ಕಟಾವಿಗೆ ಬಂದಿದ್ದ ಬೆಳೆ ಕೊಳೆಯುವ ಸ್ಥಿತಿಯಲ್ಲಿ
ಮಳೆರಾಯಣ ಆರ್ಭಟ ರೈತರಿಗೆ ಪ್ರಾಣ ಸಂಕಟ
Gummata Nagari : Bagalkot News
ಬಾದಾಮಿ : ಕೋಟಿಕಲ್ ಹಾಗೂ ಮುರಡಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತ ಸಮುದಾಯ ಸೇರಿದಂತೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಪ್ರತಿ ಬಾರಿ ನೆರೆಯ ಕೃಷ್ಣಾ ತೀರಕ್ಕೆ ಪ್ರವಾಹ ಬಂದಾಗ ಸಂತ್ರಸ್ತರಿಗೆ ಆಶ್ರಯ ನೀಡುವ ಮೂಲಕ ಸಂತೈಸಿದ್ದ ಈ ಭಾಗದವರು ಈಗ ಹಸಿಬರದಿಂದ ಕಂಗಾಲಾಗಿದ್ದಾರೆ. ಸಹಾಯಕ್ಕೆ ಕೈಚಾಚಬೇಕಾದ ಸ್ಥಿತಿ ಬಂದೊದಗಿದೆ. ಮುಂಗಾರು ಮಳೆ ಹದವಾಗಿದ್ದರಿಂದ ಉತ್ತಮ ಫಸಲು ಬಂದಿತ್ತು ಆದರೆ ಈಗ ಸುರಿಯುತ್ತಿರುವ ಮಳೆ ಆ ಬೆಳೆಯನ್ನೆಲ್ಲ ಹಾಳು ಮಾಡಿದ್ದಲ್ಲದೆ ಅನ್ನದಾನನ್ನು ಸಂಕಷ್ಟಕ್ಕೀಡು ಮಾಡಿದೆ.
ಕಳೆದ ಒಂದು ವಾರ ಧಾರಾಕಾರವಾಗಿ ಸುರಿದ ಮಳೆಗೆ ಇಡೀ ಭೂಮಂಡಲವೇ ತುಂಬಿತೇನೊ ಎಂಬಂತೆ ಬತ್ತಿದ್ದ ಕೊಳವೆ ಬಾವಿಗಳು ಕೂಡ ಚಿಮ್ಮಲಾರಂಭಿಸಿದವು. ಒಂದೆರಡು ದಿನ ಸುಮ್ಮನಿದ್ದ ಮಳೆ ಮತ್ತೆ ಸೋಮವಾರದಿಂದ ಸುರಿಯಲಾರಂಭಿಸಿದ್ದು ಕೆಲ ಕಾಲ ಕಾಣುವ ಸೂರ್ಯನನ್ನು ಕಂಡು ಖುಷಿ ಪಡುವಷ್ಟರಲ್ಲಿಯೇ, ಮತ್ತೆ ಮಳೆ ಆರಂಭವಾಗಿದೆ. ಕೃಷಿಯನ್ನು ನಂಬಿದ ಕೂಲಿಕಾರರಿಗೂ ಕೆಲಸವಿಲ್ಲ. ನಗರದಲ್ಲಿ ವ್ಯಾಪಾರ ವಹಿವಾಟು ಕೂಡ ಸ್ಥಗಿತಗೊಂಡಂತೆ ಭಾಸವಾಗುತ್ತಿದೆ.
ರೈತಾಪಿ ವರ್ಗದ ಮುಂಗಾರಿನ ಪ್ರಮುಖ ಬೆಳೆಗಳಾದ ಗೋವಿನ ಜೋಳ ಕಟಾವಾಗದೇ ಹೊಲದಲ್ಲಿಯೇ ಒಣಗಿದೆ. ಅಲ್ಲಿ ಕಾಲಿಟ್ಟು ಕಟಾವು ಮಾಡದಷ್ಟು ಮಳೆ ನೀರು ನಿಂತಿದೆ. ಇದರಿಂದ ಜಾನುವಾರುಗಳು ಮೇವಿನ ಕೊರತೆ ಎದುರಿಸುತ್ತಿವೆ. ನದಿ ತೀರದಲ್ಲಿ ಪ್ರವಾಹದ ಭೀತಿ ಆರಂಭವಾಗಿದೆ. ಬಹಳಷ್ಟು ರಸ್ತೆಗಳು ಮಳೆಯ ಪರಿಣಾಮದಿಂದ ತನ್ನ ಅಸ್ತಿತ್ವ ಕಳೆದುಕೊಂಡು, ಚರಂಡಿ ಹಾಗೂ ಕಾಲುವೆಗಳಾಗಿ ಮಾರ್ಪಾಡಾಗಿವೆ ಎಂದು ರೈತರಾದ ಬಸವ್ವ ಮೇದಾರ, ನಾಗಪ್ಪ ಮುರುಗೋಡ, ಗುಂಡಪ್ಪ ಕೋಟಿ ಹೇಳಿದರು.
ವರದಿ – ನಾಗರತ್ನಾ ದಾಟನಾಳ
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..