ಆಶ್ರಯ ಮನೆ ಕಾಮಗಾರಿ ಅಪೂರ್ಣ!
ದೇವರಹಿಪ್ಪರಗಿ ಪಟ್ಟಣದಲ್ಲಿ ಬಿಪಿಎಲ್ ಕುಟುಂಬಗಳ ಗೋಳು ಕೇಳುವವರಿಲ್ಲ
ದೇವರಹಿಪ್ಪರಗಿ : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರಕಾರ ಆಸರೆಗಾಗಿ ಆಶ್ರಯ ಮನೆಗಳನ್ನು ಮಂಜೂರು ಮಾಡಿದ್ದು, ಕಳೆದ ಎರಡುವರೆ ವರ್ಷದಿಂದ ಅರ್ಧ ಹಣ ಮಂಜೂರು ಮಾಡಿರುವುದರಿಂದ ಆಶ್ರಯ ಮನೆಗಳ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ.
2017-18ರಲ್ಲಿ ಪಟ್ಟಣ ಪಂಚಾಯಿತಿಗೆ ಸುಮಾರು 125 ಮನೆಗಳು ಮಂಜೂರಾಗಿದ್ದವು. ಶಾಸಕರ ಅಧ್ಯಕ್ಷತೆಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗಿದೆ. ಆಶ್ರಯ ಯೋಜನೆಯ ಫಲಾನುಭವಿಗಳು ಸರಕಾರದ ಮೇಲೆ ಬೆಟ್ಟದಷ್ಟು ಭರವಸೆಯಿಟ್ಟು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಪ್ರತಿಶತ 80 ರಷ್ಟು ಜನರಿಗೆ ಪೂರ್ತಿ ಕಂತುಗಳು ಪಾವತಿಯಾಗಿಲ್ಲ. ವಿವಿಧ ಅವಾಸ ಯೋಜನೆಯಡಿಯಲ್ಲಿ 1.50 ಲಕ್ಷ ಹಾಗೂ 1.70 ಲಕ್ಷ ರೂ. ಯಂತೆ ಒಟ್ಟು 2.70 ಲಕ್ಷ ರೂ. ಮೂರು ಕಂತುಗಳಲ್ಲಿ ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆಯಾಗಬೇಕಿತ್ತು. ಕಳೆದ ಎರಡುವರೆ ವರ್ಷಗಳಿಂದ ಹಣ ಬಾರದೆ ಮನೆಗಳನ್ನು ಅರ್ಧಮರ್ದ ಕಟ್ಟಿಕೊಂಡು ಕುಳಿತುಕೊಳ್ಳುವಂತಾಗಿದೆ. ಕೆಲವೊಬ್ಬರು ಸಾಲ ಸೋಲ ಮಾಡಿ ಮನೆ ಕಾಮಗಾರಿ ಪೂರ್ಣ ಮಾಡಿ ಕುಳಿತಿದ್ದಾರೆ.
ಪ್ರಧಾನಮಂತ್ರಿ ಅವಾಸ ಯೋಜನೆಯ ಮನೆಗಳಿಗೂ ಅನುದಾನವಿಲ್ಲ:
ಪಟ್ಟಣದಲ್ಲಿ ಸರಿ ಸುಮಾರು ಮೂರುನೂರು ರಷ್ಟು ಪ್ರಧಾನ ಮಂತ್ರಿ ಅವಾಸ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಈ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ಮನೆಗಳಿಗೂ ಇನ್ನೂ ಪೂರ್ಣ ಪ್ರಮಾಣದ ಅನುದಾನ ಬಂದಿಲ್ಲ. ಹೀಗಾಗಿ ಮನೆ ಕಟ್ಟಿಕೊಳ್ಳುವವರಿಗೆ ನಿರಾಶೆಯಾಗಿದೆ. ಸ್ವಂತ ಸೂರು ಹೊಂದಿ ನೆಮ್ಮದಿಯಿಂದ ಬದುಕು ಸಾಗಿಸಲು ಸರಕಾರದಿಂದ ಬರುವ ಸಹಾಯಧನ ಬಾರದೆ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಹೊಸ ಮನೆಗಳಿಗೆ ಪ್ರಸ್ತಾವನೆ:
ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಇವರ ವಿಶೇಷ ಆಸಕ್ತಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೂರಿಲ್ಲದವರಿಗೆ ಆಶ್ರಯ ಕಲ್ಪಿಸಲು ವಸತಿ ಸಚಿವರನ್ನು ಭೇಟಿ ಮಾಡಿ ಮನೆಗಳ ಮಂಜೂರಾತಿಗೆ ಕಳೆದ ಮಾರ್ಚನಲ್ಲಿಯೇ ಮನವಿ ಸಲ್ಲಿಸಿದ್ದಾರೆ. ಕೊರೊನಾ ಹಾವಳಿಯಲ್ಲಿ ಸರಕಾರದ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿರುವುದು ಸಂಕಷ್ಟ ತಂದಿದೆ. ವಸತಿ ಸಚಿವರು ಪ್ರತಿ ಗ್ರಾಮಪಂಚಾಯಿತಿಗೆ ಕನಿಷ್ಟ 20 ಮನೆಗಳನ್ನು ಮಂಜೂರು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಹಿಂದೆ ಮಂಜೂರಾದ ಮನೆಗಳ ಅನುದಾನವೂ ಬಿಡುಗಡೆಗೆ ಕಾದು ಕುಳಿತಂತಾಗಿದೆ.
ಆಶ್ರಯ ಮನೆಗಳ ಅನುದಾನ ನೀಡಲು ಫಲಾನುಭವಿಗಳ ಆಗ್ರಹ:
ಎರಡು ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಆಶ್ರಯ ಮನೆಗಳಿಗೆ ತಕ್ಷಣವೇ ಸಂಪೂರ್ಣ ಅನುದಾನ ಬಿಡುಗಡೆಗೊಳಿಸಿ ಅನುಕೂಲ ಮಾಡಿಕೊಡಬೇಕು. ಸೂರಿಲ್ಲದೆ ಅದೆಷ್ಟೋ ಕುಟುಂಬಗಳು ಇನ್ನೂ ಶೆಡ್ಗಳಲ್ಲಿ, ಪತ್ರಾಸ್ ಮನೆಗಳಲ್ಲಿ ವಾಸಿಸುತ್ತಿದ್ದು, ಸ್ವಂತ ಸೂರು ಹೊಂದುವಂತಾಗಲು ಸಹಕಾರ ನೀಡಬೇಕೆಂದು ಆಶ್ರಯ ಮನೆ ಫಲಾನುಭವಿಗಳ ಆಗ್ರಹವಾಗಿದೆ.