೆಗೆ ವರ್ಗಾಯಿಸಬೇಕು ಎನ್ನುವುದನ್ನೆಲ್ಲಾ ವಾಟ್ಸಾಪ್ನಲ್ಲಿ ಚರ್ಚಿಸಿದ್ದಾರೆ. ಯಡಿಯೂರಪ್ಪ ಅವರ ಮೊಮ್ಮಗ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ ಎಂದು ಹೇಳಿದರು.

ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೊಡಲು ವಿಜಯೇಂದ್ರ ಹೆಸರಲ್ಲಿ ಬಿಡಿಎ ಕಮಿಷನರ್ ಪ್ರಕಾಶ್ ಗುತ್ತಿಗೆದಾರರಿಂದ ರೂ.12 ಕೋಟಿ ಕೇಳುತ್ತಾರೆ. ಈ ಹಣ 37 ಕ್ರೆಸೆಂಟ್ ಹೋಟೆಲಿನ ಮಾಲೀಕ ರವಿ ಎನ್ನುವವರ ಮೂಲಕ ಸಂದಾಯವಾಗಿದ್ದನ್ನು ವಿಜಯೆಂದ್ರ ಅವರೇ ಟಿವಿ ಚಾನೆಲ್‌ನ ಸ್ಟಿಂಗ್ ಆಪರೇಷನ್‌ನಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.

ಸಿಎಂ ಮತ್ತು ಸೂಪರ್ ಸಿಎಂ ಹೆಸರಲ್ಲಿ 12 ಕೋಟಿ ರೂಪಾಯಿ ಸಂದಾಯ ಆಗಿರುವುದನ್ನು ಒಪ್ಪಿಕೊಂಡ ಬಳಿಕವೂ ಆ ಐಎಎಸ್ ಅಧಿಕಾರಿ ಮತ್ತು ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸದಿರುವುದು, ಕ್ರಮ ಕೈಗೊಳ್ಳದಿರುವುದು, ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸದೆ ಆಶ್ರಯ ನೀಡಲಾಗಿದೆ ಎಂದು ದೂರಿದರು.

ಮೊದಲು ಸಂದಾಯವಾಗಿರುವ ರೂ.12 ಕೋಟಿ ತನ್ನ ಕೈಗೆ ಸಿಗದೆ ಅಧಿಕಾರಿ ಕೈಗೆ ಹೋಗಿದೆ. ಆದ್ದರಿಂದ ಒಂದೋ ಐಎಎಸ್ ಅಧಿಕಾರಿ ಕೈಯಿಂದ ಆ 12 ಕೋಟಿ ವಸೂಲಿ ಮಾಡಿ ಒಪ್ಪಿಸು, ಇಲ್ಲವೇ 12 ಕೋಟಿ ಜತೆಗೆ ಇನ್ನೂ 5 ಕೋಟಿ ಸೇರಿಸಿ ತಂದು ಕೊಡಬೇಕು. ಇಲ್ಲದಿದ್ದರೆ ಕೆಲಸ ನಿಲ್ಲಿಸು ವಿಜಯೇಂದ್ರ ಬೆದರಿಸಿದ್ದಾರೆ ಎಂದು ದೂರಿದರು.

ಎರಡನೇ ಹಂತದಲ್ಲಿ ಗುತ್ತಿಗೆದಾರರಿಂದ ವಿಎಸ್‌ಟಿ ಸಂಗ್ರಹಿಸಲು ಮುಂದಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಮತ್ತು ಗುತ್ತಿಗೆದಾರರ ನಡುವಿನ ವಾಟ್ಸಾಪ್ ಚಾಟ್ ಅನ್ನೂ ಮಾಧ್ಯಮ ಸಂಸ್ಥೆ ಬಹಿರಂಗಗೊಳಿಸಿದೆ ಎಂದು ಹೇಳಿದರು.

ಲಂಚದ ರೂ.7.4 ಕೋಟಿಯನ್ನು ತನ್ನ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಿಸಿಕೊಂಡ ಶಶಿಧರ್ ಮರಡಿ, ಉಳಿದ ನಗದು ಹಣವನ್ನು ಮುಖ್ಯಮಂತ್ರಿಗಳ ಅಳಿಯನಿಗೆ ಹುಬ್ಬಳ್ಳಿಯಲ್ಲಿ ತಲುಪಿಸುವಂತೆ ಹೇಳಿರುವ ವಾಟ್ಸಾಪ್ ಚಾಟ್ ವಿವರವನ್ನು ಟಿವಿ ಚಾನೆಲ್ ಬಹಿರಂಗಪಡಿಸಿದೆ. ಈ ಭ್ರಷ್ಟಾಚಾರವನ್ನು ಬಯಲಿಗೆಳೆದ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು ಮತ್ತು ಪತ್ರಕರ್ತರಿಗೆ ಜೀವ ಬೆದರಿಕೆಯೊಡ್ಡಲಾಗುತ್ತಿದೆ. ಕಂಗನಾ ರಣಾವತ್ ಎಂಬ ನಟಿಗೆ ಬೆದರಿಕೆ ಇದೆಯೆಂದು ‘ವೈ’ ದರ್ಜೆ ಭದ್ರತೆ ನೀಡಲಾಗುತ್ತದೆ. ಹಗರಣವನ್ನು ಬಯಲಿಗೆಳೆದ ಪತ್ರಕರ್ತರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಇದು ಪ್ರಜಾಪ್ರಭುತ್ವವೋ, ರಾಕ್ಷಸ ಪ್ರಭುತ್ವವೋ ಎಂದು ಪ್ರಶ್ನಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.